ADVERTISEMENT

ಮನೆ ಕಳವು ಪ್ರಕರಣ: ಅಸ್ಸಾಂ ಮೂಲದ ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 5:02 IST
Last Updated 25 ಜೂನ್ 2022, 5:02 IST
ಬಂಧಿತ ಆರೋಪಿಗಳೊಂದಿಗೆ ಪೊಲೀಸರು
ಬಂಧಿತ ಆರೋಪಿಗಳೊಂದಿಗೆ ಪೊಲೀಸರು   

ಮಡಿಕೇರಿ: ಕೊಡಗು ಜಿಲ್ಲೆಯ ಸಿದ್ದಾಪುರದ ಸಮೀಪ ಮೇಕೂರು ಹೊಸ್ಕೇರಿ ಗ್ರಾಮದ ಕೂತಂಡ ಸುಬ್ಬಯ್ಯ ಅವರ ನಿವಾಸದಲ್ಲಿ ಕಳ್ಳತನ ಮಾಡಿದ್ದ ಅಸ್ಸಾಂ ರಾಜ್ಯದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ₹ 11.70 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮತ್ತಿಬ್ಬರು ಆರೋಪಿಗಳು ಅಸ್ಸಾಂಗೆ ಪರಾರಿಯಾಗಿದ್ದು, ಅವರ ಪತ್ತೆಗಾಗಿ ತಂಡವೊಂದು ಅಸ್ಸಾಂಗೆ ತೆರಳಿದೆ.

‘ಕಳ್ಳತನ ನಡೆದಿದ್ದ ಕೂತಂಡ ಸುಬ್ಬಯ್ಯ ಅವರ ಮನೆಯ ಪಕ್ಕದ ಎಸ್ಟೇಟ್‌ನಲ್ಲಿ ಅಸ್ಸಾಂನಿಂದ ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದ ಕುರ್ಬನ್ ಅಲಿ (20), ಮಹಿರುದ್ದೀನ್ ಅಲಿ (28), ಸಫಿಕೂಲ್ ಇಸ್ಲಾಂ ಹಾಗೂ ಮೊಹಿಬುಲ್ ಇಸ್ಲಾಂ ಅವರು ಹೊಂಚು ಹಾಕಿ ಈ ಕೃತ್ಯ ಎಸಗಿದ್ದರು. ಅವರಲ್ಲಿ ಕುರ್ಬನ್ ಅಲಿ, ಮಹಿರುದ್ದೀನ್ ಅಲಿ ಬಂಧಿತರಾಗಿದ್ದಾರೆ. ಮತ್ತಿಬ್ಬರ ಸುಳಿವು ಅಸ್ಸಾಂನಲ್ಲಿ ಪತ್ತೆಯಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಡಿವೈಎಸ್‌ಪಿ ಗಜೇಂದ್ರಪ್ರಸಾದ್ ಅವರ ನೇತೃತ್ವದಲ್ಲಿ ಸಿಪಿಐ ಪಿ.ವಿ.ವೆಂಕಟೇಶ್, ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಮೋಹನ್‌ರಾಜ್, ಪ್ರಮೋದ್, ಎಎಸ್‌ಐಗಳಾದ ತಮ್ಮಯ್ಯ, ಬಿ.ಸಿ.ದೇವಯ್ಯ ಸೇರಿದಂತೆ ಒಟ್ಟು 29 ಮಂದಿಯ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು ಎಂದರು.

ಗಾಂಜಾ ಮಾರಾಟ; ಮೂವರ ಬಂಧನ

ಮಂಗಳೂರು ರಸ್ತೆಯ ತಾಳತ್ತಮನೆ ಜಂಕ್ಷನ್ ಬಳಿಯ ಬಸ್‌ ತಂಗುದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ₹ 15 ಸಾವಿರ ಮೌಲ್ಯದ 680 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಇಲ್ಲಿನ ಟಿ.ಜಾನ್‌ ಲೇಔಟ್ ನಿವಾಸಿ ಮಹಮ್ಮದ್ ಮೊಹಿಸಿನ್ (43), ಹಾಕತ್ತೂರಿನ ತೊಂಬತ್ತು ಮನೆಯ ನಿವಾಸಿ ಕರುಣಾಕುಮಾರ್ (27), ಅಪ್ಪಂಗಳದ ನಿವಾಸಿ ಪ್ರತಾಪಕುಮಾರ್ (28) ಬಂಧಿತ ಆರೋಪಿಗಳು ಎಂದು ತಿಳಿಸಿದರು.

ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಎಸ್.ಎಸ್.ರವಿಕಿರಣ್, ಸಿಬ್ಬಂದಿ ರವಿಕುಮಾರ್, ಎನ್.ಎಂ.ಮಂಜುನಾಥ್, ಎಚ್.ಸಿ.ಪ್ರಸನ್ನ, ಸೋಮಶೇಖರ ಸಜ್ಜನ, ಕೆ.ಡಿ.ದಿನೇಶ್, ಮಧು, ಪ್ರವೀಣ್, ಸುನಿಲ್ ಕಾರ್ಯಾಚರಣೆ ನಡೆಸಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.