ADVERTISEMENT

ಮಡಿಕೇರಿಯತ್ತ ಪ್ರವಾಸಿಗರ ದಂಡು: ವರ್ಷದ ಕೊನೆಯಲ್ಲಿ ತುಂಬಿದವು ರೆಸಾರ್ಟ್‌, ಹೋಟೆಲ್

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 15:49 IST
Last Updated 25 ಡಿಸೆಂಬರ್ 2018, 15:49 IST
ಮಡಿಕೇರಿ ರಾಜಾಸೀಟ್‌ನಲ್ಲಿ ಮಂಗಳವಾರ ಸಂಜೆ ಕಂಡುಬಂದ ಪ್ರವಾಸಿಗರು
ಮಡಿಕೇರಿ ರಾಜಾಸೀಟ್‌ನಲ್ಲಿ ಮಂಗಳವಾರ ಸಂಜೆ ಕಂಡುಬಂದ ಪ್ರವಾಸಿಗರು   

ಮಡಿಕೇರಿ: ಕ್ರಿಸ್‌ಮಸ್‌ ಹಾಗೂ ವರ್ಷಾಂತ್ಯದ ಹಿನ್ನೆಲೆಯಲ್ಲಿ ಕೊಡಗಿನತ್ತ ಪ್ರವಾಸಿಗರು ದಂಡೇ ಹರಿದುಬರುತ್ತಿದೆ. ರಾಜಾಸೀಟ್‌, ಓಂಕಾರೇಶ್ವರ ದೇಗುಲ, ಅಬ್ಬಿ ಜಲಪಾತ, ಕೋಟೆ, ಕುಶಾಲನಗರ ಸಮೀಪದ ನಿಸರ್ಗಧಾಮ, ದುಬಾರೆ, ಹಾರಂಗಿ ಜಲಾಶಯ, ತಲಕಾವೇರಿ, ಭಾಗಮಂಡಲ, ಇರ್ಪುದಂತಹ ಪ್ರವಾಸಿ ತಾಣಗಳಲ್ಲಿ ಕಳೆದ ಶನಿವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬರುತ್ತಿದ್ದಾರೆ.

ಕೊಡಗಿನಲ್ಲಿ ಆಗಸ್ಟ್‌ನಲ್ಲಿ ಭೂಕುಸಿತವಾಗಿತ್ತು. ಬಳಿಕ ಪ್ರವಾಸಿಗರ ಸಂಖ್ಯೆ ಕುಸಿದಿತ್ತು. ಇದರಿಂದ ರೆಸಾರ್ಟ್‌, ಹೋಂಸ್ಟೇ ಮಾಲೀಕರು ಕಂಗಾಲಾಗಿದ್ದರು.

ಸರ್ಕಾರಿ ಇಲಾಖೆ, ಬ್ಯಾಂಕ್‌, ಶಾಲಾ–ಕಾಲೇಜುಗಳಿಗೆ ಸಾಲು ಸಾಲು ರಜೆ ಇದ್ದರಿಂದ ಪ್ರವಾಸಿಗರ ಹೆಚ್ಚಳವಾಗಿದೆ. ಜತೆಗೆ, ವರ್ಷಾಂತ್ಯ ಬೇರೆ. ನಗರದ ಜನರಲ್ ತಿಮ್ಮಯ್ಯ ರಸ್ತೆ, ಕೊಹಿನೂರು ರಸ್ತೆ, ಬಸ್‌ ನಿಲ್ದಾಣ, ಕಾಲೇಜು ರಸ್ತೆಯ ವ್ಯಾಪಾರ ಮಳಿಗೆ, ಹೊಟೇಲ್, ಅಂಗಡಿ ಮುಂಗಟ್ಟುಗಳಲ್ಲೂ ದಟ್ಟಣೆ ಕಂಡುಬಂತು. ಇನ್ನೂ ಕೆಲವು ಹೋಟೆಲ್‌ಗಳಲ್ಲಿ ಮಧ್ಯಾಹ್ನ 2ರ ನಂತರ ಊಟ ಇಲ್ಲದೇ ಪ್ರವಾಸಿಗರು ನಿರಾಸೆ ಅನುಭವಿಸಿದರು.

ADVERTISEMENT

ನಾಲ್ಕೈದು ತಿಂಗಳಿಂದ ಪ್ರವಾಸಿಗರ ಸಂಖ್ಯೆ ಇಳಿಮುಖವಾದ ಕಾರಣ ಕಡಿಮೆ ಪ್ರಮಾಣದಲ್ಲಿ ಊಟ ತಯಾರಿಸುತ್ತಿದ್ದೇವೆ. ಆದರೆ, ಏಕಾಏಕಿ ಪ್ರವಾಸಿಗರು ಬಂದ ಕಾರಣ ಊಟಕ್ಕೆ ಸಮಸ್ಯೆಯಾಗಿದೆ ಎಂದು ಹೋಟೆಲ್‌ ಮಾಲೀಕರು ಪ್ರತಿಕ್ರಿಯಿಸಿದರು.

ಸಂಚಾರ ದಟ್ಟಣೆ: ಏಕಾಏಕಿ ಪ್ರವಾಸಿಗರು ಲಗ್ಗೆಯಿಟ್ಟ ಕಾರಣ ಸಂಚಾರ ದಟ್ಟಣೆಯೂ ಕಂಡುಬಂತು. ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್‌ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಸೋಮವಾರ ರಾತ್ರಿಯಂತೂ ದಿಢೀರ್‌ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು.

ವರ್ಷಾಂತ್ಯದಲ್ಲೂ ನಿರೀಕ್ಷೆ: ಇನ್ನು ಕೆಲವೇ ದಿನಗಳಲ್ಲಿ ವರ್ಷಾಂತ್ಯವೂ ಬರಲಿದ್ದು ಆಗಲೂ ಮಡಿಕೇರಿಯತ್ತ ಪ್ರವಾಸಿಗರು ಬರಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಉದ್ದಿಮೆದಾರರು ಇದ್ದಾರೆ. ವಿವಿಧೆಡೆಯಿಂದ ಬಂದಿದ್ದ ಪ್ರವಾಸಿಗರು ಕೊಡಗಿನ ಸಾಂಪ್ರದಾಯಿಕ ಖಾದ್ಯಗಳನ್ನು ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.