ಮಡಿಕೇರಿ: ಸಿಇಟಿ ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ತೊಂದರೆಗೆ ಒಳಗಾದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಕಾರರು ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ಈ ವೇಳೆ ಮಾತನಾಡಿದ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಸಿ.ರಾಮಮಚಂದ್ರ ಮುಗೂರು, ‘ಪವಿತ್ರವಾದ ಜನಿವಾರ ತೆಗೆಸುವುದು ಎಂದರೆ ಅದು ಹಿಂದೂ ಧರ್ಮಕ್ಕೆ ಕೊಡಲಿ ಪೆಟ್ಟು ನೀಡಿದಂತೆ ಎಂಬುದನ್ನು ಯಾರೂ ಮರೆಯಬಾರದು. ಜನಿವಾರ ಉಳಿದರಷ್ಟೇ ಹಿಂದೂ ಧರ್ಮ ಉಳಿಯುತ್ತದೆ ಎಂಬುದನ್ನೂ ಮರೆಯಬಾರದು’ ಎಂದು ಹೇಳಿದರು.
ಕಾರ್ಯದರ್ಶಿ ಬಿ.ಕೆ.ಜಗದೀಶ್ ಮಾತನಾಡಿ, ‘ಶಾಂತಿಗೆ, ಸೌಹಾರ್ದತೆಯೇ ಬ್ರಾಹ್ಮಣ ಸಮುದಾಯದ ಮೊದಲ ಆದ್ಯತೆ. ಆದರೆ, ಅದೇ ನಮ್ಮ ದೌರ್ಬಲ್ಯ ಎಂದು ಭಾವಿಸುವುದು ಸರಿಯಲ್ಲ’ ಎಂದರು.
ಮಾಜಿ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ‘ಜನಿವಾರ ತೆಗೆಸಿದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದರು. ಮಾತ್ರವಲ್ಲ, ಜನಿವಾರವನ್ನು ಅಲುಗಾಡಿಸಿದರೆ ಅದು ಸನಾತನ ಭಾರತವನ್ನೇ ಅಲುಗಾಡಿಸಿದಂತೆ ಎಂಬುದನ್ನು ಯಾರೂ ಮರೆಯಬಾರದು ಎಂದರು.
ನಂತರ, ಪ್ರತಿಭಟನಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಉಪಾಧ್ಯಕ್ಷ ಕೆ.ಎಸ್.ರಾಜಶೇಖರ, ಖಜಾಂಚಿ ರವಿಶಂಕರ್, ನಿರ್ದೇಶಕರಾದ ಭರತೇಶ್ ಖಂಡಿಗೆ, ಶಿವಶಂಕರ್, ಪುರುಷೋತ್ತಮ, ಬಿ.ಕೆ.ಅರುಣ್ ಕುಮಾರ್, ಲಲಿತಾ ರಾಘವನ್, ಮಂಜುಳಾ ರಾಮಕೃಷ್ಣ, ಸವಿತಾ ಭಟ್, ಮುಖಂಡರಾದ ಸಂಪತ್ ಕುಮಾರ್, ಸಂಜೀವ ಜೋಶ್, ರಮೇಶ್ ಹೊಳ್ಳ, ಸುಬ್ರಮಣ್ಯ ಹೊಳ್ಳ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.