ADVERTISEMENT

ಕಟ್ಟೆಚ್ಚರದಿಂದಿರಲು ಮುಖ್ಯಮಂತ್ರಿ ಸೂಚನೆ

ಮಲೆನಾಡು, ಕರಾವಳಿ ಭಾಗದಲ್ಲಿ ಮುಂದಿನ 10 ದಿನ ಭಾರಿ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 16:32 IST
Last Updated 2 ಆಗಸ್ಟ್ 2022, 16:32 IST

ಮಡಿಕೇರಿ: ಮುಂದಿನ 10 ದಿನಗಳ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದ್ದು, ಭೂಕುಸಿತ ಪ್ರದೇಶಗಳಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರೊಂದಿಗೆ ಮಂಗಳವಾರ ವಿಡಿಯೊ ಸಂವಾದ ನಡೆಸಿದ ಅವರು ಅಪಾಯಕಾರಿ ಸ್ಥಳಗಳಲ್ಲಿ ವಿಶೇಷ ನಿಗಾ ವಹಿಸಬೇಕು,ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಎಂದು ನಿರ್ದೇಶನ ನೀಡಿದರು.

‘ಮನೆ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ವಿತರಿಸಬೇಕು. ಸಂತ್ರಸ್ತರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಗಮನಹರಿಸಬೇಕು, ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದರು.

ADVERTISEMENT

ಈ ವೇಳೆ ಜಿಲ್ಲಾಡಳಿತ ಭವನದ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮಾಹಿತಿ ಕೇಳಿದರು.

‘ತಡೆಗೋಡೆಗೆ ಸದ್ಯ ಮರಳು ಮೂಟೆಗಳನ್ನು ಅಳವಡಿಸಲಾಗಿದ್ದು, ಲಘು ವಾಹನ ಸಂಚಾರಕ್ಕೆ ಅವಕಾಶ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ವಿವರಿಸಿದರು.

‘ಕಳೆದ 24 ಗಂಟೆ ಅವಧಿಯಲ್ಲಿ ಸಂಪಾಜೆ ಮತ್ತು ಕರಿಕೆ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಕೊಯನಾಡು ಬಳಿ 5 ಮನೆ ಮತ್ತು ಸಂಪಾಜೆ ಬಳಿ 2 ಮನೆಗಳಿಗೆ ಹಾನಿಯಾಗಿದ್ದು, 12 ಕಡೆ ಮಣ್ಣು ಕುಸಿತ ಉಂಟಾಗಿದೆ. ಸದ್ಯ, ಮನೆ ಹಾನಿಯಾಗಿರುವುದಕ್ಕೆ ತಲಾ ₹ 10 ಸಾವಿರ ಪರಿಹಾರ ವಿತರಿಸಲಾಗಿದೆ’ ಎಂದರು.

‘ಸದ್ಯ, ಕಾಳಜಿ ಕೇಂದ್ರದಲ್ಲಿ 5 ಕುಟುಂಬದ 21 ಜನರು ಇದ್ದಾರೆ. ಸಂಬಂಧಿಕರ ಮನೆಯಲ್ಲಿರುವವರಿಗೂ ಸಹ ಆಹಾರ ಕಿಟ್ ವಿತರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಆಯೋಗದ ಆಯುಕ್ತರಾದ ಡಾ.ಮನೋಜ್ ರಾಜನ್ ಮಾತನಾಡಿ, ‘ಮುಂದಿನ ಒಂದು ವಾರ ಕಾಲ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಭೂಕುಸಿತ ಪ್ರದೇಶಗಳಲ್ಲಿನ ಜನರಿಗೆ ಮಾಹಿತಿ ನೀಡಿ, ಸ್ಥಳಾಂತರಿಸಬೇಕು. ಸಹಾಯವಾಣಿ ಕೇಂದ್ರಗಳು ಸಂಪರ್ಕದಲ್ಲಿರಬೇಕು. ಎಸ್‍ಡಿಆರ್‌ಎಫ್, ಎನ್‍ಡಿಆರ್‌ಎಫ್ ಹಾಗೂ ಅಧಿಕಾರಿಗಳ ತಂಡಗಳು ಎಚ್ಚರದಿಂದಿರಬೇಕು’ ಎಂದು ತಿಳಿಸಿದರು

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.