ಮಡಿಕೇರಿ: ಕೊಡಗು ಜಿಲ್ಲೆಯ ಜನರು ಹಾಗೂ ಇಲ್ಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದರು.
ಗಡಿಯಾರದ ಮುಳ್ಳುಗಳು ಮಂಗಳವಾರ ರಾತ್ರಿ 12 ಅನ್ನು ಮುಟ್ಟುತ್ತಿದ್ದಂತೆ ಬಾನಬಿರುಸುಗಳು ಗಗನದೆತ್ತರಕ್ಕೆ ಹಾರಿ ಬೆಳಕಿನ ಚಿತ್ತಾರ ಮೂಡಿಸಿದವು.
ಪ್ರವಾಸಿಗರಿಂದ ತುಂಬಿ ಹೋಗಿದ್ದ ರೆಸಾರ್ಟ್‌ಗಳು, ಹೋಂಸ್ಟೇಗಳು ಹಾಗೂ ಹೋಟೆಲ್‌ಗಳಲ್ಲಿ ‘ಹ್ಯಾಪಿ ನ್ಯೂ ಇಯರ್’ ಎಂಬ ಉದ್ಘಾರ ಮುಗಿಲು ಮುಟ್ಟಿತ್ತು. ಎಲ್ಲೆಲ್ಲೂ ಸಂಭ್ರಮ, ಸಡಗರಗಳ ಮೇಳೈಸಿದ್ದವು. ಬಡಾವಣೆಗಳಲ್ಲಿ, ರಸ್ತೆಗಳಲ್ಲಿ ಜನರು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ವಾಟ್ಸ್‌ಆ್ಯಪ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು. ಬೆಳಿಗ್ಗೆಯಾದೊಡನೆ ಅನೇಕ ಮಂದಿ ಹೊಸ ಕ್ಯಾಲೆಂಡರ್ ಖರೀದಿಸುತ್ತಿದ್ದ ದೃಶ್ಯಗಳು ಕಂಡು ಬಂದವು.
ಚರ್ಚ್‌ಗಳು, ದೇಗುಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಎಲ್ಲೆಡೆ ಹೆಚ್ಚಿನ ಜನಜಂಗುಳಿ ಸೇರಿತ್ತು.
ಬೆಳಿಗ್ಗೆ ಹೊಸ ವರ್ಷದ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬೇಕೆಂದು ನಗರದ ನಾನಾ ಕಡೆ ಎತ್ತರದ ಪ್ರದೇಶದಲ್ಲಿ ನಿಂತಿದ್ದವರಿಗೆ ಕವಿದಿದ್ದ ಅಪಾರ ಮಂಜು ನಿರಾಸೆ ಮೂಡಿಸಿತು. ಸೂರ್ಯೋದಯದ ಗಳಿಗೆಯನ್ನು ನೋಡಲು ಸಾಧ್ಯವೇ ಆಗಲಿಲ್ಲ.
ಅಪಾರ ಸಂಖ್ಯೆಯಲ್ಲಿ ಬಂದಿದ್ದ ಪ್ರವಾಸಿಗರಲ್ಲಿ ಕೆಲವರು ಹೊಸ ವರ್ಷಾಚರಣೆ ಮಾಡಿ ಸಂಜೆ ಹೊತ್ತಿಗೆ ನಿರ್ಗಮಿಸತೊಡಗಿದರು. ಇದರಿಂದ ಕೆಲವೆಡೆ ಸಂಚಾರ ದಟ್ಟಣೆ ಕಂಡು ಬಂತು.
ವೀರ ಯೋಧ ದಿವಿನ್ ಹುತಾತ್ಮರಾದ ಸೂತಕದ ಛಾಯೆ ಉತ್ತರ ಕೊಡಗಿನಲ್ಲಿ ವ್ಯಾಪಿಸಿತ್ತು. ಹೀಗಾಗಿ, ಹಲವು ಗ್ರಾಮಗಳಲ್ಲಿ ಹೊಸ ವರ್ಷಾಚರಣೆಯನ್ನೇ ರದ್ದುಗೊಳಿಸಲಾಗಿತ್ತು. ಇದರಿಂದ ಹೊಸ ವರ್ಷಾಚರಣೆ ತುಸು ಮಂಕಾಗಿತ್ತು.
ಹೊಸ ವರ್ಷಕ್ಕೆ ಸ್ವಾಗತ
ಸೋಮವಾರಪೇಟೆ: ಇಲ್ಲಿನ ಒಎಲ್ವಿ ಚರ್ಚ್‌ನಲ್ಲಿ ಡಿಸೆಂಬರ್ ಕೊನೆಯ ದಿನವಾದ ಮಂಗಳವಾರ ಹೊಸ ವರ್ಷ ಸ್ವಾಗತವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತಬಾಂಧವರು ಸೇರಿ ಸಂಭ್ರಮಿಸಿದರು. ರಾತ್ರಿ 12 ಗಂಟೆಗೆ 2025ರ ಹೊಸವರ್ಷವನ್ನು ಸ್ವಾಗತಿಸಿ ಕೇಕ್ ಕತ್ತರಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ಬೊಂಬೆಯನ್ನು ಮಾಡಿ ಸುಡುವ ಮೂಲಕ ಜನರಲ್ಲಿ ಹಿಂದಿನ ಸಾಲಿನ ಕೆಟ್ಟ ಮನಸ್ಸುಗಳನ್ನು ಸುಡುವ ಕೆಲಸ ಮಾಡಲಾಯಿತು ಎಂದು ಚರ್ಚ್ ಫಾದರ್ ಅವಿನಾಶ್ ತಿಳಿಸಿದರು.
ಈ ಸಂದರ್ಭ ಪ್ರಮುಖರಾದ ಸುನಿಲ್, ಶೀಲಾ ಡಿಸೋಜಾ, ಡೆಂಜಿಲ್, ಮರ್ವಿನ್ ಲೋಬೊ, ವಿನ್ಸಿ ಡಿಸೋಜಾ ಮತ್ತಿತ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.