ADVERTISEMENT

ನುಡಿದಂತೆ ನಡೆದ ಜಿಲ್ಲಾಧಿಕಾರಿ; ಶ್ಲಾಘನೆ

ಗೋಣಿಕೊಪ್ಪಲು ಪೌರಕಾರ್ಮಿಕರ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:24 IST
Last Updated 2 ಜನವರಿ 2026, 6:24 IST
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವಿವಿಧ ವಿಷಯಗಳನ್ನು ಕುರಿತು ಮಡಿಕೇರಿಯಲ್ಲಿ ಸಭೆ ನಡೆಸಿದರು
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ವಿವಿಧ ವಿಷಯಗಳನ್ನು ಕುರಿತು ಮಡಿಕೇರಿಯಲ್ಲಿ ಸಭೆ ನಡೆಸಿದರು   

ಮಡಿಕೇರಿ: ಗೋಣಿಕೊಪ್ಪಲಿನ ಪೌರಕಾರ್ಮಿಕರು ಚರಂಡಿ ಬದಿಯಲ್ಲಿ ವಾಸಿಸುತ್ತಾರೆ ಎಂದು ಹಿಂದಿನ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರು ಪೌರಕಾರ್ಮಿಕರಿಗೆ ಜಾಗ ಗುರುತಿಸಿ ನುಡಿದಂತೆ ನಡೆದಿದ್ದಾರೆ ಎಂದು  ಕರ್ನಾಟಕ ರಾಜ್ಯದ ಪೌರಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಶ್ಲಾಘಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇಲ್ಲಿ ನಡೆಸಿದ ಸಫಾಯಿ ಕರ್ಮಚಾರಿಗಳ ಮ್ಯಾನ್ಯುವೆಲ್ ಸ್ಕ್ಯಾವೆಂಜರ್‌ಗಳ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಗುರುತಿಸಿರುವ ಜಾಗಕ್ಕೆ ಶೀಘ್ರ ಹಕ್ಕುಪತ್ರ ನೀಡುವಂತಾಗಬೇಕು. ಜಿಲ್ಲೆಯಲ್ಲಿನ ಹೊರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡಬೇಕು. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು  ಅವರು ಮನವಿ ಮಾಡಿದರು.

ADVERTISEMENT

ಗೋಣಿಕೊಪ್ಪಲುವಿನಲ್ಲಿ 25-30 ಪೌರಕಾರ್ಮಿಕ ಕುಟುಂಬ ಇರುವುದರಿಂದ ಎಲ್ಲರಿಗೂ ಹಕ್ಕು ಪತ್ರ ನೀಡಬೇಕು ಎಂದು ಕೋರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಪ್ಪಣ್ಣ, ಕಂದಾಯ ಜಾಗದಲ್ಲಿ 25 ಕುಟುಂಬಗಳಿದ್ದು, ಅವರಿಗೆ ಹಕ್ಕು ಪತ್ರ ನೀಡಲು ಕ್ರಮ ವಹಿಸಲಾಗುವುದು ಎಂದರು.‌

ಸದಸ್ಯ ರಂಗಸ್ವಾಮಿ ಮಾತನಾಡಿ, ‘ಜಿಲ್ಲೆಯ ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ನಿರ್ವಹಣೆಯನ್ನು ಸ್ಥಳೀಯ ಪೌರಕಾರ್ಮಿಕರಿಗೆ ಆದ್ಯತೆ ಮೇಲೆ ನೀಡಬೇಕು ಎಂದು ಮನವಿ ಮಾಡಿದರು.

ಸದಸ್ಯರಾದ ವಿಜಯ್ ಕುಮಾರ್, ಪರಮೇಶ್ ಇತರರು ಪೌರಕಾರ್ಮಿಕರ ಕುಂದುಕೊರತೆ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿ ಸಾಧಿಸಲು ಸೂಚನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನಾ ಕಾರ್ಯಕ್ರಮ ಪ್ರಗತಿ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾರ್ಯಕ್ರಮಗಳ ಪ್ರಗತಿ ಸಾಧಿಸುವಂತೆ ಸೂಚಿಸಿದರು.

ವಿವಿಧ ಇಲಾಖೆಗಳು ನಿಗದಿ ಮಾಡಿರುವ ಶೇಕಡಾವಾರು ಪ್ರಗತಿ ಸಾಧನೆಗೆ ಸೂಚಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ನಿವೇಶನ ಕೊಟ್ಟು ಮನೆ ನಿರ್ಮಿಸಿಕೊಡಿ

ಅನುಸೂಚಿತ ಜಾತಿ, ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ರಚಿಸಲಾಗಿರುವ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಎಚ್.ಎಸ್.ಮುತ್ತಪ್ಪ ಅವರು ಮಾತನಾಡಿ 2018 ಮತ್ತು 2019 ರಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ನಿವೇಶನ ಒದಗಿಸಿ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶೇಖರ್, ಸದಸ್ಯರಾದ ಜಾಯ್ಸ್ ಮೆನೇಜಸ್, ಪಿ.ಪಿ.ಸುಕುಮಾರ್, ಜನಾರ್ಧನ ಜೆ.ಎಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.