ಸೋಮವಾರಪೇಟೆ: ಜಿಲ್ಲೆಯಲ್ಲಿ ಇಂದಿಗೂ ಸಾಕಷ್ಟು ಕೂಲಿ ಕಾರ್ಮಿಕರು ತೋಟದ ಲೈನ್‌ಮನೆ ಮತ್ತು ಬಾಡಿಗೆ ಮನೆಗಳಲ್ಲಿ ಜೀವನ ನಡೆಸುತ್ತಿದ್ದು, ಪೈಸಾರಿ ಜಾಗವನ್ನು ತೆರವುಗೊಳಿಸಿ, ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಐ)ದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
‘ಕೊಡಗಿನಾದ್ಯಂತ ಗುರುತು ಮಾಡಿರುವ ಸರ್ಕಾರಿ ಪೈಸಾರಿ ಜಾಗಗಳು ದೊಡ್ಡ ಬೆಳೆಗಾರರ ಸುಪರ್ದಿಯಲ್ಲಿದೆ. ಸರ್ಕಾರ ಕೂಡಲೇ ಇದನ್ನು ವಶಕ್ಕೆ ಪಡೆದು ನಿವೇಶನ ರಹಿತರು, ಕೂಲಿ ಕಾರ್ಮಿಕರಿಗೆ ನೀಡಬೇಕು. ಕಳೆದ 22 ವರ್ಷಗಳಿಂದ ಸತತವಾಗಿ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಹಾಗೂ ಕಂದಾಯ ಇಲಾಖೆಗೆ ಮನವಿ ಮಾಡಿದ್ದರೂ, ಇದುವರೆಗೂ ಯಾರಿಂದಲೂ ಸ್ಫಂದನೆ ದೊರೆತಿಲ್ಲ’ ಎಂದು ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ಎಚ್.ಎಂ. ಸೋಮಪ್ಪ ಆರೋಪಿಸಿದರು.
‘ದುಡಿಯುವ ವರ್ಗದವರ ಬೇಡಿಕೆಗಳನ್ನು ಯಾರೂ ಈಡೇರಿಸುತ್ತಿಲ್ಲ. ಕೇವಲ ಮತ ಬ್ಯಾಂಕ್ ಎಂದು ಕಡೆಗಣಿಸುತ್ತಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವರು ಬಡವರಾಗಿಯೇ ಉಳಿದಿದ್ದಾರೆ. ಸರ್ಕಾರ ಎಲ್ಲರಿಗೂ ಸೂರು ನೀಡುತ್ತೇವೆ ಎಂದು ಭರವಸೆ ಮಾತ್ರ ನೀಡುತ್ತಿದೆ. ಬಡ ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಿ ಭೂಮಾಲೀಕರಿಗೆ ಪೂರಕವಾದ ನಿಯಮಗಳನ್ನು ಜಾರಿಗೆ ತರುತ್ತಿದೆ’ ಎಂದು ಆರೋಪಿಸಿದರು.
‘ಇನ್ನು ಮುಂದಾದರೂ ಜಿಲ್ಲೆಯ ಶಾಸಕರು, ಜಿಲ್ಲಾಡಳಿತ ಮತ್ತು ಆಯಾ ತಾಲ್ಲೂಕು ಆಡಳಿತ ಬಡವರಿಗೆ ಸೂರು ಕಲ್ಪಿಸಲು ಮುಂದಾಗಲಿ’ ಎಂದು ಮನವಿ ಮಾಡಿದರು.
ಬೇಡಿಕೆಗಳನ್ನು ಈಡೇರಿಸುವಂತೆ ಇಲ್ಲಿನ ಕಕ್ಕೆಹೊಳೆ ಬಳಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಕಾರರು ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಜೇಸಿ ವೇದಿಕೆಯಲ್ಲಿ ಪ್ರತಿಭಟನೆ ನಡೆಸಿದರು.
ನಂತರ ತಹಶೀಲ್ದಾರ್ ಮೂಲಕ ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ವಕೀಲರಾದ ಸುನಿಲ್, ಅಮ್ಜದ್, ಶಬಾನಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.