ADVERTISEMENT

ಮಡಿಕೇರಿ | ಇಂದು ವಿಶ್ವ ಮಿದುಳು ಆರೋಗ್ಯ ದಿನ; ತುರ್ತಾಗಿ ಬೇಕು ನರರೋಗ ತಜ್ಞರು

ಎಲ್ಲಾ ವಯಸ್ಸಿನವರಿಗೂ ಮಿದುಳಿನ ಆರೋಗ್ಯ– ಘೋಷವಾಕ್ಯ

ಕೆ.ಎಸ್.ಗಿರೀಶ್
Published 22 ಜುಲೈ 2025, 2:58 IST
Last Updated 22 ಜುಲೈ 2025, 2:58 IST
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿರುವ ‘ಮಿದುಳು ಆರೋಗ್ಯ ಕ್ಲಿನಿಕ್’
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿರುವ ‘ಮಿದುಳು ಆರೋಗ್ಯ ಕ್ಲಿನಿಕ್’   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ‘ಮಿದುಳು ಆರೋಗ್ಯ ಕ್ಲಿನಿಕ್’ ಕಳೆದ ವರ್ಷ ಮೇ ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ ಒಟ್ಟು 3 ಸಾವಿರಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಇಲ್ಲಿ ನರರೋಗ ತಜ್ಞರು ಹಾಗೂ ಫಿಸಿಯೊಥೆರಾಪಿಸ್ಟ್ ಹುದ್ದೆಗಳು ಖಾಲಿ ಇದ್ದು, ತುರ್ತು ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ.

ಈ ಕೇಂದ್ರದಲ್ಲಿ ಒಟ್ಟು 6 ಮಂದಿ ಸಿಬ್ಬಂದಿ ಇರಬೇಕಿದೆ. ಈಗ ಇರುವವರು ಮೂವರು ಮಾತ್ರ. ಅವರಲ್ಲಿ ವಾಕ್ ಮತ್ತು ಶ್ರವಣ ಚಿಕಿತ್ಸಕರು, ಮನಶಾಸ್ತ್ರಜ್ಞರು ಹಾಗೂ ಜಿಲ್ಲಾ ಸಂಯೋಜಕರು ಮಿದುಳು ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ.

ಮದ್ಯಪಾನ, ದೂಮಪಾನ, ಅನಿಯಂತ್ರಿತ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಸೇರಿದಂತೆ ಇನ್ನಿತರ ಕಾರಣಗಳಿಂದ ಮಿದುಳಿಗೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಅವುಗಳಲ್ಲಿ ಪಾರ್ಶ್ವವಾಯು, ಅಪಸ್ಮಾರ, ಆಲ್ಜೈಮರ್ಸ್, ಡಿಮಿನ್ಷಿಯಾ, ಪಾರ್ಕಿನ್ಸನ್, ಮಲ್ಟಿಪಲ್ ಸ್ಕ್ಲೆರೋಸಿಸ್ (ಎಂಎಸ್) ಪ್ರಮುಖವಾಗಿವೆ. ಇವುಗಳಿಗೆಲ್ಲ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಹೆಚ್ಚಿನ ಮಂದಿ ಪಾರ್ಶ್ವವಾಯುವಿಗೆ ಒಳಗಾದವರು ಆಸ್ಪತ್ರೆಗೆ ಬಾರದೇ ಮೈಸೂರು ಮತ್ತು ಮಂಗಳೂರಿಗೆ ಹೋಗುತ್ತಿದ್ದಾರೆ. ಅಲ್ಲಿ ನರರೋಗತಜ್ಞರು ಇರುವುದರಿಂದ ಸಹಜವಾಗಿಯೇ ‘ಬ್ರೇನ್ ಆ್ಯಂಜಿಯೊಗ್ರಾಂ’ ಸೇರಿದಂತೆ ಇತರ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿವೆ. ಆದರೆ, ಕೊಡಗಿನಲ್ಲಿ ಈ ಬಗೆಯ ಅತ್ಯಾಧುನಿಕ ಚಿಕಿತ್ಸೆಗಳು ಲಭ್ಯವಿಲ್ಲ.

‘ಎಂಆರ್‌ಐ’ ಸ್ಕ್ಯಾನಿಂಗ್‌ ಮಾಡಿ ಕಾಯಿಲೆಯನ್ನು ನಿರ್ಧಾರ ಮಾಡಿ, ಇಲ್ಲಿ ಅಗತ್ಯಕ್ಕೆ ತಕ್ಕಂತೆ ಥೆರಪಿಗಳನ್ನು ಕೊಡಲಾಗುತ್ತದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದವರನ್ನು ನಿಮಾನ್ಸ್‌ಗೆ ಕಳುಹಿಸಲಾಗುತ್ತದೆ.

ಈ ಕೇಂದ್ರ ಆರಂಭಕ್ಕೂ ಮುನ್ನ ಮೈಸೂರು ಇಲ್ಲವೇ ಮಂಗಳೂರಿಗೆ ಹೋಗಬೇಕಾಗಿತ್ತು. ಮಿದುಳಿನ ನರರೋಗಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಈಗ ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿರುವ ಮಿದುಳು ಆರೋಗ್ಯ ಕ್ಲಿನಿಕ್
ವಿಕ್ರಂ ಜಿಲ್ಲಾ ಸಂಯೋಜನಾಧಿಕಾರಿ.
ಡಾ.ಆನಂದ್
ಫಿಸಿಯೊಥೆರಾಪಿಸ್ಟ್ ಮಾಸಾಂತ್ಯದಲ್ಲಿ ಬರಲಿದ್ದಾರೆ. ಉಳಿದಂತೆ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಚಿಕಿತ್ಸೆಗೆ ನೀಡಲಾಗುತ್ತಿದೆ. ಅಗತ್ಯ ಇದ್ದವರು ಜಿಲ್ಲಾಸ್ಪತ್ರೆ ಕೊಠಡಿ ಸಂಖ್ಯೆ 17ಕ್ಕೆ ಬರಬಹುದು
ಆರ್‌.ವಿಕ್ರಮ್ ಜಿಲ್ಲಾ ಸಂಯೋಜಕರು ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ.

ಅರ್ಜಿ ಸಲ್ಲಿಸುವವರೇ ಇಲ್ಲ!:

ಕೊಡಗು ಜಿಲ್ಲೆಯ ನರರೋಗ ತಜ್ಞರ ಹುದ್ದೆಗೆ ಅರ್ಜಿ ಸಲ್ಲಿಸುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ತಿಂಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆದರೆ ಒಂದು ಅರ್ಜಿಯೂ ಸಲ್ಲಿಕೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ‘ಕೊಡಗು ಜಿಲ್ಲೆಯ ತಜ್ಞ ವೈದ್ಯರಿಗಾಗಿಯೇ ಬೇರೆ ಜಿಲ್ಲೆಗಳಿಗಿಂತ ಹೆಚ್ಚಿನ ಮೊತ್ತದ ವೇತನ ಪ್ಯಾಕೇಜ್‌ ನಿಗದಿಪಡಿಸಿದರೆ ಬಹುಶಃ ಅರ್ಜಿ ಸಲ್ಲಿಸಬಹುದು. ಈ ಕುರಿತು ವೈದ್ಯಕೀಯ ನೀತಿಯಲ್ಲೇ ಬದಲಾವಣೆ ಆಗಬೇಕಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ವೈದ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಟೆಲಿ ನ್ಯೂರಾಲಜಿ’ ಸೇವೆ ಇದೆ:

‘ಕೊಡಗಿನಲ್ಲಿ ನರರೋಗ ತಜ್ಞರು ಇಲ್ಲದಿದ್ದರೂ ಇಲ್ಲಿ ‘ಟೆಲಿ ನ್ಯೂರಾಲಜಿ’ ಸೇವೆ ಇದೆ’ ಎಂದು ಮಿದುಳು ಆರೋಗ್ಯ ಉಪಕ್ರಮದ ನೋಡಲ್ ಅಧಿಕಾರಿ ಡಾ.ಆನಂದ್ ‘ಪ್ರಜಾವಾಣಿ’ಗೆ ತಿಳಿಸಿದರು. ಇಲ್ಲಿಗೆ ಬರುವ ರೋಗಿಗಳ ಕುರಿತು ಬೆಂಗಳೂರಿನ ನಿಮ್ಹಾನ್ಸ್‌ನ ತಜ್ಞ ವೈದ್ಯರನ್ನು ‘ಟೆಲಿ ನ್ಯೂರಾಲಜಿ’ ಮೂಲಕ ಸಂಪರ್ಕಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ಮಿದುಳಿಗೆ ಸಂಬಂಧಿಸಿದಂತೆ ಸಮಸ್ಯೆ ಉಳ್ಳವರು ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯ ಹೊಸ ಕಟ್ಟಡದ ಕೊಠಡಿ ಸಂಖ್ಯೆ 17ಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದರು.

ಮಡಿಕೇರಿಯಲ್ಲಿ ಇಂದು ವಿಶ್ವ ಮಿದುಳಿನ ದಿನಾಚರಣೆ:

ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ(ಕೆಎಬಿಎಚ್‍ಐ)ದ ವತಿಯಿಂದ ವಿಶ್ವ ಮಿದುಳಿನ ದಿನ 2025 ರ ಕಾರ್ಯಕ್ರಮದ ಅಂಗವಾಗಿ ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯಲ್ಲಿರುವ ಬೋಧನೆ ಕೊಠಡಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.