ಉಡುಪಿ: ಬಗೆ ಬಗೆಯ ಹೂವುಗಳಿಂದ ನಳನಳಿಸುವ ಸಸ್ಯರಾಶಿಗಳ ಸೊಬಗು ಒಂದೆಡೆಯಾದರೆ. ಇನ್ನೊಂದೆಡೆ ತರಾವರಿ ತರಕಾರಿಗಳ ಲೋಕದ ಅನಾವರಣ. ಜೊತೆಗೆ ಕಣ್ಮನ ಸೆಳೆಯುವ ಕಲಾಕೃತಿಗಳು...
ಇದು ನಗರದ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ತೋಟಗಾರಿಕಾ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ 15ನೇ ಫಲಪುಷ್ಪ ಪ್ರದರ್ಶನದ ನೋಟ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಾದ ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿಯನ್ನು ಬಿಂಬಿಸುವ ಹೂವುಗಳಿಂದಲೇ ರಚಿಸಿರುವ ಕಲಾಕೃತಿಗಳು ನೋಡುಗರ ಗಮನ ಸೆಳೆಯುತ್ತಿವೆ. ಮೈಸೂರಿನ ಉಮಾ ಶಂಕರ್ ಅವರು ಈ ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.
ಪೆಟೂನಿಯ, ಸೆಲೋಷಿಯಾ, ಸಾಲ್ವಿಯ, ಸೇವಂತಿಗೆ, ಚೆಂಡು ಹೂವು, ಜೀನಿಯಾ, ತೊರೇನಿಯ, ಗುಲಾಬಿ ಸೇರಿದಂತೆ 23 ಜಾತಿಯ ಪುಷ್ಪಗಳು ಪ್ರದರ್ಶನಕ್ಕೆ ಕಳೆ ನೀಡಿವೆ. ವಿವಿಧ ಇಲಾಖೆಗಳ ಮಳಿಗೆಗಳೂ ಸೇರಿದಂತೆ 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ತೋಟಗಾರಿಕೆ ಉಪಕರಣ ಹಾಗೂ ವಿವಿಧ ವಸ್ತುಗಳ ಮಾರಾಟವು ಗರಿಗೆದರಿದ್ದವು. ಶಾಲಾ ಮಕ್ಕಳು ಹಾಗೂ ಕೃಷಿಯಾಸಕ್ತರು ಪ್ರದರ್ಶನವನ್ನು ವೀಕ್ಷಿಸಿದರು.
ಬಣ್ಣ ಬಣ್ಣದ ಕಲ್ಲಂಗಡಿ: ಫಲಪುಷ್ಪ ಪ್ರದರ್ಶನದ ಮಳಿಗೆಗಳಲ್ಲಿ ಬಣ್ಣ ಬಣ್ಣದ ಕಲ್ಲಂಗಡಿ ಹಣ್ಣಿನ ಮಳಿಗೆ ಹೆಚ್ಚು ಜನಾಕರ್ಷಕವಾಗಿತ್ತು. ಹಿರಿಯಡ್ಕದ ಸುರೇಶ್ ನಾಯಕ್ ಅವರು ಈ ತಳಿಯ ಕಲ್ಲಂಗಡಿ ಹಣ್ಣುಗಳನ್ನು ಬೆಳೆದಿದ್ದಾರೆ.
‘ನಾವು 10 ವರ್ಷಗಳಿಂದ ಕಲ್ಲಂಗಡಿ ಕೃಷಿ ಮಾಡುತ್ತಿದ್ದೇವೆ. ಕಳೆದ ವರ್ಷದಿಂದ ಥೈವಾನ್ ತಳಿಯ ಹಳದಿ ಬಣ್ಣದ ಕಲ್ಲಂಗಡಿಯನ್ನು ಬೆಳೆಯುತ್ತಿದ್ದೇವೆ. ಒಂದು ತಳಿಯಲ್ಲಿ ಕಪ್ಪುಬಣ್ಣದ ಕಲ್ಲಂಗಡಿಯೊಳಗೆ ಹಳದಿ ಬಣ್ಣವಿರುತ್ತದೆ. ಇನ್ನೊಂದು ತಳಿಯಲ್ಲಿ ಹೊರಗಡೆ ಹಳದಿ ಬಣ್ಣವಿದ್ದು ಒಳಗಡೆ ಕೆಂಪು ಬಣ್ಣ ಇರುತ್ತದೆ. ಇದಕ್ಕೆ ಹೆಚ್ಚಿನ ಬೇಡಿಕೆ ಇದೆ’ ಎನ್ನುತ್ತಾರೆ ಸುರೇಶ್ ನಾಯಕ್.
ಹಲಸು, ಮಾವು, ಸೀಬೆ ಮೊದಲಾದವುಗಳ ಗಿಡಗಳು, ಹೂವಿನ ಗಿಡಗಳು, ತರಕಾರಿ ಬೀಜಗಳ ಮಳಿಗೆಗಳೂ ಗಮನ ಸೆಳೆದವು.
ಫಲಪುಷ್ಪ ಪ್ರದರ್ಶನದ ಜೊತೆಗೆ ಕಾರ್ಯಾಗಾರ ಕೂಡ ನಡೆಯಲಿದೆ. ರೈತರು ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕುಭುವನೇಶ್ವರಿ ಉಪನಿರ್ದೇಶಕಿ ತೋಟಗಾರಿಕಾ ಇಲಾಖೆ
‘ಗ್ಯಾರೆಂಟಿ ಕಲಾಕೃತಿ ಪ್ರಮುಖ ಆಕರ್ಷಣೆ’
ಫಲಪುಷ್ಪ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಪಂಚ ಗ್ಯಾರಂಟಿಗಳ ಪರಿಕಲ್ಪನೆಯನ್ನು ಹೂವುಗಳಿಂದ ಅನಾವರಣಗೊಳಿಸಲಾಗಿದೆ. ಇದು ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ ಎಂದು ಹೇಳಿದರು. ಸಾರ್ವಜನಿಕರು ವಿದ್ಯಾರ್ಥಿಗಳು ಈ ಪ್ರದರ್ಶನವನ್ನು ವೀಕ್ಷಿಸಿ ತೋಟಗಾರಿಕೆಗೆ ಸಂಬಂಧಪಟ್ಟ ಮಾಹಿತಿ ಪಡೆದುಕೊಳ್ಳಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.