ADVERTISEMENT

ಕನ್ನಡದ ಸಿರಿಗೆ ಕೊಡಗಿನ ಕೊಡುಗೆ ಅಪಾರ

ಓದಿ, ಬರೆಯುವಂತೆ ಕಿವಿಮಾತು ಹೇಳಿದ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 10:51 IST
Last Updated 30 ನವೆಂಬರ್ 2022, 10:51 IST
‘ಪ್ರಜಾವಾಣಿ’ ಅಮೃತ ಮಹೋತ್ಸವದ ಪ್ರಯುಕ್ತ ಪ್ರಜಾವಾಣಿ, ಕೊಡವ ಮಕ್ಕಡ ಕೂಟ, ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗವು ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕರ್ನಾಟಕ ರಾಜ್ಯೋತ್ಸವ’ದಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಲಕ್ಷ್ಮೀದೇವಿ ಎಲ್‌., ಕಾಲೇಜಿನ ಪ್ರಾಂಶುಪಾಲ ಡಾ.ಚೌರೀರ ಜಗತ್‌ ತಿಮ್ಮಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಇದ್ದಾರೆ (ಎಡಚಿತ್ರ). ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಲೇಜಿನ ವಿದ್ಯಾರ್ಥಿಗಳು
‘ಪ್ರಜಾವಾಣಿ’ ಅಮೃತ ಮಹೋತ್ಸವದ ಪ್ರಯುಕ್ತ ಪ್ರಜಾವಾಣಿ, ಕೊಡವ ಮಕ್ಕಡ ಕೂಟ, ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗವು ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕರ್ನಾಟಕ ರಾಜ್ಯೋತ್ಸವ’ದಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಲಕ್ಷ್ಮೀದೇವಿ ಎಲ್‌., ಕಾಲೇಜಿನ ಪ್ರಾಂಶುಪಾಲ ಡಾ.ಚೌರೀರ ಜಗತ್‌ ತಿಮ್ಮಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ ಅಯ್ಯಪ್ಪ ಇದ್ದಾರೆ (ಎಡಚಿತ್ರ). ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾಲೇಜಿನ ವಿದ್ಯಾರ್ಥಿಗಳು   

ಮಡಿಕೇರಿ: ‘ಕನ್ನಡವನ್ನು ಶ್ರೀಮಂತ ಭಾಷೆ ಮಾಡಲು‌ ಕೊಡಗಿನ ಕೊಡುಗೆ ಅಪಾರವಾಗಿದೆ. ಕೊಡಗಿನ ಜನರು ಕನ್ನಡ ಸಾಹಿತ್ಯಕ್ಕೆ ಅಸಾಧಾರಣ ಕೊಡುಗೆ ಕೊಟ್ಟಿದ್ದಾರೆ. ಇಂದಿನ ವಿದ್ಯಾರ್ಥಿಗಳು ಓದಿ, ಬರೆಯುವ ಮೂಲಕ ಆ ಪರಂಪರೆ ಯನ್ನು ಮುಂದುವರಿಸ ಬೇಕು’ ಎಂದು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ತಿಳಿಸಿದರು.

‘ಪ್ರಜಾವಾಣಿ’ ಅಮೃತ ಮಹೋತ್ಸ ವದ ಪ್ರಯುಕ್ತ ಪ್ರಜಾವಾಣಿ, ಕೊಡವ ಮಕ್ಕಡ ಕೂಟ, ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕನ್ನಡ ಹಾಗೂ ಪತ್ರಿಕೋದ್ಯಮ ವಿಭಾಗವು ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಕರ್ನಾಟಕ ರಾಜ್ಯೋತ್ಸವ ಹಾಗೂ ವಿಶೇಷ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ‘ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ’ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳು ಸಾಹಿತ್ಯಕ್ಕಾಗಿಯೇ ನಿತ್ಯವೂ ಒಂದಿಷ್ಟು ಸಮಯ ಮೀಸಲಿ ಡಬೇಕು. ಹಿರಿಯ ಸಾಹಿತಿಗಳ ಪುಸ್ತಕ ಗಳನ್ನು ಓದಬೇಕು. ನಂತರ ಸೃಜನಾತ್ಮಕ ವಾಗಿ ಬರೆಯಬೇಕು. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಮತ್ತಷ್ಟು ಕೊಡುಗೆ ಕೊಡಬೇಕು ಎಂದು ಸಲಹೆ ನೀಡಿದರು.

ADVERTISEMENT

‘ಪ್ರಜಾವಾಣಿ’ ಅಮೃತ ಮಹೋತ್ಸ ವದ ಪ್ರಯುಕ್ತ ‘ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ’ ಕುರಿತು ಏರ್ಪಡಿಸಿರುವ ವಿಶೇಷ ಉಪನ್ಯಾಸ ಮಹತ್ವದ್ದಾಗಿದೆ. ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ ಅಸಾ ಧಾರಣವಾಗಿದೆ’ ಎಂದು ಹೇಳಿದರು.

‘1857ರ ನಂತರ ಕೊಡಗಿನಲ್ಲಿ ಸಾರ್ವಜನಿಕ ಶಿಕ್ಷಣ ಆರಂಭವಾಯಿತು. 1892ರಲ್ಲಿ ಕೊರವಂಡ ಡಾ.ಅಪ್ಪಯ್ಯ, ನಂತರ ಅಪ್ಪಚ್ಚ ಕವಿಗಳು ಸಮೃದ್ಧ ಸಾಹಿತ್ಯ ರಚಿಸಿದರು. ಅವರೊಬ್ಬರು ದೊಡ್ಡ ಪಂಡಿತೋತ್ತಮರಾಗಿದ್ದರು’ ಎಂದು ಹೇಳಿದರು.

‘ನಡಿಕೇರಿಯಂಡ ಚಿಣ್ಣಪ್ಪ ಅವರ ‘ಪಟ್ಟೋಲೆ ಪಳಮೆ’ ಕೃತಿಯು ಕನ್ನಡ ಜಾನಪದ ಸಂಗ್ರಹ ಕೃತಿಗಳಲ್ಲೇ ಆಚಾರ್ಯ ಕೃತಿ ಹಾಗೂ ದಕ್ಷಿಣ ಭಾರತ ದಲ್ಲೇ ಮೇಲ್ಪಂಕ್ತಿಯಲ್ಲಿ ನಿಲ್ಲುವಂತಹ ದ್ದಾಗಿದೆ. ಕೊಡಗಿನ ಗೌರಮ್ಮ ಸಹ ಶ್ರೇಷ್ಠ ಕಥೆಗಾರ್ತಿಯಾಗಿ, ಕನ್ನಡದಲ್ಲಿ ಮಹತ್ವ ಪೂರ್ಣವಾದ ಕಥೆಗಳನ್ನು ರಚಿಸಿದ್ದಾರೆ’ ಎಂದರು.

ಇಲ್ಲಿನ ದಿನಪತ್ರಿಕೆಗಳೂ ಕನ್ನಡದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ. 1920ರಲ್ಲಿ ಆರಂಭವಾದ ‘ಕೊಡಗು’ ಪತ್ರಿಕೆ ಕೊಡಗನ್ನು ಮತ್ತು ಕನ್ನಡ ನಾಡನ್ನು ಬೆಸೆಯುವ ಕೆಲಸ ಮಾಡಿತು. ನಂತರ ಬಂದ ‘ಜನ್ಮಭೂಮಿ’ ಪತ್ರಿಕೆಯೂ ಈ ಕೆಲಸ ಮಾಡಿತು. ‘ಶಕ್ತಿ’ ಪ‍ತ್ರಿಕೆ ಆರಂಭಿಸಿದ ಗೋಪಾಲಕೃಷ್ಣ ಅವರೂ ಸಾಹಿತಿಯಾಗಿದ್ದು, ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದರು.

‘ಹೊರಗಿನಿಂದ ಬಂದು ಕೊಡಗಿನಲ್ಲಿ ನೆಲೆಸಿದವರೂ ಕನ್ನಡಕ್ಕೆ ಕೊಡುಗೆ ಕೊಟ್ಟಿದ್ದಾರೆ. ಅವರಲ್ಲಿ ಪಂಜೆ ಮಂಗೇಶರಾಯರ ಕೊಡುಗೆಯನ್ನು ಬಣ್ಣಿಸಲು ಅಸದಳ’ ಎಂದ ಅವರು, ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲಿ ನಿಂದಳೋ?’ ಎಂಬ ಅವರ ‘ಹುತ್ತರಿ ಹಾಡು’ ಕೃತಿಯ ಪದ್ಯವನ್ನು ಉಲ್ಲೇಖಿಸಿದರು.

ಕನ್ನಡ ಕಾದಂಬರಿ ಪ್ರಪಂಚದ ಮೇರುಗಿರಿ ಎನಿಸಿದ ಭಾರತೀಸುತ ಅವರೂ ಇಲ್ಲಿಯೇ ಇದ್ದವರು. ಕೋಡಿ ಕುಶಾಲಪ್ಪ, ಡಿ.ಎನ್.ಕೃಷ್ಣಯ್ಯ ಅವರ ಕೊಡುಗೆಯನ್ನು ಸ್ಮರಿಸಿದರು.

ಯದುರ್ಕಲ ಶಂಕರನಾರಾಯಣ ಭಟ್ಟ ಅವರು ಹಿಂದೂ ಸಂಸ್ಕೃತಿ ಬಗ್ಗೆ, ಕಾವೇರಿ ವೈಭವ ಕುರಿತು ಬರೆದರು. ವಿ.ಎಸ್.ರಾಮಕೃಷ್ಣ ಅವರು ಷಟ್ಪದಿ ಗಳಲ್ಲಿ ಬರೆದರು. ಸೋಮವಾರ ಪೇಟೆಯ ಬಷೀರ್ ಅಹಮ್ಮದ್, ಬಿ.ಡಿ.ಸುಬ್ಬಯ್ಯ ಸಹ ಕೊಡುಗೆ ಕೊಟ್ಟಿದ್ದಾರೆ ಎಂದರು.

ಕನ್ನಡ ಸಂಘವನ್ನು ಉದ್ಘಾಟಿಸಲಾ ಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಚೌರೀರ ಜಗತ್‌ತಿಮ್ಮಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಲಕ್ಷ್ಮೀದೇವಿ ಎಲ್‌., ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಇಳಯರಾಜ, ಮೋನಿಕಾ, ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಧ್ಯಕ್ಷೆ ಸವಿತಾ ರೈ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.