ADVERTISEMENT

ಸೋಮವಾರಪೇಟೆಯಲ್ಲಿ ಬಸ್‌ಗಳಿಗೆ ಬರ!

ಇಲ್ಲಿರುವ ನಿಲ್ದಾಣದಲ್ಲೂ ಸೌಕರ್ಯಗಳಿಲ್ಲ, ಸಮಸ್ಯೆಗಳ ಆಗರ ಸೋಮವಾರಪೇಟೆ

ಲೋಕೇಶ್ ಡಿ.ಪಿ
Published 16 ಜೂನ್ 2025, 7:19 IST
Last Updated 16 ಜೂನ್ 2025, 7:19 IST
ಸೋಮವಾರಪೇಟೆಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ದುಃಸ್ಥಿತಿ
ಸೋಮವಾರಪೇಟೆಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ದುಃಸ್ಥಿತಿ   

ಸೋಮವಾರಪೇಟೆ: ಸಮರ್ಪಕವಾಗಿರದ ಬಸ್‌ನಿಲ್ದಾಣಗಳು, ಬಸ್‌ಗಳ ಕೊರೆತ ಇದು ತಾಲ್ಲೂಕಿನ ಸದ್ಯದ ಸ್ಥಿತಿ.

ಇಲ್ಲಿನ ನಿಲ್ದಾಣವೂ ಕೊರತೆಗಳ ಆಗರವಾಗಿದೆ. ಪ್ರಯಾಣಿಕರಿಗೆ ಬೇಕಾದ ಮೂಲಸೌಕರ್ಯಗೂ ಇಲ್ಲಿಲ್ಲ. ಈ ಬಸ್‌ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ಕೊಡಗು ಚಿಕ್ಕ ಜಿಲ್ಲೆಯಾದರೂ ಇಲ್ಲಿರುವ 5 ತಾಲ್ಲೂಕುಗಳಿಗೂ, ಎಲ್ಲ ಗ್ರಾಮಕ್ಕೂ ಸಂಪರ್ಕ ಬೆಸೆಯುವಂತಹ ವ್ಯವಸ್ಥಿತವಾದ ಕೆಎಸ್‌ಆರ್‌ಟಿಸಿ ಬಸ್‌ಗಳೇ ಇಲ್ಲ.  ಅದರಲ್ಲೂ ಸೋಮವಾರಪೇಟೆ ತಾಲ್ಲೂಕು ಈ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿದೆ.

ADVERTISEMENT

ಇ‌ಲ್ಲಿ ಅನೇಕ ಪ್ರವಾಸಿ ತಾಣಗಳಿದ್ದರೂ ಸಮರ್ಪಕ ಬಸ್‌ಗಳ ಸೌಲಭ್ಯ ಇಲ್ಲ. ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಯಂತು ಇಲ್ಲವೇ ಇಲ್ಲ. ಇದರಿಂದ ಪ್ರವಾಸಿಗರು ಪರದಾಡುವಂತಾಗಿದೆ.

ಇನ್ನು ಮಡಿಕೇರಿ ಡಿಪೊದಿಂದ ಸಂಚರಿಸುತ್ತಿರುವ ಕೆಎಸ್‌ಆರ್‌ಟಿಸಿ ಬಸ್‌ಗಳ ಹೇಳತೀರದು. ಅವು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ತೀರಾ ದುಃಸ್ಥಿತಿಯಲ್ಲಿ ಇರುವ ಬಸ್‌ಗಳು ತಾಲ್ಲೂಕಿನ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿವೆ. ತಾಲ್ಲೂಕು ಕೇಂದ್ರದಿಂದ ಮಡಿಕೇರಿಗೆ ಬೆಳಿಗ್ಗೆ 6 ಗಂಟೆ, 9.45ಕ್ಕೆ ಬಿಟ್ಟರೆ 10ಕ್ಕೆ ಒಂದೊಂದು ಬಸ್ ಸಂಚಾರ ಇದೆ. ಅದು ಬಿಟ್ಟರೆ, ಇನ್ನು ಸಂಜೆ 4 ಗಂಟೆಗೆ. ಈ ಬಸ್‌ಗಳನ್ನು ನಂಬಿಕೊಂಡು ಶಾಲಾ–ಕಾಲೇಜಿನ ವಿದ್ಯಾರ್ಥಿಗಳು ಹಾಗೂ ನೌಕರರು ಸಂಚರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ.

ಹಲವು ವರ್ಷಗಳಿಂದ ಈ ಮಾರ್ಗವಾಗಿ ಯಾವುದೇ ಹೊಸ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಿಲ್ಲ. ಕೋವಿಡ್ 19ರ ನಂತರ ಹಲವು ಖಾಸಗಿ ಬಸ್ ಸಂಚಾರ ಬಂದ್ ಆಗಿದೆ. ಜನರು ಗ್ರಾಮೀಣ ಭಾಗದಿಂದ ಸಂಚರಿಸಲು ಪರದಾಡುವಂತಾಗಿದೆ.

ತುರ್ತಾಗಿ ಸೋಮವಾರಪೇಟೆ ಮೂಲಕ ಗ್ರಾಮೀಣ ಸಾರಿಗೆ ಪ್ರಾರಂಭಿಸಬೇಕು. ಕೊಡ್ಲಿಪೇಟೆಯಿಂದ ಕುಶಾಲನಗರ ಮತ್ತು ಮಡಿಕೇರಿಗೆ 4 ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಬೆಳಿಗ್ಗೆ 8.30ಕ್ಕೆ ಸೋಮವಾರಪೇಟೆಯಿಂದ ಕೊಡ್ಲಿಪೇಟೆಗೆ, ಹಾಗೂ ಸೋಮವಾರಪೇಟೆಯಿಂದ ಮಡಿಕೇರಿಗೆ, ಮಧ್ಯಾಹ್ನ 12ಕ್ಕೆ ಪಟ್ಟಣದಿಂದ ಮಡಿಕೇರಿಗೆ ಹಾಗೂ ಮಧ್ಯಾಹ್ನ 3ಕ್ಕೆ ಮಡಿಕೇರಿಗೆ ತೆರಳುವಂತೆ ಸಾರಿಗೆ ಸಂಪರ್ಕ ಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.

ಸಂಚಾರ ನಿಯಂತ್ರಕರು ಏನಂತಾರೆ:

ಸಂಚಾರ ನಿಲ್ಲಿಸಿದ್ದ ಯಾವುದೇ ಬಸ್‌ಗಳು ಸಂಚಾರ ಆರಂಭ ಮಾಡಿಲ್ಲ. ಸೋಮವಾರಪೇಟೆ ಬಸ್ ನಿಲ್ದಾಣದ ಮೂಲಕ ರಾಜ್ಯದ ವಿವಿಧೆಡೆಗಳಿಗೆ 82 ಬಸ್‌ಗಳು ಬಂದು ಹೋಗುತ್ತಿವೆ. ಇರುವ ಮಾರ್ಗದಲ್ಲಿಯೇ ಕೆಲವೊಂದು ಬಸ್‌ಗಳು ಸರಿಯಾಗಿ ಬಾರದೆ, ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಮಾರ್ಗ ಸಂಖ್ಯೆ 31ರಲ್ಲಿ ಮಂಡ್ಯ ವಿಭಾಗದ ಬಸ್ ಮದ್ದೂರಿನಿಂದ ಸೋಮವಾರಪೇಟೆಗೆ ಬಂದು ಹೊಗುತ್ತಿತ್ತು. ಅದು ಬರುತ್ತಿಲ್ಲ. ಮಾರ್ಗ ಸಂಖ್ಯೆ 6263 ಧರ್ಮಸ್ಥಳಕ್ಕೆ ವಾರಕ್ಕೆ ಕೇವಲ 3 ದಿನ ಮಾತ್ರ ಬಂದು ಹೋಗುತ್ತಿದೆ. 93 ಕೆ.ಆರ್.ನಗರ ಡಿಪೊ ಬಸ್ ಸಂಜೆ 6ಕ್ಕೆ ಬಂದು 6-30ಕ್ಕೆ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು ಅದೂ ಬರುತ್ತಿಲ್ಲ. ಚಾಮರಾಜನಗರ ಡಿಪೊದ 5253 ಮಾರ್ಗದ ಬಸ್ ರಾತ್ರಿ ಬಂದು ಇಲ್ಲಿ ತಂಗಿದ್ದು, ಬೆಳಿಗ್ಗೆ 7ಕ್ಕೆ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಈಗ ಅದು ವಾರಕ್ಕೆ 3 ದಿನಗಳಿಗೆ ಸೀಮಿತವಾಗಿದೆ.

ದೊಡ್ಡಬಳ್ಳಾಪುರದಿದ ಮಡಿಕೇರಿಗೆ 8182 ಮಾರ್ಗದ ಬಸ್ ವಾರಕ್ಕೆ ಕೇವಲ 3 ದಿನಗಳು ಮಾತ್ರ ಬಂದು ಹೋಗುತ್ತಿದೆ. ಕೆಜಿಎಫ್ ಮಾರ್ಗ 9293 ಮಾರ್ಗದ ಬಸ್ ಸರಿಯಾಗಿ ಬರುತ್ತಿಲ್ಲ. ರಾಮನಾಥ ಡಿಪೊದ 37 ಮಾರ್ಗದ ಬಸ್ ರಾಮನಾಥಪುರದಿಂದ ಇಲ್ಲಿಗೆ ಬಂದು ಹೊಳೆನರಸಿಪುರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ವಾರಕ್ಕೆ 3 ದಿನಕ್ಕೆ ಸೀಮಿತವಾಗಿದೆ ಎಂದು ಸಂಚಾರ ನಿಯಂತ್ರಕ ಪರಮೇಶ್ ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಬಸ್‌ಗಳ ಕೊರತೆ ಹೆಚ್ಚಿರುವುದು
ಸೋಮವಾರಪೇಟೆಯ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ದುಃಸ್ಥಿತಿ

ಸಂಜೆಯ ನಂತರ ಇಲ್ಲ ಬಸ್‌ ಸೌಲಭ್ಯ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಬಸ್‌ನಿಲ್ದಾಣವನ್ನು ಮೇಲ್ದರ್ಜೇಗೇರಿಸಲು ಒತ್ತಾಯ

ಸರಿಯಾದ ಸಮಯಕ್ಕೆ ಬಸ್ ಸಂಚಾರ ಇಲ್ಲದಿರುವುದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಬಸ್ ಬಾರದಿದ್ದಲ್ಲಿ ಶಾಲಾ ಕಾಲೇಜಿಗೆ ರಜೆ ಹಾಕುವ ಪರಿಸ್ಥಿತಿ ಇದೆ
ತಾನ್ಯ ವಿದ್ಯಾರ್ಥಿನಿ

ಇವರು ಹೀಗಂತಾರೆ..

ಸೋಮವಾರಪೇಟೆಗೆ ಬೇಕಿದೆ ಬಸ್ ಡಿಪೊ ಸೋಮವಾರಪೇಟೆಗೆ ಒಂದು ಬಸ್ ಡಿಪೊ ಮಾಡಿದರೆ ಬಸ್ ಸಮಸ್ಯೆ ಸ್ವಲ್ಪವಾದರೂ ಕಡಿಮೆಯಾಗುತ್ತಿತ್ತು. ಇರುವ ಬಸ್ ಮಾರ್ಗಗಳನ್ನೂ ಅಧಿಕಾರಿಗಳು ಏಕಾಏಕಿ ನಿಲ್ಲಿಸುತ್ತಿದ್ದಾರೆ. ರಜಾ ದಿನಗಳಲ್ಲಿ ಇರುವ ಖಾಸಗಿ ಬಸ್‌ಗಳು ಕೆಲವು ಸಂಚಾರ ನಿಲ್ಲಿಸುತ್ತವೆ. ಇದರಿಂದಾಗಿ ಜನರು ಬಂದು ಹೋಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಟ್ಯೂಷನ್ ಮತ್ತು ವಿಶೇಷ ತರಗತಿಗಳಿದ್ದಾಗ ಬರಲು ಸಾಧ್ಯವಾಗುತ್ತಿಲ್ಲ.

–ಸುರೇಶ್ ಶೆಟ್ಟಿ

ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಇಲ್ಲಗಳ ತಾಣ ನಿಲ್ದಾಣ ಸೋಮವಾರಪೇಟೆ ತಾಲ್ಲೂಕು ಕೇಂದ್ರವಾದರೂ ಇಲ್ಲಿನ ಬಸ್ ನಿಲ್ದಾಣದಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ. ಶುದ್ಧ ಕುಡಿಯುವ ನೀರಿನ ಹೆಸರಿನಲ್ಲಿ ಅಶುದ್ಧ ನೀರು ಕುಡಿಯುವಂತಾಗಿದೆ. ಶೌಚಾಲಯ ವ್ಯವಸ್ಥಿತವಾಗಿಲ್ಲ. ಕೆಲವು ಸಂದರ್ಭಗಳಲ್ಲಿ ಸಮರ್ಪಕವಾಗಿ ನೀರು ಸಿಗುವುದಿಲ್ಲ. ಸುತ್ತಲೂ ಬೆಳಕಿನ ವ್ಯವಸ್ಥೆ ಇಲ್ಲ. ಇಲ್ಲಗಳ ತಾಣ ಈ ನಿಲ್ದಾಣ.

–ಕೆ.ಎನ್. ದೀಪಕ್ ಕರವೇ ಜಿಲ್ಲಾ ಘಟಕ ಅಧ್ಯಕ್ಷ

ಸಮಸ್ಯೆಗಳ ಮಹಾಪೂರ ಸೋಮವಾರಪೇಟೆ ಬಸ್‌ನಿಲ್ದಾಣದಲ್ಲಿ ಸಮಸ್ಯೆಗಳ ಮಹಾಪೂರವೇ ಇದೆ. ಎರಡು ಬಾರಿ ಬಸ್ ನಿಲ್ದಾಣವನ್ನು ಹೈಟೆಕ್ ಹೆಸರಿನಲ್ಲಿ ನವೀಕರಿಸಿದರೂ ಹಣ ವ್ಯರ್ಥವಾಗಿದ್ದು ಬಿಟ್ಟರೆ  ಜನರಿಗೆ ಯಾವುದೇ ಅನುಕೂಲಗಳು ಸಿಗಲಿಲ್ಲ. ಹೆಚ್ಚು ಜನರು ಬಂದಲ್ಲಿ ಸರಿಯಾಗಿ ಕೂರಲು ವ್ಯವಸ್ಥೆಗಳಿಲ್ಲ. ಅಂಗಡಿ ಹೋಟೆಲ್‌ಗಳು ಮುಚ್ಚಿ ವರ್ಷಗಳೇ ಕಳೆದರೂ ಅವುಗಳನ್ನು ಪ್ರಾರಂಭಿಸಲು ಮುಂದಾಗದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಕೂಡಲೇ ಎಲ್ಲ ವ್ಯವಸ್ಥೆ ಕಲ್ಪಿಸಬೇಕಿದೆ.

–ಕೆ.ಎಂ.ದಿನೇಶ್ ಅಧ್ಯಕ್ಷ ರೈತ ಸಂಘ ತಾಲ್ಲೂಕು ಘಟಕ

ಸಂಜೆ ಬಸ್ ವ್ಯವಸ್ಥೆ ಕಲ್ಪಿಸಿ ಸೋಮವಾರಪೇಟೆಯಲ್ಲಿ ಸಂಜೆಯಾಗುತ್ತಲೇ ಇತರೆಡೆ ತೆರಳಲು ಬಸ್ ಸೌಕರ್ಯಗಳಿಲ್ಲ. ಸಂಜೆ ಕುಶಾಲನಗರ ಮತ್ತು ಮಡಿಕೇರಿಗೆ ತೆರಳಲು 7 ಗಂಟೆಯ ನಂತರ ಬಸ್ ವ್ಯವಸ್ಥೆಯಾಗಬೇಕು. ಸರಿಯಾದ ಬಸ್ ಸೌಕರ್ಯ ಇಲ್ಲದೆ ಇಲ್ಲಿಗೆ ಬಂದು ಹೋಗಲು ಜನರು ಹಿಂದೇಟು ಹಾಕುತ್ತಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಸಂಪರ್ಕಿಸಲು ಸೂಕ್ತ ಬಸ್ ವ್ಯವಸ್ಥೆ ಮಾಡಬೇಕಿದೆ.

–ಗೌತಮ್ ಸಮಾಜ ಸೇವಕ ಕಿರಗಂದೂರು ಗ್ರಾಮ

ಬಸ್‌ ವ್ಯವಸ್ಥೆ ಮಾಡಿಲ್ಲ ಸೋಮವಾರಪೇಟೆಯ ಹೆಚ್ಚಿನ ಗ್ರಾಮಗಳು ಇಂದಿಗೂ ಬಸ್ ಸಂಚಾರ ಕಂಡಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರು ಬಂದು ಹೋಗಲು ಸಮಸ್ಯೆಯಾಗಿದ್ದು ಇದರ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಬಸ್ ವ್ಯವಸ್ಥೆ ಮಾಡಲು ಅಧಿಕಾರಿಗಳು ಮುಂದಾಗಿಲ್ಲ. –ಮಧುಸೂದನ್ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.