ADVERTISEMENT

ಸೋಮವಾರಪೇಟೆ: ಕೋಲ ಪೂಜೆ ವೇಳೆ ಗಲಾಟೆ– ಮೂವರಿಗೆ ಗುಂಡೇಟು 

ಸೋಮವಾರಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 14:27 IST
Last Updated 11 ಏಪ್ರಿಲ್ 2022, 14:27 IST
   

ಸೋಮವಾರಪೇಟೆ (ಕೊಡಗು): ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ಐದು ಕುಟುಂಬಸ್ಥರು ಸೇರಿ ನಡೆಸುವ ಕೋಲ ಪೂಜೆಯ ವೇಳೆ ಕುಟುಂಬಸ್ಥರ ನಡುವೆಯೇ ನಡೆದ ಗಲಾಟೆಯು, ಸೋಮವಾರ ಸಂಜೆ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬರು ರಿವಾಲ್ವಾರ್‌ನಿಂದ ಗುಂಡು ಹಾರಿಸಿದ್ದು ಮೂವರು ಗಾಯಗೊಂಡಿದ್ದಾರೆ.

12 ವರ್ಷಗಳ ಬಳಿಕ ಗ್ರಾಮದಲ್ಲಿ ಈ ಪೂಜೆ ಆಯೋಜಿಸಲಾಗಿತ್ತು. ಪೂಜೆಯ ವೇಳೆ ನಡೆದ ಗಲಾಟೆಯಲ್ಲಿ ಕೆಲವರು ವೀರೇಶ್ ಎಂಬುವರ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ. ಆಗ ವೀರೇಶ್‌ ಹಾರಿಸಿದ ಗುಂಡೇಟಿಗೆ ಕುಟುಂಬ ಮಹೇಶ್, ನಂದೀಶ್, ಚಂದ್ರಶೇಖರ್ ಗಾಯಗೊಂಡಿದ್ದಾರೆ.

ಮಹೇಶ್ ಅವರಿಗೆ ಸೊಂಟದ ಕೆಳಭಾಗಕ್ಕೆ ಗುಂಡೇಟು ತಗುಲಿದೆ. ಮತ್ತಿಬ್ಬರ ಕೈಗೆ ಗುಂಡೇಟು ತಗುಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿಯ ಮೇಲೂ ಹಲ್ಲೆಯ ಗಾಯಗಳಾಗಿವೆ. ಗುಂಡೇಟು ತಗುಲಿದ ಮೂವರನ್ನೂ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ADVERTISEMENT

ತೆರೆ ಕಟ್ಟುವ ಹಾಗೂ ಹಣದ ವಿಚಾರದಲ್ಲಿ ವೀರೇಶ್‌ ಮತ್ತಿತರ ನಡುವೆ ನಡುವೆ ಗಲಾಟೆ ನಡೆದಿದ್ದು ಘಟನೆಗೆ ಕಾರಣವಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ವೀರೇಶ್ ಏಕಾಏಕಿ ರಿವಾಲ್ವರ್‌ನಿಂದ ಗುಂಡು ಹಾರಿಸಿದರು ಎಂದು ಗಾಯಾಳು ಚಂದ್ರಶೇಖರ್ ಆರೋಪಿಸಿದ್ದಾರೆ.ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.