ADVERTISEMENT

ಮಡಿಕೇರಿ: ಗಾಂಧಿ ಸ್ಮಾರಕಕ್ಕೆ ದೊರಕದ ಅನುದಾನ

ಸರ್ಕಾರಕ್ಕೆ ಸಲ್ಲಿಕೆಯಾಗಿದೆ ಪ್ರಸ್ತಾವ, ಬಿಡುಗಡೆಯಾಗದ ಹಣ, ಅರ್ಧಕ್ಕೆ ನಿಂತ ಕಾಮಗಾರಿ

ಕೆ.ಎಸ್.ಗಿರೀಶ್
Published 30 ಜನವರಿ 2026, 7:26 IST
Last Updated 30 ಜನವರಿ 2026, 7:26 IST
ಮಡಿಕೇರಿಯಲ್ಲಿ ಅರ್ಧಕ್ಕೆ ನಿಂತಿರುವ ಗಾಂಧಿ ಸ್ಮಾರಕ ಭವನ ಕಾಮಗಾರಿ
ಮಡಿಕೇರಿಯಲ್ಲಿ ಅರ್ಧಕ್ಕೆ ನಿಂತಿರುವ ಗಾಂಧಿ ಸ್ಮಾರಕ ಭವನ ಕಾಮಗಾರಿ   

ಮಡಿಕೇರಿ: ಇಂದಿಗೂ ಗಾಂಧೀಜಿ ಅವರ ಚಿತಾಭಸ್ಮ ಜಿಲ್ಲಾ ಖಜಾನೆಯಲ್ಲೇ ಇದ್ದು, ಸ್ಮಾರಕ ನಿರ್ಮಾಣ ದೂರವೇ ಉಳಿದಿದೆ.

ಕಳೆದ ವರ್ಷ ₹ 50 ಲಕ್ಷ ಅನುದಾನದಲ್ಲಿ ಸ್ಮಾರಕ ನಿರ್ಮಾಣ ಆರಂಭವಾದಾಗ, ಚಿತಾಭಸ್ಮದ ಮೆರವಣಿಗೆ ಕೊನೆಯ ಬಾರಿಗೆ ಎಂದೇ ಹೇಳಲಾಗಿತ್ತು. ಆದರೆ, ಹಣ ಸಾಲದಾಗಿ ಮತ್ತೆ ₹ 58 ಲಕ್ಷ ಕೋರಿ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಸ್ಪಂದನೆ ದೊರಕಿಲ್ಲ. 

ಈಗ ಕಟ್ಟಿರುವ ಕಟ್ಟಡದ ಮುಂದೆ ಉದ್ಯಾನ, ಕಾಂಪೌಂಡ್, ಸ್ವಾಗತ ಕಮಾನು, ಕಾವಲುಗಾರರ ಕೊಠಡಿ ಸೇರಿ ಹಲವು ಕಾಮಗಾರಿಗಳು ನಡೆಯಬೇಕಿದ್ದು, ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೆಚ್ಚುವರಿ ಅನುದಾನ ಕೋರಿದೆ. ಅನುದಾನ ಬಿಡುಗಡೆಯಾದರೆ ಕಾಮಗಾರಿ ಮುಂದುವರಿಸಲಾಗುವುದು ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅನುದಾನ ಮಂಜೂರಾಗಿತ್ತು. ಅದು ಬಿಡುಗಡೆಯಾಗಲು ಹಲವು ವರ್ಷಗಳೇ ಹಿಡಿದಿತ್ತು.

ADVERTISEMENT

ಮಹಾತ್ಮ ಗಾಂಧೀಜಿಯವರಿಗೂ ಕೊಡಗಿಗೂ ನಿಕಟ ಸಂಬಂಧ ಇತ್ತು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ದೆಹಲಿಯಲ್ಲಿ ಬಹದ್ದೂರ್‌ ಷಾ ದೊರೆಯನ್ನು ಗಡಿಪಾರು ಮಾಡಿದಂತೆಯೇ ಕೊಡಗಿನ ಕೊನೆಯ ಅರಸು ಚಿಕ್ಕವೀರರಾಜೇಂದ್ರ ಅವರನ್ನೂ ಬ್ರಿಟಿಷರು ಇಂಗ್ಲೆಂಡ್‌ಗೆ ಗಡಿಪಾರು ಮಾಡಿ ಕೊಡಗನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆ ಇಲ್ಲಿ ಸ್ವಾತಂತ್ರ್ಯ ಚಳವಳಿ ಹುಟ್ಟಲು ಕಾರಣವಾಯಿತು ಎಂದು ಇತಿಹಾಸಕಾರರು ದಾಖಲಿಸುತ್ತಾರೆ. 1934ರಲ್ಲಿ ಮಹಾತ್ಮ ಗಾಂಧೀಜಿ ಕೊಡಗಿನ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದರು. ಅವರ ಚಿತಾಭಸ್ಮವನ್ನೂ ಜಿಲ್ಲೆಗೆ ತರಲಾಗಿತ್ತು. ಅದನ್ನು ಜಿಲ್ಲಾ ಖಜಾನೆಯಲ್ಲಿ ಸಂರಕ್ಷಿಸಿಡಲಾಗಿದೆ. 

ಪ್ರತಿ ವರ್ಷ ಹುತಾತ್ಮರ ದಿನಾಚರಣೆಯಂದು ಅದನ್ನು ಮಡಿಕೇರಿ ನಗರದಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಸರ್ವ ಧರ್ಮ ಪ್ರಾರ್ಥನೆಯ ಮೂಲಕ ಗಾಂಧೀಜಿ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ.

ಸೈರನ್ ಪರಂಪರೆ ಮುಂದುವರಿಯಲಿ: ಈ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸರ್ವೋದಯ ಸಮಿತಿಯೂ ಹೆಚ್ಚಿನ ಶ್ರಮ ವಹಿಸಿದೆ. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೂ ಪಾಲ್ಗೊಳ್ಳುತ್ತಾರೆ. ‘ಹಿಂದೆ ಮೆರವಣಿಗೆ ವೇಳೆ ನಗರದಲ್ಲಿ ಸೈರನ್ ಮೊಳಗುತ್ತಿತ್ತು. ಆಗ ಜನರೆಲ್ಲರೂ ನಿಂತು ಗೌರವ ಸೂಚಿಸುತ್ತಿದ್ದರು’ ಎಂದು ಹಿರಿಯರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ಆದರೆ, ಈಗ ಸೈರನ್ ಮೊಳಗುತ್ತಿಲ್ಲ. ಈ ಸೈರನ್ ಮೊಳಗಿಸುವ ಪರಂಪರೆ ಮತ್ತೆ ಮುಂದುವರಿಯಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಶಾಸಕ ಡಾ.ಮಂತರ್‌ಗೌಡ ಅವರೂ ತಮ್ಮ ಶಾಸಕರ ನಿಧಿಯಿಂದ ₹ 20 ಲಕ್ಷ ನೀಡಲಿದ್ದು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವದ ಹಣವೂ ಬಿಡುಗಡೆಯಾಗುವ ವಿಶ್ವಾಸ ಇದೆ
ಟಿ.ಪಿ.ರಮೇಶ್ ಸರ್ವೋದಯ ಸಮಿತಿಯ ಮಾಜಿ ಅಧ್ಯಕ್ಷ.

ಹುತಾತ್ಮರ ದಿನ ಇಂದು

ಮಡಿಕೇರಿ: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಹುತಾತ್ಮರ ದಿನ ಪ್ರಯುಕ್ತ ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಜ. 30ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಖಜಾನೆ ಕಚೇರಿಯಿಂದ ಮೆರವಣಿಗೆಯಲ್ಲಿ ಪೊಲೀಸ್ ಗೌರವ ರಕ್ಷೆಯೊಂದಿಗೆ ತೆಗೆದುಕೊಂಡು ಹೋಗಿ ಗಾಂಧಿ ಮಂಟಪದ ಆವರಣದಲ್ಲಿ ಇರಿಸಿ ಬೆಳಿಗ್ಗೆ 10.30ಕ್ಕೆ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.