ADVERTISEMENT

ಕುಶಾಲನಗರ: ಹುಲಿ ಸೆರೆಗೆ ಬೋನ್ ಅಳವಡಿಕೆ

ಎಡವನಾಡು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 8 ಮೇ 2021, 15:19 IST
Last Updated 8 ಮೇ 2021, 15:19 IST
ಕುಶಾಲನಗರ ಸಮೀಪದ ಅರೆಯೂರು ಈರಪ್ಪ ಅವರ ಕಾಫಿ ತೋಟದಲ್ಲಿ ಹುಲಿ ಸೆರೆಗೆ ಬೋನ್ ಅಳವಡಿಸಿರುವುದು
ಕುಶಾಲನಗರ ಸಮೀಪದ ಅರೆಯೂರು ಈರಪ್ಪ ಅವರ ಕಾಫಿ ತೋಟದಲ್ಲಿ ಹುಲಿ ಸೆರೆಗೆ ಬೋನ್ ಅಳವಡಿಸಿರುವುದು   

ಕುಶಾಲನಗರ: ಸೋಮವಾರಪೇಟೆ ತಾಲ್ಲೂಕಿನ ಎಡವನಾಡು ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಹುದುಗೂರು ಹಾಗೂ ಅರೆಯೂರು ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಯಲಕನೂರು, ಅರೆಯೂರು ವ್ಯಾಪ್ತಿಯಲ್ಲಿ ಒಂದು ವಾರದಿಂದ ಹುಲಿಯ ಹೆಜ್ಜೆ ಗುರುತು ಕಂಡುಬಂದಿದೆ.

ಈಚೆಗೆ ಅರೆಯೂರು ಗ್ರಾಮದ ಸಿ.ಎನ್.ಈರಪ್ಪ ಎಂಬವರ ಕಾಫಿ ತೋಟದ ಕೊಟ್ಟಗೆಯಲ್ಲಿ ಕಟ್ಟಲಾಗಿದ್ದ ಎತ್ತನ್ನು ಹುಲಿ ಎಳೆದುಕೊಂಡು ಹೋಗಿ ಸಮೀಪದ ಮೀಸಲು ಅರಣ್ಯದಲ್ಲಿ ತಿಂದು ಹೋಗಿತ್ತು.

ADVERTISEMENT

ಸೋಮವಾರಪೇಟೆ ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಶಮಾ ಸೇರಿದಂತೆ ಹುದುಗೂರು ಮತ್ತು ಬಾಣವಾರ ಉಪ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಸಿ.ಎನ್.ಈರಪ್ಪ ಅವರು ವಿಷಯವನ್ನು ಶಾಸಕ ಅಪ್ಪಚ್ಚು ರಂಜನ್ ಅವರ ಗಮನಕ್ಕೆ ತಂದಿದ್ದರು.

ಹುಲಿ ಸೆರೆಗೆ ಬೋನ್ ಅಳವಡಿಸುವಂತೆ ತಾಲ್ಲೂಕು ಅರಣ್ಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ ಮೇರೆಗೆ ಅರೆಯೂರು ಮೀಸಲು ಪ್ರದೇಶ ಅಂಚಿನ ಈರಪ್ಪ ಅವರ ಕಾಫಿ ತೋಟದಲ್ಲಿ ಬೋನ್‌ ಇಡಲಾಗಿದೆ. ಬೋನ್‌ ಒಳಗೆ ನಾಯಿಯನ್ನು ಕಟ್ಟಲಾಗುತ್ತಿದೆ.

ಅರೆಯೂರು ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮ. ಕಳೆದ ವಾರ ಹುದುಗೂರು ಸಮೀಪದ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ನೋಡಿ ಈ ವ್ಯಾಪ್ತಿಯ ರೈತರು ಮತ್ತು ಹಾಡಿಯ ಜನರು ಭಯಭೀತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.