ADVERTISEMENT

ಮೌಲ್ಯಗಳಿಂದ ಉತ್ತಮ ಸಮಾಜ ನಿರ್ಮಾಣ: ಪೆಮ್ಮಂಡ ಕೌಶಿ ಕಾವೇರಮ್ಮ

ಎನ್‌ಎಸ್‌ಎಸ್ ಘಟಕದ ವಾರ್ಷಿಕ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 4:12 IST
Last Updated 5 ಅಕ್ಟೋಬರ್ 2025, 4:12 IST
ವಿರಾಜಪೇಟೆಯ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಲು
ವಿರಾಜಪೇಟೆಯ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಲು   

ವಿರಾಜಪೇಟೆ: ವಿದ್ಯಾರ್ಥಿಗಳು ಪಾಠ ಪ್ರವಚನದೊಂದಿಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸಮೀಪದ ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅವರು ಹೇಳಿದರು.

ಸಮೀಪದ ಕಡಂಗ ಅರಪಟ್ಟು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಪಟ್ಟಣದ ಕಾವೇರಿ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ಶಿಬಿರಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಯುವ ಸಮೂಹವು ಪೂರಕವಾಗಿ ಪ್ರತಿಸ್ಪಂದಿಸಬೇಕು. ಕಾಲೇಜು ಶಿಕ್ಷಣದಲ್ಲಿ ಪಠ್ಯ ಪುಸ್ತಕದಲ್ಲಿನ ಮಾಹಿತಿ ಪಡೆದುಕೊಂಡಲ್ಲಿ ಸಾಲದು, ಸಮಾಜದ ಬಗ್ಗೆ ಅರಿವು ಹೊಂದುವುದು ಹಾಗೂ ಪೂರಕವಾಗಿ ಸ್ಪಂದಿಸುವುದು ಅತಿಮುಖ್ಯ. ಪೋಷಕರು ಮತ್ತು ಶಿಕ್ಷಕರ ಒತ್ತಡಕ್ಕೆ ಮಣಿದು ಅಧ್ಯಯನ ನಡೆಸುವುದಲ್ಲ. ಬದಲಿಗೆ ಆತ್ಮಗೌರವ ಶಿಕ್ಷಣದ ಹಂಬಲದೊಂದಿಗೆ ಓದುವುದು ಮುಖ್ಯವಾಗಬೇಕು ಎಂದರು.

ADVERTISEMENT

ಧ್ವಜಾರೋಹಣ ಮಾಡಿ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ಎಂ. ವಿನೋದ್ ನಾಣಯ್ಯ, ಶಿಸ್ತು, ಸಂಯಮ, ನಡತೆ ಹಾಗೂ ನಾಯಕತ್ವ ಕಲಿಯಲು ಶಿಬಿರಗಳು ಉತ್ತಮ ವೇದಿಕೆಯಾಗಿವೆ. ಶಿಬಿರದಲ್ಲಿ ಕಲಿಯುವ ಪ್ರತಿಯೊಂದು ವಿಷಯ ಜೀವನ ಸುಧಾರಣೆಗೆ ಅತಿಅಗತ್ಯ ಅಂಶಗಳಾಗಿವೆ. ಎನ್‌ಎಸ್‌ಎಸ್‌ ಶಿಬಿರಗಳು ಉತ್ತಮ ನಾಯಕತ್ವದ ಗುಣ ಹಾಗೂ ಮೌಲ್ಯಯುತವಾದ ಬದುಕಿಗೆ ಪೂರಕ ಎಂದರು.

ಎಡಪಾಲ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಕೆ.ಎ. ಉಮ್ಮರ್ ಅವರು ಮಾತನಾಡಿ, ಶಿಸ್ತುಬದ್ಧ ಜೀವನದಿಂದ ಮಾತ್ರ ಸಾಧನೆ ಸಾಧ್ಯ. ಸಮಾಜದಲ್ಲಿ ನಡೆಯುವ ಭ್ರಷ್ಟಚಾರ, ಹಿಂಸೆ, ಮಾದಕ ವಸ್ತುಗಳ ಬಳಕೆ ಮುಂತಾದ ಸಾಮಾಜಿಕ ಪಿಡುಗುಗಳು ಸಮಾಜವನ್ನು ವಿನಾಶದತ್ತ ದೂಡುತ್ತಿವೆ. ಇವುಗಳ ವಿರುದ್ಧ ವಿದ್ಯಾರ್ಥಿಗಳು ಸಮರ ಸಾರಬೇಕಿದೆ. ವಿಕಸಿತ ಹಾಗೂ ಭವ್ಯ ಭಾರತದ ಕಲ್ಪನೆಯು ಸಾಕಾರವಾಗಬೇಕಾದರೆ ಯುವ ಸಮುದಾಯವು ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನೆಡಿಕ್ಟ್ ಆರ್ ಸಲ್ಡಾನ ಅವರು ಶಿಬಿರಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಭವ್ಯಶ್ರೀ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಾಲೆಯ ಸಹ ಶಿಕ್ಷಕರಾದ ವತ್ಸಲ ಹಾಗೂ ಕಾಲೇಜಿನ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿ ಸುನಿಲ್ ಕುಮಾರ್ ಬಿ.ಬಿ ಉಪಸ್ಥಿತರಿದ್ದರು.

ಉಪನ್ಯಾಸಕರಾದ ನಿರ್ಮಿತಾ, ಮಾಣಿಕ್ಯ, ಡಾ. ವೀಣಾ, ಪ್ರಿಯ ಮುದ್ದಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಪಾಂಡಂಡ ರಾಣಿ ಗಣಪತಿ, ನಂಬಿಯಪಂಡ ವಾಣಿ ತಮ್ಮಯ್ಯ ಸೇರಿದಂತೆ ಶಿಬಿರಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.

 ವಿರಾಜಪೇಟೆಯ ಕಾವೇರಿ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅವರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.