ADVERTISEMENT

ಮಡಿಕೇರಿ: ಆಧುನಿಕತೆಯ ಹೊಡೆತಕ್ಕೆ ಮನೆಯಿಂದ ಕಾಲ್ತೆಗೆಯುತ್ತಿವೆ ಬಳಂಜಿಗಳು...

ಕೆ.ಎಸ್.ಗಿರೀಶ್
Published 21 ಜುಲೈ 2025, 2:52 IST
Last Updated 21 ಜುಲೈ 2025, 2:52 IST
ಬಿದಿರಿನ ಬಳಂಜಿ 
ಬಿದಿರಿನ ಬಳಂಜಿ    

ಮಡಿಕೇರಿ: ಮಳೆಗಾಲದಲ್ಲೂ ಗರಿಗರಿಯಂತೆ ಬಟ್ಟೆ ಒಣಗಿಸಲು ತೀರಾ ಅಗತ್ಯ ಎನಿಸಿದ್ದ ಬಳಂಜಿ ಮೆಲ್ಲಗೆ ತೆರೆಮರೆಯತ್ತ ಸರಿಯಲಾರಂಭಿಸಿದೆ. ವರ್ಷದಿಂದ ವರ್ಷಕ್ಕೆ ಇದರ ಲಭ್ಯತೆ ಕಡಿಮೆಯಾಗುತ್ತಿದೆ. ಬೇಡಿಕೆಯೂ ಕುಸಿಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಬಳಂಜಿ ಸಹ ಪಾರಂಪರಿಕ ವಸ್ತುಗಳ ಹಾಗೆ ಚಿತ್ರಪಟದಲ್ಲಿ ತೋರಿಸಬೇಕಾಗುತ್ತದೆ.

ಮೊದಲೆಲ್ಲ ಮುಂಗಾರು ಎಂದರೆ ಕೊಡಗಿನಲ್ಲಿ ತಿಂಗಳುಗಟ್ಟಲೆ ಕಾಲ ಸೂರ್ಯನ ರಶ್ಮಿಗಳು ನೆಲವನ್ನೇ ತಾಕುತ್ತಿರಲಿಲ್ಲ. ದಟ್ಟ ಮೋಡ, ಮಂಜು ಆವರಿಸಿ, ಮೈಕೊರೆಯುವ ಚಳಿ ಇರುತ್ತಿತ್ತು. ಈ ವೇಳೆ ಬಟ್ಟೆಗಳನ್ನು ಒಣಗಿಸುವುದೇ ದೊಡ್ಡ ಸವಾಲಿನ ಕೆಲಸ ಆಗಿತ್ತು. ಆಗ ನೆರವಿಗೆ ಬಂದಿದ್ದೇ ಈ ಬ‌ಳಂಜಿ.

ಏನಿದು ಬಳಂಜಿ?:

ಬಟ್ಟೆ ಒಣಗಿಸಲೆಂದು ಬಿದಿರಿನಿಂದ ಮಾಡಿದ ಉತ್ಪನ್ನವೇ ಬಳಂಜಿ. ಇದು ಇಂದು, ನೆನ್ನೆಯದಲ್ಲ. ಪುರಾತನ ಕಾಲದಿಂದಲೂ ಇಲ್ಲಿನ ಜನರು ಬಟ್ಟೆ ಒಣಗಿಸಲು ಇದನ್ನೇ ಬಳಸುತ್ತಿದ್ದರು. ಕಾಡಿನಲ್ಲಿ ಸುಲಭವಾಗಿ ಸಿಗುತ್ತಿದ್ದ ಬಿದಿರನ್ನು ಉಪಯೋಗಿಸಿ, ಬಳಂಜಿಯನ್ನು ತಯಾರಿಸಲಾಗುತ್ತಿತ್ತು. ಬಟ್ಟೆ ಒಣಗಿಸಲು ಸಾಧ್ಯವಾಗುವಂತೆ ಕಿಂಡಿಗಳು ಇದರಲ್ಲಿವೆ. ಬಿದಿರು ಬಿಟ್ಟರೆ ಬೇರೆ ಯಾವುದೇ ವಸ್ತುವನ್ನೂ ಇದರಲ್ಲಿ ಬಳಸದೇ ಇರುವುದು ವಿಶೇಷ.

ADVERTISEMENT

ಈ ಬಳಂಜಿಯ ಮೈಮೇಲೆಲ್ಲ ಒಗೆದ ಬಟ್ಟೆಗಳನ್ನು ಹರಡಿದರೆ ಬಟ್ಟೆಗಳು ಒಣಗುತ್ತಿದ್ದವು. ಇದರ ಮಧ್ಯೆ ಅಥವಾ ಸಮೀಪ ಅಗ್ಗಿಷ್ಟಿಕೆ ಇಟ್ಟರಂತೂ ಕೆಲವೇ ಗಂಟೆಗಳಲ್ಲಿ ಒಣಗಿದ ಗರಿಗರಿ ಎನಿಸುವ ಬಟ್ಟೆಗಳು ಧರಿಸಲು ಸಿದ್ಧವಾಗುತ್ತಿದ್ದವು. ಒಂದು ವೇಳೆ ಅಗ್ಗಿಷ್ಟಿಕೆ ಇಲ್ಲದಿದ್ದರೂ ಸೌದೆ ಒಲೆ ಸಮೀಪ ಇಟ್ಟರೂ ಇವು ಒಣಗುತ್ತಿದ್ದವು. ಈ ರೀತಿ ಒಣಗಿಸಿದ ಬಟ್ಟೆಗಳನ್ನು ಧರಿಸುವುದರಿಂದ ಹಿಂದಿನವರಿಗೆ ಚರ್ಮ ರೋಗಗಳು ಬರುತ್ತಿರುತ್ತಿರಲಿಲ್ಲ. ಫಂಗಲ್ ಸೋಂಕು ಹತ್ತಿರವೂ ಸುಳಿಯುತ್ತಿರಲಿಲ್ಲ. ಒಂದು ರೀತಿಯಲ್ಲಿ ಜನರ ಚರ್ಮವನ್ನು ಫಂಗಸ್‌ನಿಂದ ರಕ್ಷಿಸಿದ ಕೀರ್ತಿಯೂ ಈ ಬಳಂಜಿಗೆ ಇದೆ.

ಈ ಕಾರಣಕ್ಕೆ ಹಿಂದೆ ಬಳಂಜಿಗೆ ಭರಪೂರ ಬೇಡಿಕೆ ಇರುತ್ತಿತ್ತು. ಪ್ರತಿ ಮನೆಯಲ್ಲೂ ಜನರು ಇದನ್ನು ಖರೀದಿಸುತ್ತಿದ್ದರು. ಪ್ರತಿ ವರ್ಷವೂ ಹೊಸ ಹೊಸ ಬಳಂಜಿ ಖರೀದಿಸುವುದು ನಡೆಯುತ್ತಿತ್ತು. ಆದರೆ, ಈಗ ಆಧುನೀಕತೆಯ ಬಿರುಗಾಳಿಗೆ ಸಿಲುಕಿದವರು ಬಳಂಜಿಯ ಕಡೆಗೆ ಗಮನ ಕೊಡುತ್ತಿಲ್ಲ.

ಬಳಂಜಿಗೆ ಸೆಡ್ಡು ಹೊಡೆಯಬಲ್ಲ ಸ್ಟೀಲ್‌ನಿಂದ ಮಾಡಿ ಉಪಕರಣ ಬಟ್ಟೆಯನ್ನು ಒಣಗಿಸಲೆಂದೇ ಮಾರುಕಟ್ಟೆಗೆ ಬಂದಿದೆ. ಅದು ಬಾಳಿಕೆಯೂ ಬರುತ್ತದೆ ಎಂಬ ಕಾರಣಕ್ಕೆ ಒಂದಷ್ಟು ಮಂದಿ ಇಂತಹ ಉಪಕರಣ ಖರೀದಿಸುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಬಿಸಿಲು ಮರೀಚಿಕೆ ಎನಿಸಿದೆ. ಬಟ್ಟೆ ಒಣಗಿಸಲು ಮಹಿಳೆಯರು ಬಿದಿರಿನ ಬಳಂಜಿ ಖರೀದಿಸುತ್ತಿದ್ದ ದೃಶ್ಯ ಮಡಿಕೇರಿಯಲ್ಲಿ ಈಚೆಗೆ ಕಂಡುಬಂತು  

ಮತ್ತೊಂದು ಕಡೆ, ಕೊಡಗಿನ ಹವಾಮಾನ ಮೊದಲಿನಂತೆ ಇಲ್ಲ. 2022ರಲ್ಲಿ ಹೆಚ್ಚಿನ ಮಳೆ ಬರಲಿಲ್ಲ. ಕಳೆದ ವರ್ಷವೂ ನಿರಂತರ ಮಳೆ ಇರಲಿಲ್ಲ. ಇಂತಹ ಸಂದರ್ಭಗಳಲ್ಲಿ ಬಳಂಜಿಗೆ ಬೇಡಿಕೆ ಕಡಿಮೆಯಾಗಿ, ಕಷ್ಟಪಟ್ಟು ಮಾರಾಟ ಮಾಡಲು ತಂದವರು ಮಾರಾಟ ಮಾಡಲು ಹರಸಾಹಸಪಡಬೇಕಾಯಿತು.

ತಂತಿ ಕಟ್ಟಿ ಒಣ ಹಾಕಿದರೆ ಮನೆಯಲ್ಲಿ ನಡೆದಾಡಲು ಕಷ್ಟ ಎಂಬ ಕಾರಣಕ್ಕೆ ಬಳಂಜಿಯನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿರಿಸಿ ಅದರ ಸುತ್ತಲೂ ಬಟ್ಟೆಯನ್ನು ಒಣ ಹಾಕಲಾಗುತ್ತಿತ್ತು. ಕೆಲವೊಂದು ಮನೆಯಲ್ಲಿ ಒಂದಕ್ಕೂ ಅಧಿಕ ಬಳಂಜಿಗಳಿದ್ದವು. ಆದರೆ, ಈಗ ಎಲ್ಲ ಮನೆಯಿಂದಲೂ ಬಳಂಜಿಗಳು ಕಾಲ್ತೆಗೆಯುವ ಸಮಯ ಬಂದಿದೆ.

ವಾಷಿಂಗ್‌ ಮಿಷನ್‌ಗಳು ಈಗ ಬಟ್ಟೆ ಒಣಗಿಸುವ ಸೌಕರ್ಯವನ್ನೂ ನೀಡಿವೆ. ಇಂತಹ ಯಂತ್ರಗಳಿಗೆ ಬೇಡಿಕೆ ಅಧಿಕವಾಗಿದೆ. ಬಹುತೇಕ ಮಂದಿ ಇಂತಹ ಯಂತ್ರಗಳನ್ನು ಖರೀದಿಸುತ್ತಿರುವುದರಿಂದಲೂ ಬಳಂಜಿಗೆ ಬೇಡಿಕೆ ಕುಸಿಯುತ್ತಿದೆ.

ಬಳಂಜಿಯ ಮೇಲೆ ಬಟ್ಟೆಯನ್ನು ಒಣಗಿ ಹಾಕಿರುವುದು

ಬಿದಿರು ಸಿಗುವುದೂ ಕಷ್ಟ: ಈಗ ಮುಂಚಿನಷ್ಟು ಸಲೀಸಾಗಿ ಬಿದಿರು ಸಿಗುತ್ತಿಲ್ಲ. ಅದರ ದರವೂ ದುಬಾರಿ. ಕಷ್ಟಪಟ್ಟು ಬಿದಿರು ತಂದು ಹೆಣೆದು ಬಳಂಜಿ ಮಾಡಿ ಹೊತ್ತುಕೊಂಡು ಬರುವುದು ಈತ ತ್ರಾಸದಾಯಕವಾಗಿದೆ. ಇಷ್ಟು ಕಷ್ಟಪಟ್ಟು ತಂದ ಮೇಲೂ ಜನರು ಖರೀದಿಸಲು ಚೌಕಾಸಿ ಮಾಡುತ್ತಾರೆ. ಹಾಗಾಗಿ, ಈ ವ್ಯಾಪಾರ ಬೇಡ ಎನಿಸಿದೆ ಎಂದು ಬಳಂಜಿ ವ್ಯಾಪಾರ ಮಾಡುವ ಬಹುತೇಕರು ಹೇಳುತ್ತಾರೆ. ಈಗ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಮಾತ್ರ ಬಳಂಜಿ ವ್ಯಾಪಾರಿಗಳು ಸಿಗುವಂತಹ ಸ್ಥಿತಿ ಇದೆ.

ಮಡಿಕೇರಿ ನಗರದ ರಸ್ತೆಬದಿಯಲ್ಲಿ ಬಳಂಜಿಯನ್ನು ಸಾಲಾಗಿಟ್ಟುಕೊಂಡು ವ್ಯಾಪಾರಿ ಒಬ್ಬರು ಈಚೆಗೆ ಮಳೆಯಲ್ಲಿ ನೆನೆಯುತ್ತ ಗ್ರಾಹಕರ ನಿರೀಕ್ಷೆಯಲ್ಲಿದ್ದರು 

ಕಡಿಮೆಯಾಗುತ್ತಿದೆ ಬಳಂಜಿ

ಬಳಕೆ ಬೆತ್ತದಿಂದ ನಿರ್ಮಿಸಲಾದ ಬಳಂಜಿಗಳು ಕೊಡಗಿನಲ್ಲಿ ಬಟ್ಟೆ ಒಣಗಿಸಲು ಸಹಕಾರಿ. ಮಳೆಗಾಲದಲ್ಲಿ ತೇವಾಂಶದಿಂದ ಕೂಡಿರುವ ಬಟ್ಟೆಗಳನ್ನು ಒಣಗಿಸಲು ಕೃಷಿಕರ ಒದ್ದೆ ಬಟ್ಟೆಗಳನ್ನುಒಣಗಿಸಲು ಗ್ರಾಮೀಣ ಪ್ರದೇಶಗಳಲ್ಲಿ ಬಳಂಜಿಯನ್ನು ಉಪಯೋಗಿಸುತ್ತಾರೆ. ಈಚಿನ ವರ್ಷಗಳಲ್ಲಿ ಬಳಂಜಿಯ ಬಳಕೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಗೃಹಿಣಿ ಸಿ.ಕೆ.ಕಾವೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.