ಬಂಧನ (ಪ್ರಾತಿನಿಧಿಕ ಚಿತ್ರ)
ಮಡಿಕೇರಿ: ಜಿಲ್ಲೆಯ ಹೆಬ್ಬಾಲೆ ಗ್ರಾಮದ ರಾಜ್ಯ ಹೆದ್ದಾರಿ – 91ರಲ್ಲಿ ಫೆ. 2ರಂದು ಬೆಳಿಗ್ಗೆ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರಿನ ಚಾಲಕ ಶನಿವಾರಸಂತೆ ಸಮೀಪದ ಹುಲಸೆ ಗ್ರಾಮದ ಶಿರಂಗಾಲ ನಿವಾಸಿ ಎಂ.ಎಂ.ರಜಾಕ್ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಅಂದು ಮುಲ್ಕಿ ಮೂಲದ ಫೆಲಿಕ್ಸ್ ಡಿಸೋಜಾ ಎಂಬುವವರಿಗೆ ಡಿಕ್ಕಿ ಹೊಡೆದು ಕಾರು ನಿಲ್ಲಿಸದೇ ಪರಾರಿಯಾಗಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಫೆಲಿಕ್ಸ್ ಡಿಸೋಜಾ ಮೃತಪಟ್ಟಿದ್ದರು. ಬಳಿಕ, ಪರಾರಿಯಾದ ಕಾರಿನ ಪತ್ತೆಗೆ ಪೊಲೀಸರು ತಂಡ ರಚಿಸಿದ್ದರು.
ಸೋಮವಾರಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಇನ್‌ಸ್ಪೆಕ್ಟರ್‌ಗಳಾದ ಬಿ.ಜಿ.ಕುಮಾರ್, ಕುಸುಮಾ ಅವರ ನೇತೃತ್ವದ ತಂಡ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅತಿ ವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು, ವಾಹನ ಚಾಲನೆ ಮಾಡುವಾಗ ಸ್ಟಂಟ್ ಮಾಡುವ ಭಾವಚಿತ್ರ ಅಥವಾ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿದ್ದರೆ 112ಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಕೂಡಲೇ ಗಮನಕ್ಕೆ ತರಬೇಕು. ಮಾಹಿತಿ ನೀಡುವವರು ವಿವರಗಳನ್ನು ಯಾವುದೇ ಕಾರಣಕ್ಕೂ ಬಹಿರಂಗಪಡಿಸುವುದಿಲ್ಲ. ಎಲ್ಲರೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.