ADVERTISEMENT

ಗೋಣಿಕೊಪ್ಪಲು: ಉರುಳಿಗೆ ಸಿಲುಕಿ ಹುಲಿ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 13:37 IST
Last Updated 18 ಮಾರ್ಚ್ 2019, 13:37 IST
   

ಗೋಣಿಕೊಪ್ಪಲು: ಕಾಫಿ ತೋಟದ ಬೇಲಿಗೆ ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸಿಲುಕಿ ಹುಲಿಯೊಂದು ಮೃತಪಟ್ಟಿರುವ ಘಟನೆ ಹರಿಹರದಲ್ಲಿ ನಡೆದಿದೆ.

ಇನ್ನೂ ತಾಯಿಯಿಂದ ಬೇರ್ಪಡದ ಅಂದಾಜು 6ರಿಂದ 8 ತಿಂಗಳು ಪ್ರಾಯದ ಗಂಡು ಹುಲಿ ನಾಗರಹೊಳೆ ಅರಣ್ಯದಂಚಿನಲ್ಲಿರುವ ಕಾಫಿ ತೋಟಕ್ಕೆ ತಾಯಿಯೊಂದಿಗೆ ಬಂದಿದೆ. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ಬಾಚೀರ ಕುಶಾಲಪ್ಪ ಅವರ ಕಾಫಿ ತೋಟದ ಬೇಲಿಗೆ ಹಂದಿ ಬೇಟೆಯಾಡಲು ಹಾಕಿದ್ದ ತಂತಿಯ ಉರುಳಿಗೆ ಸಿಕ್ಕಿಕೊಂಡಿದೆ. ಕೊರಳಿಗೆ ಬಿಗಿದ ಉರುಳನ್ನು ಬಿಡಿಸಿಕೊಳ್ಳಲಾಗದೆ ಹುಲಿ ಮರಿ ಭಾನುವಾರ ರಾತ್ರಿ ಸ್ಥಳದಲ್ಲಿಯೇ ಮೃತಪಟ್ಟಿದೆ.

2 ವರ್ಷಗಳ ಹಿಂದೆ ದುಷ್ಕರ್ಮಿಗಳು ಇದೇ ರೀತಿ ವನ್ಯ ಜೀವಿಗಳ ಬೇಟೆಗೆ ಅರಣ್ಯದಂಚಿನ ಕಾಫಿ ತೋಟದ ಬೇಲಿಗೆ ಹಾಕಿದ್ದ ತಂತಿ ಉರುಳಿಗೆ ಸಿಕ್ಕಿಕೊಂಡು 5 ಹುಲಿಗಳು ಮೃತಪಟ್ಟಿದ್ದವು. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ನಾಲ್ವರನ್ನು ಜೈಲಿಗೆ ಕಳುಹಿಸಿದ್ದರು.

ADVERTISEMENT

ನಾಗರಹೊಳೆ ಸುತ್ತಮುತ್ತಲಿನ ಕಾಫಿ ತೋಟದಂಚಿನಲ್ಲಿ ಹಾಕಿದ್ದ ಸಾವಿರಾರು ಉರುಳನ್ನು ಪತ್ತೆ ಹಚ್ಚಿ ಅವುಗಳನ್ನು ತೆರವುಗೊಳಿಸಿದ್ದರು. ಕಳೆದ ವರ್ಷ ಇಂತಹ ಯಾವುದೇ ಪ್ರಕರಣ ಪತ್ತೆಯಾಗಿರಲಿಲ್ಲ. ಇದೀಗ ಇಂತಹ ಘಟನೆ ಮತ್ತೆ ಶುರುವಾಗಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿನ ರಾಷ್ಟ್ರೀಯ ಪ್ರಾಣಿ ಹುಲಿ ಈ ರೀತಿ ಸಾವಿಗೀಡಾಗುತ್ತಿರುವುದು ವನ್ಯಜೀವಿ ಪ್ರಿಯರು ಹಾಗೂ ಅರಣ್ಯಾಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.

ವನ್ಯಜೀವಿಗಳ ಪ್ರಾಣಕ್ಕೆ ಕಂಟಕವಾಗಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.