ADVERTISEMENT

ಅಯ್ಯಂಗೇರಿಯಲ್ಲಿ ಚಿನ್ನತಪ್ಪ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2020, 14:33 IST
Last Updated 15 ಫೆಬ್ರುವರಿ 2020, 14:33 IST
ಅಯ್ಯಂಗೇರಿ ಗ್ರಾಮದಲ್ಲಿ ಜರುಗುವ ಚಿನ್ನತಪ್ಪ ಉತ್ಸವದಲ್ಲಿ ಚಿನ್ನದ ಕೊಳಲಿನ ಮೆರವಣಿಗೆ.(ಸಂಗ್ರಹ ಚಿತ್ರ)
ಅಯ್ಯಂಗೇರಿ ಗ್ರಾಮದಲ್ಲಿ ಜರುಗುವ ಚಿನ್ನತಪ್ಪ ಉತ್ಸವದಲ್ಲಿ ಚಿನ್ನದ ಕೊಳಲಿನ ಮೆರವಣಿಗೆ.(ಸಂಗ್ರಹ ಚಿತ್ರ)   

ನಾಪೋಕ್ಲು: ಭಾಗಮಂಡಲ ಹೋಬಳಿಯ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ಫೆಬ್ರವರಿ 16 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು ಉತ್ಸವಕ್ಕೆ ಗ್ರಾಮದ ಜನತೆ ಸಜ್ಜಾಗುತ್ತಿದ್ದಾರೆ. ಚಿನ್ನತಪ್ಪ ಹಬ್ಬದಲ್ಲಿ ಶ್ರೀಕೃಷ್ಣನ ಕೊಳಲಿಗೆ ವಿವಿಧ ವಿಧಿ ವಿಧಾನದೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ.

ಅಯ್ಯಂಗೇರಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ’ಚಿನ್ನತಪ್ಪ‘ ಹಬ್ಬದಿಂದ ಊರು ಜನಮನ ಸೆಳೆದಿದೆ. ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣ ದೇಗುಲವಿರುವ ಏಕೈಕ ಗ್ರಾಮ ಎಂಬ ಹೆಗ್ಗಳಿಕೆಯೂ ಇಲ್ಲಿಗಿದೆ. ಗೊಲ್ಲ ಜನಾಂಗದವರು ಹಾಗೂ ಊರಿನ ಇತರೆ ಜನಾಂಗದವರು ಒಗ್ಗೂಡಿ ನಡೆಸುವ ಈ ಹಬ್ಬ ಪ್ರತಿವರ್ಷ ವಿವಿಧ ಸಂಪ್ರದಾಯದೊಂದಿಗೆ ನೆರವೇರುತ್ತದೆ.‌

ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಹಬ್ಬದಲ್ಲಿ ಕೊಳಲನ್ನು ಎತ್ತಿಕೊಳ್ಳುವವನಿಗೆ ಶ್ರೀಕೃಷ್ಣ ಪರಮಾತ್ಮ ಧರಿಸುವ ಆಭರಣ ತೊಡಿಸುವರು. ಎತ್ತು ಪೋರಾಟದ ಎತ್ತುಗಳನ್ನು ಗದ್ದೆಯಲ್ಲೇ ಮೂರು ಸುತ್ತು ಓಡಿಸುತ್ತಾರೆ. ಬಿಳಿ ಸೀರೆ ಉಟ್ಟ ಹದಿನಾರು ಕುಟುಂಬದ ಮಹಿಳೆಯರು ಚೆಂಬುಚೆರ್ಕ್ ಒಪ್ಪಿಸುವ ಪದ್ದತಿ ಇದೆ. ಇಲ್ಲಿ ಗೊಲ್ಲ ಜನಾಂಗದವರೇ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದು ಬಂದಿದೆ.

ADVERTISEMENT

ಪ್ರತಿವರ್ಷ ಬೆಳಗ್ಗಿನ ಹಬ್ಬದೊಂದಿಗೆ ಆರಂಭಗೊಳ್ಳುವ ಉತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ಧಾರೆ ಪೂಜೆ, ಪಟ್ಟಣಿ ಹಬ್ಬ, ಕತ್ತಲಾವರಿಸಿದ ನಂತರ ಆರಂಭಗೊಳ್ಳುವ ಪೂಜೆ ಬೆಳಗಿನ ಜಾವ ಎರಡು ಗಂಟೆಯವರೆಗೆ ಜರುಗುತ್ತದೆ. ಮರುದಿನ ಜರುಗುವ ಪಟ್ಟಣಿ ಹಬ್ಬವನ್ನು ವೀಕ್ಷಿಸಲು ಅಸಂಖ್ಯಾತ ಭಕ್ತರು ಬಂದು ಸೇರುತ್ತಾರೆ.

’ಊರ ಮಂದ್‘ನಲ್ಲಿ ಅಶ್ಚತ್ಥ ವೃಕ್ಷದ ಕೆಳಗೆ ಶ್ರೀಕೃಷ್ಣನನ್ನು ಪೂಜಿಸುವುದರೊಂದಿಗೆ ವಿಶೇಷ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತವೆ. ಕೆಲವು ಹಿರಿಯರ ಪ್ರಕಾರ, ಶ್ರೀಕೃಷ್ಣ ಇಲ್ಲಿಗೆ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಬಿಟ್ಟು ಹೋದನಂತೆ. ಆ ಕೊಳಲನ್ನು ಶ್ರೀಕೃಷ್ಣನ ನೆನಪಿನಲ್ಲಿ ಆ ಊರವರು ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರಂತೆ. ಹಬ್ಬದ ದಿನ ’ಎತ್ತು ಪೋರಾಟ‘ ನಡೆಯುತ್ತದೆ. ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಪಟ್ಟಣಿ ಹಬ್ಬದಂದು ಹೆಚ್ಚಿನ ಭಕ್ತರು ಆಗಮಿಸುತ್ತಾರೆ.

ಆ ದಿನ ಒಂದೊಂದು ಕುಟುಂಬದಿಂದ ಒಬ್ಬೊಬ್ಬ ಮಹಿಳೆ ಶ್ವೇತ ವಸ್ತ್ರ ಧರಿಸಿ ಹರಿವಾಣದಲ್ಲಿ ಹೂ ಅಕ್ಕಿ ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾಳೆ. ಸಂಜೆ ಹೊಳೆಯಲ್ಲಿ ಮೀನಿಗೆ ಅಕ್ಕಿ ಹಾಕುವ ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.