ADVERTISEMENT

ಜನಪದ ಝೇಂಕಾರದ ಗಿರಿಜನ ಹಾಡುಗಾರ ರಾಮು

ಓದಿದ್ದು ನಾಲ್ಕನೇ ತರಗತಿ; ಕಟ್ಟಿದ್ದು 35 ಜನರ ಕಲಾತಂಡ l ಕೊಳಲು ವಾದಕನ ಹಾಡು ಕೇಳುವುದೇ ಖುಷಿ

ಜೆ.ಸೋಮಣ್ಣ
Published 18 ಜನವರಿ 2023, 7:05 IST
Last Updated 18 ಜನವರಿ 2023, 7:05 IST
ಗೋಣಿಕೊಪ್ಪಲು ಬಳಿಯ ಚೊಟ್ಟೆಪಾರೆ ಗಿರಿಜನರ ಹಾಡಿಯ ಜೆ.ಕೆ.ರಾಮು ಕೊಳಲು ನುಡಿಸುತ್ತಿರುವುದು
ಗೋಣಿಕೊಪ್ಪಲು ಬಳಿಯ ಚೊಟ್ಟೆಪಾರೆ ಗಿರಿಜನರ ಹಾಡಿಯ ಜೆ.ಕೆ.ರಾಮು ಕೊಳಲು ನುಡಿಸುತ್ತಿರುವುದು   

ಗೋಣಿಕೊಪ್ಪಲು: ಮೂಲ ಸೌಕರ್ಯ ಗಳಿಂದ ವಂಚಿತರಾಗಿ ನಿಸರ್ಗದ ಸಹಜ ಜೀವಿಗಳಂತೆ ಬದುಕುತ್ತಿರುವ ಕಾಡೊಳಗಿನ ಗಿರಿಜನರು ಕೇವಲ ಕೂಲಿ ಕಾರ್ಮಿಕರು ಮಾತ್ರವಲ್ಲ, ಅವರೂ ಸಂಸ್ಕೃತಿಯ ಆರಾಧಕರಾಗಿದ್ದಾರೆ. ತಮ್ಮ ಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಕಲಾವಿದರೂ ಆಗಿದ್ದಾರೆ. ಅಂಥ ಮುಗ್ಧ ಕಾಡಿನ ಕಂದಮ್ಮಗಳ ಸಾಲಿಗೆ ಸೇರಿದ ಪ್ರತಿಭಾವಂತ ಕಲಾವಿದ ಜೆ.ಕೆ.ರಾಮು.

ವಿರಾಜಪೇಟೆ ತಾಲ್ಲೂಕು ಚೊಟ್ಟೆಪಾರೆ ಹಾಡಿಯ ಜೇನುಕುರುಬರ ರಾಮು ಪ್ರತಿಭಾವಂತ ಗಿರಿಜನ ಜನಪದ ಹಾಡುಗಾರ, ಕೊಳಲು ವಾದಕ, ನೃತ್ಯಗಾರ, ಉತ್ತಮ ಸಂಘಟಕ, ಸ್ಥಳೀಯ ಜನಸೇವಕ.

ವಸಂತ ಮಾಸದಲ್ಲಿ ಮರ–ಗಿಡಗಳು ಚಿಗುರಿ ಹೂ ಬಿಟ್ಟು ಕಂಗೊಳಿಸುತ್ತವೆ. ಈ ಸಂದರ್ಭದಲ್ಲಿ ಜೇನು ನೊಣಗಳು ಮಧು ಹೀರಲು ಹೂವಿನಿಂದ ಹೂವಿಗೆ ಝೇಂಕರಿಸುತ್ತಾ ಹಾರಾಡುತ್ತವೆ. ಇಂಥ ಸುಂದರ ದೃಶ್ಯವನ್ನು ನೋಡಿ ಕಣ್ತುಂಬಿಕೊಳ್ಳುವ ರಾಮು ಇದರ ಬಗ್ಗೆ ಸುಂದರವಾಗಿ ತಾವೇ ಹಾಡು ಕಟ್ಟಿ ಹಾಡುತ್ತಾರೆ.

ADVERTISEMENT

‘ಹೂವೇ.... ಏ ಹೂವೆ... ಜೇನು ಬಂದಾಗ ನೀ ಒಲ್ಲೆ.... ಬಾರೆ ಮಧು ಚಂದ್ರಕೆ’ ಎಂದು ಹಾಡುವ ಹಾಡನ್ನು ರಾಮು ಅವರ ಧ್ವನಿಯಲ್ಲಿಯೇ ಕೇಳಿ ತಲೆದೂಗಬೇಕು. ಇದೊಂದೇ ಹಾಡಲ್ಲ. ಜೇನು ಕೊಯ್ಯುವ ಮತ್ತು ಜೇನು ನೊಣಗಳ ಝೇಂಕಾರ ಕುರಿತು, ‘ಬಾರೆ ಗೀಜುಗನ... ನೃತ್ಯ’ ಮೊದಲಾದ ನೂರಾರು ಹಾಡುಗಳು ಅವರಲ್ಲಿವೆ.

ಪಾಲಿಬೆಟ್ಟದಿಂದ 9 ಕಿ.ಮೀ ದೂರದಲ್ಲಿ ಚೊಟ್ಟೆಪಾರಿಯ ದಟ್ಟ ಕಾಡಿನ ನಡುವೆ ಚದುರಿದಂತೆ ಇರುವ ಹಾಡಿಯ ಜನರು ಸಂಜೆಯಾದಾಗ ಬೆರೆತು ಅವರೊಂದಿಗೆ ಹಾಡಿ ನಲಿಯುತ್ತಾರೆ. ಇವರ ಗಾಯನಗೋಷ್ಠಿಗೆ ಕಾರ್ಯಕ್ರಮದ ವೇದಿಕೆಯೇ ಇರಬೇಕೆಂದಿಲ್ಲ. ಹಾಡಿಯ ಜನರೆಲ್ಲ ಕೆಲಸ ಮುಗಿಸಿಕೊಂಡು ಮನೆಗೆ ಬಂದರೆ ಸಾಕು ಅವರೆನ್ನೆಲ್ಲ ಒಂದೆಡೆ ಸೇರಿಸಿ ರಾತ್ರಿ ನಿದ್ರೆ ಬರುವವರೆಗೂ ಹಾಡುತ್ತಾರೆ. ಈ ಮೂಲಕ ತಾವೂ ಆನಂದಿಸುತ್ತಾರೆ. ಹಾಡಿಯ ಜನರನ್ನು ಆನಂದಿಸುತ್ತಾರೆ.

ರಾಮು ಕೊಳಲು ನುಡಿಸುವುದರಲ್ಲಿಯೂ ಪ್ರವೀಣರು. ತಮ್ಮ ಮನೆಯ ಸುತ್ತಮುತ್ತ ಇರುವ ಬಿದಿರಿನಲ್ಲಿ ಕೊಳಲು ಮಾಡಿಕೊಂಡು ಮನಸಾರೆ ಊದುತ್ತಾರೆ. ಈ ಮೂಲಕ ಸಾಕ್ಷಾತ್ ಕೃಷ್ಣನೇ ಆಗಿ ಬಿಡುತ್ತಾರೆ. ಇದರ ಜತೆಗೆ, ದೈವ ಬರಿಸುವುದು, ಈ ಮೂಲಕ ಹಾಡಿಯ ಜನರ ರೋಗ ರುಜಿನ, ಕಷ್ಟಗಳಿಗೆ ಪರಿಹಾರ ಹುಡುಕುವುದು ಮೊದಲಾದ ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಕಿರಿಯರಿಗೆ ಕಲಿಸುತ್ತಾ ಸಂಸ್ಕೃತಿಯ ಪೋಷಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ರಾಮು ಅವರ ತಂದೆ ಕೆಂಚಪ್ಪ ಕೂಡ ಗಿರಿಜನ ಜಾನಪದ ಕಲಾವಿದರು. ಇವರಿಗೂ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ತಂದೆಯಿಂದ ಕಲಿತ ಈ ಕಲೆಯನ್ನು ರಾಮು ಮುಂದುವರಿಸಿಕೊಂಡು ಬರುತ್ತಿದ್ದಾರೆ. 58 ಹರೆಯದಲ್ಲಿರುವ ರಾಮು ಅವರಿಗೂ ಕೂಡ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ.

ಕೇವಲ 4ನೇ ತರಗತಿವರೆಗೆ ಓದಿರುವ ರಾಮು ಮೃದು ಮನಸ್ಸಿನ, ಮೆದು ಭಾಷೆಯ ಮುಗ್ದ ಕಲಾವಿದ. ತಿತಿಮತಿ ಲ್ಯಾಂಪ್ ಸೊಸೈಟಿ ಅಧ್ಯಕ್ಷರಾಗಿ, ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಜನಸೇವೆ ಮಾಡಿದ್ದಾರೆ. ಕಾಡೊಳಗಿನ ತಮ್ಮ ಚೊಟ್ಟೆಪಾರೆ ಹಾಡಿಯನ್ನು ನಿಸರ್ಗದ ನಡುವಿನ ಗಿರಿಜನ ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸಿದ ಹೆಗ್ಗಳಿಕೆ ರಾಮು ಅವರದು.

ತಂಡ ಕಟ್ಟಿಕೊಂಡು ದೇಶ ಸುತ್ತಿದರು

ರಾಮು ಅವರ ಜತೆ 35 ಗಿರಿಜನರ ಯುವ ತಂಡವಿದೆ. ಇವರಿಗೆ ಗಿರಿಜನ ನೃತ್ಯ ಕಲಿಸಿ, ತಾವೇ ಹಾಡುತ್ತಾ ಆ ಯುವಕ ಯುವತಿಯರನ್ನು ಕರೆದೊಯ್ದು ದೇಶದ ನೂರಾರು ಕಡೆ ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನೆಹರು ಯುವ ಕೇಂದ್ರಗಳ ಮೂಲಕ ಹರಿಯಾಣ, ದೆಹಲಿ, ಪಂಜಾಬ್, ಚೆನ್ನೈ, ಕಲ್ಲಿಕೋಟೆ, ಹೈದರಾಬಾದ್, ಮೈಸೂರು ದಸರಾ ಮೊದಲಾದ ಕಡೆ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.