ADVERTISEMENT

ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತವೆಂದು ಬರೆಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 4:43 IST
Last Updated 17 ಸೆಪ್ಟೆಂಬರ್ 2025, 4:43 IST
ಎಚ್.ವಿ.ಶಿವಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ.
ಎಚ್.ವಿ.ಶಿವಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ.   

ಮಡಿಕೇರಿ: ರಾಜ್ಯ ಸರ್ಕಾರದ ವತಿಯಿಂದ ಸೆ. 22ರಿಂದ ಆರಂಭವಾಗಲಿರುವ ಶೈಕ್ಷಣಿಕ ಹಾಗೂ ಸಾಮಾಜಿಕ, ಆರ್ಥಿಕ ಜನಗಣತಿಯ ಸಮಯದಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದವರು ಧರ್ಮದ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದೇ ಬರೆಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.

‘ಸಮೀಕ್ಷೆ ಅನುಸೂಚಿಯ 8ರ ಧರ್ಮದ ಕಾಲಂನಲ್ಲಿ ನೀಡಿರುವ 11ನೇ ಕೋಡ್‌ನ ಇತರೆ ಎಂದಿರುವ ಸ್ಥಳದಲ್ಲಿ ‘ವೀರಶೈವ ಲಿಂಗಾಯತ’ ಎಂದು ಮತ್ತು 9ರ ಜಾತಿ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ನಿಗದಿತ ಸಂಕೇತ ಸಂಖ್ಯೆಯನ್ನು ನೀಡಿ ನಮೂದಿಸಿ ಹಾಗೆಯೇ 10ರ ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿಗಳನ್ನು ಕೋಡ್ ಸಮೇತ ಮಾಹಿತಿಗಳನ್ನು ತಪ್ಪಿಲ್ಲದಂತೆ ನೀಡಬೇಕು’ ಎಂದು ಘಟಕದ ಅಧ್ಯಕ್ಷ ಎಚ್.ವಿ.ಶಿವಪ್ಪ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರವು ಮುಂದಿನ ದಿನಗಳಲ್ಲಿ ಆರ್ಥಿಕ ಅಭಿವೃದ್ಧಿ ಯೋಜನೆಗಳನ್ನು ರೂ‍ಪಿಸುವಾಗ ಜಾತಿ ಗಣತಿಯ ದತ್ತಾಂಶಗಳನ್ನು ಉಪಯೋಗಿಸಿಕೊಳ್ಳಲು ಅನುಕೂಲವಾಗುತ್ತದೆ. ಆದ ಕಾರಣ ವೀರಶೈವ ಲಿಂಗಾಯತ ಸಮುದಾಯದವರು ನಿಖರವಾದ ಮಾಹಿತಿಯನ್ನು ನೀಡುವುದು ಹಾಗೂ ನಮ್ಮ ಸಮುದಾಯದ ಶೈಕ್ಷಣಿಕ ಉದ್ಯೋಗ ಆಸ್ತಿ, ಆರ್ಥಿಕ ಪರಿಸ್ಥಿತಿ ಈ ಎಲ್ಲ ಮಾಹಿತಿಗಳನ್ನು ನೀಡಬೇಕು’ ಎಂದು ಹೇಳಿದರು.

ADVERTISEMENT

ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು, ಶಿಕ್ಷಣ, ಉದ್ಯೋಗಗಳ ಬಗ್ಗೆ ಸರ್ಕಾರದ ಸೌಲಭ್ಯಗಳು ಮೀಸಲಾತಿ ಆಧಾರಗಳಲ್ಲಿ ಹಂಚಿಕೆಯಾಗುವುದರಿಂದ ನಮ್ಮ ಸಮುದಾಯದವರು ಸರಿಯಾದ ಸರ್ಮಪಕ ಮಾಹಿತಿ ನೀಡಬೇಕು ಹಾಗೂ ಯಾವುದೇ ಕಾರಣಕ್ಕೂ ತಪ್ಪು ಮಾಹಿತಿ ನೀಡಬಾರದು’ ಎಂದು ಅವರು ಮನವಿ ಮಾಡಿದರು.

ಘಟಕದ ಪದಾಧಿಕಾರಿಗಳಾದ ಎಚ್.‍ಪಿ.ಉದಯಕುಮಾರ್, ಎಂ.ಎಸ್.ಗಣೇಶ್, ಬಿ.ವಿ.ಬಸವರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.