ADVERTISEMENT

ಮಡಿಕೇರಿ: ಸರ್ಕಾರಿ ಶಾಲೆಗೆ ನೆರವಿನ ಹಸ್ತ ಚಾಚಿದ ವಿವಿಧ ಸಂಘ, ಸಂಸ್ಥೆಗಳು

ಪಾಲಿಬೆಟ್ಟ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 6:35 IST
Last Updated 14 ಜುಲೈ 2025, 6:35 IST
ಮಡಿಕೇರಿಯ ಸಮೀಪದ ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಘ–ಸಂಸ್ಥೆಗಳು ನೀಡಿದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು
ಮಡಿಕೇರಿಯ ಸಮೀಪದ ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಘ–ಸಂಸ್ಥೆಗಳು ನೀಡಿದ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು   

ಮಡಿಕೇರಿ: ಇದುವರೆಗೂ 80ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರಗಳನ್ನು ವಿತರಣೆ ಮಾಡಲಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಕಿಟ್ಟುಗಳನ್ನ ವಿತರಿಸಲಾಗಿದೆ ಎಂದು ಬನವಾಸಿ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ ಜೈ ಕಿರಣ್ ತಿಳಿಸಿದರು.

ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಬೆಂಗಳೂರಿನ ಯುಎಸ್‌ಟಿ ಸಂಸ್ಥೆ, ಬನವಾಸಿ ಕನ್ನಡಿಗರು, ಕನ್ನಡಮಯ ಟ್ರಸ್ಟ್, ನಮ್ಮ ಕೊಡಗು ತಂಡ ಮತ್ತು ಕೊಡಗು ಪತ್ರಕರ್ತರ ಸಂಘದ ವತಿಯಿಂದ ನಡೆದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘9 ವರ್ಷಗಳಿಂದಲೂ ಕೊಡಗು ಜಿಲ್ಲೆಯಲ್ಲಿ ಸಮಾಜಮುಖಿ ಕಾರ್ಯಗಳೊಂದಿಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ನೆರವಾಗಲಾಗುತ್ತಿದೆ. ಕೊಡಗು ಜಿಲ್ಲೆಯಿಂದ ಬೆಂಗಳೂರು ಜನರ ದಾಹ ನೀಗಿಸಲು ಕಾವೇರಿ ನೀರು ಸಿಗುತ್ತಿದ್ದು, ಈ ಮಣ್ಣಿನ ಋಣ ತೀರಿಸಲು ವಿವಿಧ ಸಂಸ್ಥೆಗಳ ಸಹಕಾರದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ’ ಎಂದು ಹೇಳಿದರು.

ADVERTISEMENT

ನಮ್ಮ ಕೊಡಗು ತಂಡದ ಸ್ಥಾಪಕ ಅಧ್ಯಕ್ಷ ನೌಶಾದ್ ಜನ್ನತ್ ಮಾತನಾಡಿ, ‘ಹತ್ತು ವರ್ಷಗಳಿಂದ ಪ್ರವಾಹ, ಪ್ರಕೃತಿ ವಿಕೋಪ, ಕೋವಿಡ್ ಸೇರಿದಂತೆ ಸಂಕಷ್ಟದಲ್ಲಿರುವ ಗ್ರಾಮೀಣ ಭಾಗದ ಜನರು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗಲು ಬೆಂಗಳೂರಿನ ಸಂಸ್ಥೆಗಳು ಕೈಜೋಡಿಸುತ್ತಿವೆ’ ಎಂದು ಶ್ಲಾಘಿಸಿದರು.

ಕ್ಲಸ್ಟರ್ ಸಿಆರ್‌ಪಿ ಕರಂಬಯ್ಯ ಮಾತನಾಡಿ, ‘ಶೈಕ್ಷಣಿಕ ಬೆಳವಣಿಗೆಗೆ ಸರ್ಕಾರವು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರೊಂದಿಗೆ ಸಂಘ–ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿವೆ. ಇದರಿಂದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ರೂಪಿಸಲು ಸಾಧ್ಯವಾಗಲಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತಿಯ ಸಾಮಾಜಿಕ ನ್ಯಾಯ ಸಮಿತಿಯ ಮಾಜಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಸಮಾಜ ಸೇವಾ ಸಂಘಟನೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜ ಸೇವಕ ಡಾ.ಎ.ಸಿ.ಗಣಪತಿ ಮಾತನಾಡಿ, ‘ಯುಎಸ್‌ಟಿ ಹಾಗೂ ಬನವಾಸಿ ಕನ್ನಡಿಗರ ತಂಡ ಬೆಂಗಳೂರಿನಿಂದ ಬಂದು ಪಾಲಿಬೆಟ್ಟದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಮಾದರಿಯಾಗಿದ್ದಾರೆ’ ಎಂದರು.

ಪಾಲಿಬೆಟ್ಟ ಪ್ರೌಢಶಾಲಾ ಮುಖ್ಯಶಿಕ್ಷಕ ಯು.ಕೆ.ಅಶ್ರಫ್, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ.ಅನಿಲ್, ಪ್ರಧಾನ ಕಾರ್ಯದರ್ಶಿ ಸುರೇಶ್ ಬೆಳಿಗಿರಿ, ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ವಿ.ರವಿಕುಮಾರ್, ಕಾರ್ಯದರ್ಶಿ ಅರುಣ್ ಕೂರ್ಗ್, ಬನವಾಸಿ ಕನ್ನಡಿಗರು ಕನ್ನಡಮಯ ಟ್ರಸ್ಟ್‌ನ ಮುಖಂಡರಾದ ಶಮಂತ ಹೊಸಹೊಳಲು, ಕಿರಣ್ಮಯಿ ಶರ್ಮ, ದುಬಾರೆ ಸರ್ಕಾರಿ ತಮಿಳು ಶಾಲಾ ಮುಖ್ಯಶಿಕ್ಷಕಿ ಮಲ್ಲಿಗೇಶ್ವರಿ, ಯುಎಸ್‌ಟಿ ಸಂಸ್ಥೆಯ ಮುಖ್ಯಸ್ಥ ಕಿರಣ್ ಕುಮಾರ್, ಮುಖಂಡರಾದ ಸ್ಮಿತಾ ಶರ್ಮಾ, ವಿಶ್ವಾಸ್, ರಾಹುಲ್, ನಿತಿನ್, ಮನು, ಶಿಕ್ಷಕರಾದ ಜಿ.ಮದನ್ ಕುಮಾರ್, ಆಶಾಮೋಹನ್, ಬಿ.ಎಸ್.ಆರತಿ‌, ಜಿ.ದಿವ್ಯಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.