ADVERTISEMENT

ಗೋಣಿಕೊಪ್ಪಲು: ಬುಡಕಟ್ಟು ಜನರ ಬೇಡು ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಮೇ 2022, 3:13 IST
Last Updated 26 ಮೇ 2022, 3:13 IST
ಕುಶಾಲನಗರ ಸಮೀಪದ ಲಾಳಪುರ ಬಳಿ ಬೇಡು ಹಬ್ಬದ ಅಂಗವಾಗಿ ಬುಧವಾರ ಗಿರಿಜನರು ವಿವಿಧ ವೇಷಭೂಷಣ ಧರಿಸಿ ನೃತ್ಯ ಮಾಡಿ ಗಮನ ಸೆಳೆದರು
ಕುಶಾಲನಗರ ಸಮೀಪದ ಲಾಳಪುರ ಬಳಿ ಬೇಡು ಹಬ್ಬದ ಅಂಗವಾಗಿ ಬುಧವಾರ ಗಿರಿಜನರು ವಿವಿಧ ವೇಷಭೂಷಣ ಧರಿಸಿ ನೃತ್ಯ ಮಾಡಿ ಗಮನ ಸೆಳೆದರು   

ಗೋಣಿಕೊಪ್ಪಲು: ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ದಕ್ಷಿಣ ಕೊಡಗಿನ ಬುಡಕಟ್ಟು ಜನರ ಸಂಪ್ರದಾಯವಾದ ಬೇಡು ಹಬ್ಬ (ಕುಂಡೆ ಹಬ್ಬ) ಬುಧವಾರ ಸಡಗರದೊಂದಿಗೆ ಆರಂಭಗೊಂಡಿತು.

ನಿತ್ಯ ಅರಣ್ಯದ ಗಿಡಮರ ಮತ್ತು ಕಾಫಿ ತೋಟದ ಒಳಗೆ ಜೀವನ ಸವೆಸುವ ಗಿರಿಜನರು ವರ್ಷಕ್ಕೆ ಒಮ್ಮೆ ನಡೆಯುವ ಬೇಡು ಹಬ್ಬದಲ್ಲಿ ಸೇರಿ ಸಂಭ್ರಮಿಸಿದರು. ಕೈಗೆ ಸಿಕ್ಕಿದ ಹಳೆಯ ಪ್ಲಾಸ್ಟಿಕ್ ಚೀಲ, ಡ್ರಂ, ಹಲಸಿನ ಕಾಯಿ ಸಿಪ್ಪೆ, ತಗಡು ಮೊದಲಾದ ಹತ್ತಾರು ಬಗೆಯ ವಸ್ತುಗಳನ್ನು ತೊಟ್ಟು, ಮೈ ಕೈಗೆಲ್ಲ ಬಿಳಿ, ಕಪ್ಪು, ಕೆಂಪು ಬಣ್ಣವನ್ನು ಬಳಿದುಕೊಂಡು ಡ್ರಂ, ಟಿನ್‌ಗಳನ್ನು ತಾಳ ಮೇಳ ಮಾಡಿಕೊಂಡು ಬಡಿಯುತ್ತಾ ಸಂತಸಪಟ್ಟರು.

ಎದುರಿಗೆ ಬಂದವರಿಗೆ ‘ಏ ಕುಂಡೆ...’ ಎಂದು ಅಶ್ಲೀಲವಾಗಿ ಬೈಯುತ್ತಾ ಹಣ ಬೇಡಿದರು. ಪಟ್ಟಣ ತಾಲ್‌ ಶ್ರೀಮಂಗಲ, ಹುದುಕೇರಿ, ಬಾಳೆಲೆ, ಗೋಣಿಕೊಪ್ಪಲು, ಪೊನ್ನಪ್ಪಸಂತೆ, ಪಾಲಿಬೆಟ್ಟ, ತಿತಿಮತಿ, ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ, ಹುಣಸೂರು ತಾಲ್ಲೂಕಿನ ಹನಗೋಡು ಭಾಗದ ವೇಷಧಾರಿ ಗಿರಿ ಜನರು ಹಾಡು, ವಾದ್ಯಗಳ ಮೂಲಕ ಕುಣಿಯುತ್ತಾ ದೇವರಪುರಕ್ಕೆ ತೆರಳಿದರು.

ADVERTISEMENT

ಗುರುವಾರ ತಿತಿಮತಿ ಸಮೀಪದ ದೇವರಪುರ ಭದ್ರಕಾಳಿ ದೇವಸ್ಥಾನದ ಆವರಣದಲ್ಲಿ ನಡೆಯುವ ಕುಣಿತದ ಸಂಭ್ರಮದಲ್ಲಿ ಪಾಲ್ಗೊಂಡು ತಾವು ಬೇಡಿದ ಹಣವನ್ನೆಲ್ಲ ಭದ್ರಕಾಳಿ ದೇವಸ್ಥಾನದ ಹುಂಡಿಗೆ ಹಾಕಿ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಸಂಜೆಯಾದ ಬಳಿಕ ಮನೆಗೆ ತೆರಳುತ್ತಾರೆ.

ಈ ದೇವಸ್ಥಾನದ ಆಸುಪಾಸಿ ನಲ್ಲಿರುವ ಮನೆಯಪಂಡ ಮತ್ತು ಸಣ್ಣುವಂಡ ಕುಟುಂಬಸ್ಥರು ಭದ್ರಕಾಳಿ ದೇವಸ್ಥಾನದ ಭಂಡಾರ ಪೆಟ್ಟಿಗೆಯನ್ನು ಮಂಗಳವಾದ್ಯ ಮತ್ತು ಪೂಜೆಯೊಂದಿಗೆ ಹಬ್ಬದ ದಿನ ದೇವಸ್ಥಾನಕ್ಕೆ ತರುತ್ತಾರೆ. ಇದರೊಂದಿಗೆ ಕೃತಕವಾಗಿ ಕಟ್ಟಿದ ಜೋಡಿ ಕುದುರೆಯೂ ಬರುತ್ತವೆ. ಈ ಕುದುರೆಗಳ ದೇವಸ್ಥಾನದ ಆವರಣದಲ್ಲಿ ಸೇರಿದ್ದ ಭಕ್ತರೊಂದಿಗೆ ಸೇರಿ ಕುಣಿಯುತ್ತವೆ. ಸಂಜೆ ವೇಳೆಗೆ ಹಬ್ಬ ಮುಗಿದ ಬಳಿಕ ಮತ್ತೆ ತಮ್ಮ ಮನೆಗಳಿಗೆ ತೆರಳುತ್ತವೆ. ಈ ಕಾರ್ಯ ಗುರುವಾರ ನಡೆಯಲಿದೆ. ಮಧ್ಯಾಹ್ನ 12ರಿಂದ ಸಂಜೆ 6 ಗಂಟೆವರೆಗೆ ನಡೆಯುವ ಕುಂಡೆ ಹಬ್ಬದಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.