ಕುಶಾಲನಗರ: ಸಮೀಪದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ-ಅತ್ತೂರು ಮಾರ್ಗದಲ್ಲಿ ಗುರುವಾರ ಅಪರಿಚಿತ ವಾಹನವು ಡಿಕ್ಕಿ ಹೊಡೆದು ಜಿಂಕೆ ಮೃತಪಟ್ಟಿದೆ.
ಅತ್ತೂರು ಮೀಸಲು ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬಂದ 4ರಿಂದ 5 ವರ್ಷ ಪ್ರಾಯದ ಗಂಡು ಜಿಂಕೆಯು ರಸ್ತೆ ದಾಟುತ್ತಿರುವ ಸಂದರ್ಭದಲ್ಲಿ ವೇಗವಾಗಿ ಬಂದ ವಾಹನ ಗುದ್ದಿದ್ದು, ರಸ್ತೆ ಬದಿಯಲ್ಲಿ ಜಿಂಕೆಯ ಕಳೇಬರ ಬಿದ್ದಿದೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಮಾಡಿರುವ ವಾಹನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಸಭೆ ರದ್ದು: ಪ್ರತಿಭಟನೆ ಎಚ್ಚರಿಕೆ
ಸುಂಟಿಕೊಪ್ಪ: ಇಲ್ಲಿನ ಗ್ರಾಮ ಪಂಚಾಯಿತಿಯಿಂದ ಗುರುವಾರ ಕರೆದಿದ್ದ ಸಾಮಾನ್ಯ ಸಭೆಯನ್ನು ಅಗತ್ಯ ಸದಸ್ಯರ ಹಾಜಾರಾತಿಯಿಲ್ಲದ ಕಾರಣ ಮುಂದೂಡಲಾಯಿತು. ‘ಕಳೆದ 3 ತಿಂಗಳಿನಿಂದ ಸಭೆ ನಡೆಯದೆ ಅರ್ಜಿಗಳು ಚರ್ಚೆಗೆ ಬಾರದೆ ಎಲ್ಲ ಕೆಲಸಗಳಿಗೂ ಅಡ್ಡಿಯಾಗಿದ್ದು ಊರಿನ ಅಭಿವೃದ್ಧಿಗೆ ಕಂಠಕವಾಗಿದೆ. ಈ ತಿಂಗಳಲ್ಲಿ ನಾವು ನೀಡಿದ ಅರ್ಜಿಗಳು ಅನುಮೋದನೆಗೊಳ್ಳದಿದ್ದರೆ ಅಂತಹ ಸದಸ್ಯರ ವಜಾಕ್ಕೆ ಆಗ್ರಹಿಸಿ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ. ‘ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತ ಮುತ್ತಲು ಕಾಡು ಗಿಡಗಂಟಿಗಳು ಬೆಳೆದು ನಿಂತಿವೆ. ವೈದ್ಯಾಧಿಕಾರಿಗಳು ಇಲ್ಲದೆ ರೋಗಿಗಳು ಪರದಾಡುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಜನಸಾಮಾನ್ಯರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಗ್ರಾಮದ ಸ್ವಚ್ಛತೆಗೆ ಆದ್ಯತೆ ಕಲ್ಪಿಸುತ್ತಿಲ್ಲ. ಗ್ರಾಮಸ್ಥರಿಗೆ ಮನೆ ಕಟ್ಟಲು ಪರವಾನಗಿ ನೂತನ ವಾಣಿಜ್ಯ ಸಂಕೀರ್ಣ ಪರವಾನಗಿ ಭೂದಾಖಲೆಯ 9 ಮತ್ತು 11ಎ ದಾಖಲಾತಿ ನೀಡಬೇಕಾಗಿದ್ದು ಸಾಮಾನ್ಯ ಸಭೆ ನಡೆಯದೆ ಇರುವುದರಿಂದ ತೊಡಕುಂಟಾಗಿದೆ’ ಎಂದು ಗ್ರಾಮಸ್ಥರಾದ ವಿನೋದ್ ಅವಿನಾಶ್ ಬೇಸರ ವ್ಯಕ್ತಪಡಿಸಿದ್ದಾರೆ. ಕ್ರಮ ಕೈಗೊಳ್ಳಲಾಗುವುದು: ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಸಮಸ್ಯೆಗಳ ಚರ್ಚಿಸಲು ಸಭೆಗೆ ಆಗಮಿಸದೆ ಸದಸ್ಯರ ಅಸಹಕಾರ ತೋರುತ್ತಿರುವ ಹಿನ್ನಲೆಯಲ್ಲಿ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರುವ ಮೂಲಕ ಮುಂದಿನ ಹಂತದಲ್ಲಿ ಕ್ರಮಕೈಗೊಳ್ಳಲಾಗುವುದು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.