ADVERTISEMENT

ಕುಶಾಲನಗರದಲ್ಲಿ ಇಂದು ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2023, 6:24 IST
Last Updated 3 ಫೆಬ್ರುವರಿ 2023, 6:24 IST
ಕುಶಾಲನಗರ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಗುರುವಾರ ಕನ್ನಡದ ತೋರಣ ಕಟ್ಟಲಾಯಿತು
ಕುಶಾಲನಗರ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಗುರುವಾರ ಕನ್ನಡದ ತೋರಣ ಕಟ್ಟಲಾಯಿತು   

ಕುಶಾಲನಗರ: ನೂತನ ತಾಲ್ಲೂಕು ರಚನೆಗೊಂಡ ಬಳಿಕ ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ನಡೆಯುತ್ತಿರುವ ಪ್ರಥಮ ಸಾಹಿತ್ಯ ಸಮ್ಮೇಳನದ ತೇರು ಎಳೆಯಲು ಕ್ಷಣಗಣನೆ ಆರಂಭವಾಗಿದೆ. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಫೆ.3ರಂದು ಇಲ್ಲಿನ ರೈತ ಭವನದಲ್ಲಿ ನಡೆಯಲಿರುವ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣ ನವವಧುವಿನಂತೆ ಶೃಂಗಾರಗೊಂಡಿದೆ.

ಕಾರ್ಯಪ್ಪ ವೃತ್ತ, ಬಿವಿಎಸ್ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಕನ್ನಡ ಬಾವುಟ ಹಾಗೂ ತೋರಣಗಳಿಂದ ಅಲಂಕರಿಸಲಾಗಿದೆ. ನುಡಿ ಜಾತ್ರೆಗೆ ಎಲ್ಲೆಡೆ ಸಂಭ್ರಮ ಮನೆ ಮಾಡಿದೆ.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ನೇತೃತ್ವದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದ್ದು, ಜನಪ್ರತಿನಿಧಿಗಳು, ವಿವಿಧ ಸಂಘ– ಸಂಸ್ಥೆಗಳ ಪ್ರತಿನಿಧಿಗಳೂ ಸೇರಿದಂತೆ ಪಟ್ಟಣದ ನಾಗರಿಕರು ಸಮ್ಮೇಳನದ ಯಶಸ್ವಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆರ್ಥಿಕ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

ADVERTISEMENT

ಸ್ವಾಗತ ಸಮಿತಿ ವತಿಯಿಂದ ರೈತ ಭವನದಲ್ಲಿ ಈಗಾಗಲೇ ಕೊಡಗಿನ ಗೌರಮ್ಮ ಹೆಸರಿನಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಂಡಿದೆ. ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಹೆಸರಿನಲ್ಲಿ ಸಭಾಂಗಣ ನಿರ್ಮಿಸಲಾಗಿದೆ. ಸಮ್ಮೇಳನದ ಸಭಾಂಗಣದ ಪ್ರವೇಶ ದ್ವಾರಕ್ಕೆ ಎಸ್.ಎನ್.ಲಕ್ಷ್ಮಣ ಶೆಟ್ಟರ ಹೆಸರನ್ನು ಇಡಲಾಗಿದೆ. ಜೊತೆಗೆ ಪಟ್ಟಣದ ವಿವಿಧೆಡೆ ಎಸ್.ಎನ್.ನರಸಿಂಹಮೂರ್ತಿ ನೆನಪಿನ ದ್ವಾರ, ವಾಲ್ನೂರು ವೀರಪ್ಪ ಗೌಡರ, ಕೂಡಿಗೆ ಮೂಡ್ಲುಗೌಡ, ಗುಡ್ಡೆಹೊಸೂರು ಬಿ.ಟಿ.ವಿಶ್ವನಾಥ್ ಹೆಸರಿನಲ್ಲಿ ದ್ವಾರಗಳನ್ನು ನಿರ್ಮಾಣ ಮಾಡಲಾಗಿದೆ.

ಪಟ್ಟಣದ ಪ್ರವೇಶ ದ್ವಾರದ ಬಳಿ ಇರುವ ಕಾವೇರಿ ಪ್ರತಿಮೆ ಬಳಿಯಿಂದ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಆರ್.ನಾರಾಯಣ್ ಅವರನ್ನು ಮೆರವಣಿಗೆ ಮೂಲಕ ಕರೆತರಲು ಸಿದ್ಧತೆಗಳು ನಡೆದಿವೆ. ಮೆರವಣಿಗೆಯಲ್ಲಿ ಮಂಗಳ ವಾದ್ಯ, ಮಹಿಳೆಯರ ಪೂರ್ಣಕುಂಭ ಕಲಶಗಳು, ಸ್ತಬ್ಧ ಚಿತ್ರಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾತಂಡ ಕಲಾ ಪ್ರದರ್ಶನ ಮೇಳೈಸಲಿದೆ. ಇದರೊಂದಿಗೆ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮಹಿಳಾ ಸಂಘದ ಸದಸ್ಯರು ಕನ್ನಡ ಶಾಲು ಧರಿಸಿ, ಕೈಯಲ್ಲಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು.

ರೈತ ಭವನದ ಸಭಾಂಗಣದಲ್ಲಿ ಸುಮಾರು 3 ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಆಹಾರ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್ ನೇತೃತ್ವದಲ್ಲಿ ಸಾಹಿತ್ಯ ಅಭಿಮಾನಿಗಳಿಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಸ್ವಯಂ ಸೇವಕರ ಪಡೆಯನ್ನು ಸಿದ್ಧಗೊಳಿಸಲಾಗಿದೆ. ಒಟ್ಟು 4 ಸಾವಿರ ಮಂದಿಗೆ ಭೋಜನ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಮರದ ರೆಂಬೆ ಧರೆಗೆ; ಪ್ರತಿಭಟನೆ

ಕುಶಾಲನಗರ: ಪಟ್ಟಣದ ಟೋಲ್‌ಗೇಟ್ ಬಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪ್ರವೇಶ ದ್ವಾರ ನಿರ್ಮಾಣಕ್ಕಾಗಿ ಮರದ ರೆಂಬೆಯನ್ನು ಕಡಿದಿದ್ದು, ಈ ಘಟನೆಯನ್ನು ಖಂಡಿಸಿ ಗುರುವಾರ ಪತ್ರಕರ್ತ ಎಂ.ಎನ್.ಚಂದ್ರಮೋಹನ್ ಪ್ರತಿಭಟನೆ ನಡೆಸಿದರು.

ಮರದ ರೆಂಬೆ ಕಡಿದ ಜಾಗದ ಬಳಿಯೇ ರಸ್ತೆಯಲ್ಲಿ ಕುಳಿತು ಕೆಲಕಾಲ ಪ್ರತಿಭಟನೆ ನಡೆಸಿದ ಅವರು, ‘ಮರ ಕಡಿದ ಘಟನೆಯನ್ನು ಖಂಡಿಸಿ ಧಿಕ್ಕಾರ ಕೂಗಿದರು. ಮರ ಕಡಿದು ಪರಿಸರಕ್ಕೆ ಹಾನಿ‌ ಉಂಟು ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.