ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಕನಿಷ್ಠ ತಾಪಮಾನ ಮತ್ತೊಮ್ಮೆ 12 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಅಕ್ಷರಶಃ ಜನರು ಥರಗುಟ್ಟಿದರು. ಒಟ್ಟು 3 ಬಾರಿ ತಿಂಗಳಲ್ಲಿ ಕನಿಷ್ಠ ತಾಪಮಾನ 12 ಡಿಗ್ರಿ ದಾಖಲಾಗಿದೆ.
ಗುರುವಾರ ಬೆಳಿಗ್ಗೆ ದಟ್ಟವಾಗಿ ಕವಿದಿದ್ದ ಮಂಜು, ತುಸು ಬಲವಾಗಿಯೇ ಬೀಸುತ್ತಿದ್ದ ಶೀತಗಾಳಿಯಿಂದ ಜನರು ನಡುಗಿದರು. ದಿನಪತ್ರಿಕೆ ಹಾಕುವವರು, ವಾಯುವಿಹಾರಿಗಳು ನಡುಗುತ್ತಲೇ ಹೆಜ್ಜೆ ಹಾಕಿದರು.
ಬಿಸಿಲು ಸಹ ಕೊಂಚ ತಡವಾಗಿಯೆ ಕಾಣಿಸಿಕೊಂಡಿತು. ಶಾಲಾ ಮಕ್ಕಳೂ ಸ್ವೆಟರ್ ಧರಿಸಿ, ನಡುಗುತ್ತಲೇ ಶಾಲೆಗೆ ಸಾಗಿದ ದೃಶ್ಯಗಳು ಕಂಡು ಬಂದವು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೈಸೂರಿನ ನಾಗನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ಗ್ರಾಮೀಣ ಕೃಷಿ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ.ಸುಮಂತಕುಮಾರ್, ‘ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆಗೆ ಶೀತಗಾಳಿ ಬೀಸುತ್ತಿರುವುದರಿಂದ ಚಳಿ ಹೆಚ್ಚಾಗಿದೆ. ಆದರೆ, ದಕ್ಷಿಣ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದು, ಶ್ರೀಲಂಕಾ ಕರಾವಳಿಗೆ ತಲುಪುವ ನಿರೀಕ್ಷೆ ಇದೆ. ಇದರ ಪ್ರಭಾವದಿಂದ ಉತ್ತರ ಭಾರತ ಕಡೆಯಿಂದ ದಕ್ಷಿಣದ ಕಡೆಗೆ ಈಗ ಬೀಸುತ್ತಿರುವ ಶೀತ ಗಾಳಿಯು ಕಡಿಮೆಯಾಗಿ ಬಂಗಾಳಕೊಲ್ಲಿಯ ಕಡೆಯಿಂದ ಗಾಳಿ ಬೀಸಲು ಆರಂಭವಾಗುವ ಸಾಧ್ಯತೆಗಳಿವೆ’ ಎಂದು ಹೇಳಿದರು.
ಇದರಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಕಡಿಮೆಯಾಗಿ, ಅಲ್ಲಲ್ಲಿ ಮೋಡದ ವಾತಾವರಣ ಉಂಟಾಗುವ ಮುನ್ಸೂಚನೆ ಇದೆ. ಈಗಿನಂತೆ ಜ. 12ರಿಂದ 2 ದಿನಗಳ ಕಾಲ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ ಎಂದು ತಿಳಿಸಿದರು.
ಪ್ರಸಕ್ತ ಚಳಿಗಾಲದಲ್ಲಿ ಡಿ. 16ರಂದು ಹಾಗೂ ಜ. 5ರಂದು ಸಹ ತಾಪಮಾನ 12ಕ್ಕೆ ಕಡಿಮೆಯಾಗಿತ್ತು. ನಂತರ ತುಸು ಚೇತರಿಕೆ ಕಂಡಿದ್ದ ಕನಿಷ್ಠ ತಾಪಮಾನ 15ರವರೆಗೂ ಏರಿಕೆ ಕಂಡಿತ್ತು. ಆದರೆ, ಗುರುವಾರ ಮತ್ತೆ 12ಕ್ಕೆ ಕುಸಿದಿದೆ.
ಹಗಲಿನ ವೇಳೆ ಬಿರು ಬಿಸಿಲಿದ್ದರೂ ಚಳಿಯ ಪ್ರಭಾವ ಕಡಿಮೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಇನ್ನಷ್ಟು ಚಳಿ ಹೆಚ್ಚಬಹುದು ಎಂಬ ದಿಗಿಲು ಜನರಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.