ADVERTISEMENT

ಕೃಷಿ ಕ್ಷೇತ್ರ: ಟಿಪ್ಪು ಕೊಡುಗೆ ಅಪಾರ

ಉಪನ್ಯಾಸಕ ಚಟ್ನಳ್ಳಿ ಮಹೇಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2018, 8:12 IST
Last Updated 10 ನವೆಂಬರ್ 2018, 8:12 IST
ಮಡಿಕೇರಿಯಲ್ಲಿ ಶನಿವಾರ ನಡೆದ ಟಿಪ್ಪು ಜಯಂತಿಗೆ ಗಿಡಕ್ಕೆ ನೀರು ಹಾಕುವ ಮೂಲಕ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಉದ್ಘಾಟಿಸಿದರು
ಮಡಿಕೇರಿಯಲ್ಲಿ ಶನಿವಾರ ನಡೆದ ಟಿಪ್ಪು ಜಯಂತಿಗೆ ಗಿಡಕ್ಕೆ ನೀರು ಹಾಕುವ ಮೂಲಕ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಉದ್ಘಾಟಿಸಿದರು   

ಮಡಿಕೇರಿ: ‘ಟಿಪ್ಪು ಸುಲ್ತಾನ್ ಅಪ್ರತಿಮ ದೇಶಭಕ್ತ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ್ದೇ ಟಿಪ್ಪು ಸುಲ್ತಾನ್; ಮೂರು ಸಾರಿ ಬ್ರಿಟಿಷ್‌ ಜತೆಗೆ ಯುದ್ಧ ಮಾಡಿದ್ದರು’ ಎಂದು ವಾಗ್ಮಿ ಚಟ್ನಳ್ಳಿ ಮಹೇಶ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಹಜರತ್ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.

ಅಂದಿನ ಮೈಸೂರು ರಾಜ್ಯದ ಅಭಿವೃದ್ಧಿಗೆ ಟಿಪ್ಪು ಸುಲ್ತಾನ್ ದೂರದೃಷ್ಟಿ ಹೊಂದಿದ್ದರು. ಆ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ರೈತರ ಸಂಕಷ್ಟ ನಿವಾರಿಸಲು ರೇಷ್ಮೆ ಬೆಳೆ ಪರಿಚಯಿಸಿದರು ಎಂದೂ ನುಡಿದರು.

ADVERTISEMENT

'ಇಂದಿನ ಕೃಷ್ಣರಾಜ ಸಾಗರ (ಕೆಆರ್‌ಎಸ್) ನಿರ್ಮಾಣಕ್ಕೆ 1794ರಲ್ಲಿ ಶಂಕುಸ್ಥಾಪನೆ ಮಾಡಿದ್ದು ಹಾಗೂ ರೇಷ್ಮೆ ಪರಿಚಯಿಸಿದ ಕೀರ್ತಿ ಟಿಪ್ಪು ಸುಲ್ತಾನ್‌ಗೆ ಸಲ್ಲುತ್ತದೆ. ಹಾಗೆಯೇ ನೂರಾರು ಕೆರೆಗಳನ್ನು ನಿರ್ಮಿಸಿ ಕುಡಿಯುವ ನೀರು ಮತ್ತು ಕೃಷಿಗೆ ಆದ್ಯತೆ ನೀಡಿದ್ದರು’ ಎಂದು ಹೇಳಿದರು.

ಟಿಪ್ಪು ಪಾಳೆಗಾರಿಕೆ ಮತ್ತು ಉಳಿಗಮಾನ್ಯ ಪದ್ಧತಿಯನ್ನು ವಿರೋಧಿಸುತ್ತಿದ್ದರು. ಕೃಷಿ ವಾಣಿಜ್ಯೀಕರಣ ಜೊತೆಗೆ ಶೇ 100 ಪಾನ ನಿಷೇಧ ಮಾಡಿದ್ದರು. ಬಡ್ಡಿ ರಹಿತ ಸಾಲ, ಕೃಷಿ ಮಾರುಕಟ್ಟೆ ವ್ಯವಸ್ಥೆಯನ್ನು ಟಿಪ್ಪು ಸುಲ್ತಾನ್ ಕಾಲದಲ್ಲಿಯೇ ಕಾಣಬಹುದು ಎಂದು ಹೇಳಿದರು.

ರಾಷ್ಟ್ರದ ಹೈದರಾಬಾದ್‌ನ ನಿಜಾಮರು ಸೇರಿದಂತೆ ಹಲವರು ಬ್ರಿಟಿಷರ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಂಡು ರಾಜ್ಯಭಾರ ಮಾಡುತ್ತಿದ್ದರು. ಆದರೆ, ಟಿಪ್ಪು ಇದಕ್ಕೆ ವಿರುದ್ಧವಾಗಿದ್ದ, ದೇಶದಲ್ಲಿ ತಳವೂರಲು ಪ್ರಯತ್ನಿಸುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ, ಜೊತೆಗೆ ರಾಕೆಟ್ ಕ್ಷಿಪಣಿ ನಿರ್ಮಾಣ ಮಾಡಿದ್ದರು ಎಂದು ಅವರು ಹೇಳಿದರು.

ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಉಳುವವನೇ ಹೊಲದೊಡೆಯ ಎಂಬುದನ್ನು ಪ್ರಥಮ ಬಾರಿಗೆ ಸಾರಿದ್ದರು. ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು ಎಂದೂ ಬಣ್ಣಿಸಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ, ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್, ಜಗದೀಶ್, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.