ADVERTISEMENT

ವಿರಾಜಪೇಟೆ | ಎಲ್ಲೆಂದರಲ್ಲಿ ಕಸ ಬಿಸಾಡಿದರೆ ದಂಡ ವಿಧಿಸಿ: ಸುಜಾ ಕುಶಾಲಪ್ಪ ತಾಕೀತು

ಪುರಸಭೆ ಅಧಿಕಾರಿಗಳಿಗೆ ವಿಧಾನಪರಿಷತ್ತಿನ ಸದಸ್ಯ ಎಂ.ಸುಜಾ ಕುಶಾಲಪ್ಪ ತಾಕೀತು

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:55 IST
Last Updated 10 ಜುಲೈ 2025, 2:55 IST
ವಿರಾಜಪೇಟೆ ಪುರಸಭೆಯ ಸಾಮಾನ್ಯ ಸಭೆಯು ಮಂಗಳವಾರ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ವಿಧಾನ ಪರಿಷತ್‌ ಸದಸ್ಯ ಎಂ.ಸುಜಾ ಕುಶಾಲಪ್ಪ ಮಾತನಾಡಿದರು
ವಿರಾಜಪೇಟೆ ಪುರಸಭೆಯ ಸಾಮಾನ್ಯ ಸಭೆಯು ಮಂಗಳವಾರ ಪುರಸಭೆಯ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು. ವಿಧಾನ ಪರಿಷತ್‌ ಸದಸ್ಯ ಎಂ.ಸುಜಾ ಕುಶಾಲಪ್ಪ ಮಾತನಾಡಿದರು   

ವಿರಾಜಪೇಟೆ: ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಬೇಕಿದೆ. ಎಲ್ಲೆಂದರಲ್ಲಿ ಕಸ ಬಿಸಾಡುವವರ ವಿರುದ್ಧ ಕ್ರಮ ತೆಗೆದುಕೊಂಡು, ಅವರಿಗೆ ದಂಡ ವಿಧಿಸಬೇಕು. ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ವಿಧಾನ ಪರಿಷತ್‌ ಸದಸ್ಯ ಎಂ.ಸುಜಾ ಕುಶಾಲಪ್ಪ ತಾಕೀತು ಮಾಡಿದರು.

ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ತೋಡುಗಳ ಹೂಳೆತ್ತುವ ವಿಚಾರ, ಕಸ ವಿಲೇವಾರಿ, ರಸ್ತೆಗಳಿಗೆ ಹೆಸರಿಡುವ ವಿಚಾರವಾಗಿ ಪರ–ವಿರೋಧ ಚರ್ಚೆಗಳು ನಡೆದವು.

ಸದಸ್ಯ ಪೃಥ್ವಿನಾಥ್ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿರುವ ಮುಖ್ಯತೋಡುಗಳ ಹೂಳೆತ್ತುವ ಕಾಮಗಾರಿಗೆ ಸುಮಾರು ₹10 ಲಕ್ಷ ಮೀಸಲಿಟ್ಟಿರುವುದು ಸರಿಯಲ್ಲ. ₹ 10 ಲಕ್ಷ ಕಾಮಗಾರಿಗೆ ಜೆಸಿಬಿ ಬಾಡಿಗೆಗೆ ಪಡೆದರೆ ಜನರ ತೆರಿಗೆ ಹಣ ಪೋಲಾಗುತ್ತದೆ. ಬಾಡಿಗೆ ನೀಡುವ ಹಣದಲ್ಲಿ ಪುರಸಭೆಗೆ ಜೆಸಿಬಿಯನ್ನೇ ಕೊಂಡುಕೊಳ್ಳಬಹುದು ಎಂದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರು ಮಾತನಾಡಿ, ಹೂಳೆತ್ತುವ ಸಲುವಾಗಿ ಹಣ ಮೀಸಲಿರಿಸಲಾಗಿದೆಯಷ್ಟೆ ಎಂದು ಸಮಜಾಯಿಷಿ ನೀಡಿದರು.

ಸದಸ್ಯ ಶಭರೀಶ್ ಶೆಟ್ಟಿ ಮಾತನಾಡಿ, ಕಸ ವಿಲೇವಾರಿ ಮಾಡುವ ಪುರಸಭೆಯ ವಾಹನಗಳು ಸುಸ್ಥಿಯಲ್ಲಿಲ್ಲ. 7 ಗಂಟೆಗೆ ಬರಬೇಕಾದ ವಾಹನಗಳು ಕೆಲವೊಮ್ಮೆ ಬೆಳಿಗ್ಗೆ 11 ಗಂಟೆಯಾದರೂ ಬರುವುದಿಲ್ಲ. ವಾಹನಗಳನ್ನು ಮೊದಲು ಸುಸ್ಥಿಯಲ್ಲಿಡುವ ಕೆಲಸವಾಗಬೇಕು ಎಂದರು.
ಇದಕ್ಕೆ ದ್ವನಿಗೂಡಿಸಿದ ಸದಸ್ಯ ಡಿ.ಪಿ.ರಾಜೇಶ್, ಕಸ ವಿಲೇವಾರಿ ವಾಹನಗಳ ಕೆಲ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದು, ಈ ಕುರಿತು ಅಧಿಕಾರಿಗಳು ಗಮನಹರಿಸಬೇಕು ಎಂದರು.

ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಶಾಸಕರ ಪ್ರಯತ್ನದಿಂದ ಬೆಂಗಳೂರು ಕೊಡವ ಸಮಾಜಕ್ಕೆ ಸುಮಾರು 7 ಎಕರೆ ಜಾಗ ಮಂಜೂರಾಗಿದ್ದು, ಇದಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಗುವುದು ಎಂದರು.

ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ತಿನ ಸದಸ್ಯ ಸುಜಾ ಕುಶಾಲಪ್ಪ, ಇದರಿಂದ ಕೊಡವ ಮತ್ತು ಕೊಡವ ಭಾಷಿಕ ಜನಾಂಗಕ್ಕೆ ಒಳಿತಾಗಲಿದೆ. ಶಾಸಕರ ಕಾರ್ಯ ಶ್ಲಾಘನೀಯ ಎಂದರು.

ಪುರಸಭೆಯ ಸ್ಥಾಯಿ ಸಮಿತಿ ರಚನೆಯಾದ ಬಳಿಕ ಸ್ಥಾಯಿ ಸಮಿತಿ ಸದಸ್ಯರಿಗೆ ಸರಿಯಾದ ಮಾಹಿತಿ ನೀಡದೆ ಸಭೆ ನಡೆಸಲಾಗಿದೆ. ನಮ್ಮ ಅವಶ್ಯಕತೆ ಸಮಿತಿಗೆ ಇಲ್ಲವಾದಲ್ಲಿ ಸಮಿತಿ ವಿಸರ್ಜಿಸಿ ಎಂದು ಸಮಿತಿ ಸದಸ್ಯರಾದ ಡಿ.ಪಿ.ರಾಜೇಶ್, ಮಹಮ್ಮದ್ ರಾಫಿ, ಮತೀನ್ ಅಸಮಾಧಾನ ವ್ಯಕ್ತಪಡಿಸಿದರು.

ಸದಸ್ಯ ವಿನಾಂಕ್ ಕುಟ್ಟಪ್ಪ ಮಾತನಾಡಿ, ಮೀನುಪೇಟೆ ರಸ್ತೆಗೆ ‘ಕಂಚಿ ಕಾಮಾಕ್ಷಿ ರಸ್ತೆ’ ಎಂದು ನಾಮಕರಣ ಮಾಡಿರುವುದು ಸಂತೋಷದ ವಿಚಾರ. ಆದರೆ, ಇದೇ ರಸ್ತೆಯಲ್ಲಿ ಮುತ್ತಪ್ಪ ದೇವಸ್ಥಾನವಿದೆ. ಆದ್ದರಿಂದ ದೇವಾಲಯದ ಸಮಿತಿಯವರು ಹಾಗೂ ಸ್ಥಳೀಯರು ಈ ರಸ್ತೆಗೆ ಮರುನಾಮಕರಣ ಮಾಡುವಂತೆ ಕೋರಿದ್ದಾರೆ ಎಂದರು.

ಇದಕ್ಕೆ ಸದಸ್ಯ ಜಿ.ಜಿ. ಮೋಹನ್ ಪ್ರತಿಕ್ರಿಯಿಸಿ, ವಿರಾಜಪೇಟೆಯ ಏಕೈಕ ಕಂಚಿ ಕಾಮಾಕ್ಷಿ ದೇವಾಲಯ ಆ ಭಾಗದಲ್ಲಿದೆ. ಆದ್ದರಿಂದ ರಸ್ತೆಗೆ ಕಂಚಿ ಕಾಮಾಕ್ಷಿ ರಸ್ತೆ ಎಂದು ನಾಮಕರಣ ಮಾಡಲು ಪುರಸಭೆಗೆ ಮನವಿ ಮಾಡಲಾಗಿದ್ದು, ಆ ಸಂದರ್ಭ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದ್ದರು ಎಂದರು.

‘ಈಗಾಗಲೇ ನಾಮಕರಣ ಮಾಡಿಯಾಗಿದೆ. ಆದರೆ ಸ್ಥಳಿಯರು ಹಾಗೂ ದೇವಾಲಯ ಆಡಳಿತ ಮಂಡಳಿಯ ಕೋರಿಕೆಯಂತೆ ಮುತ್ತಪ್ಪ ಅವರ ಹೆಸರನ್ನು ಸೇರ್ಪಡೆಗೊಳಿಸಿ ಮರು ನಾಮಕರಣ ಮಾಡಬೇಕು’ ಎಂದು ಸುಜಾ ಕುಶಾಲಪ್ಪ ಸೂಚಿಸಿದರು.

ಸಭೆಯಲ್ಲಿ ಸದಸ್ಯರಾದ ಆಶಾ ಸುಬ್ಬಯ್ಯ, ಸುನಿತಾ ಜೂನಾ, ಅನಿತಾ, ರಜನಿಕಾಂತ್, ರಂಜಿ ಪೂಣಚ್ಚ, ಅಗಸ್ಟಿನ್ ಅವರು ತಮ್ಮ ವಾರ್ಡ್‌ಗಳ ವ್ಯಾಪ್ತಿಯ ಚರಂಡಿ, ವಿದ್ಯುತ್, ಬೀದಿ ದೀಪ, ಸ್ವಚ್ಛತೆ, ಹೀಗೆ ಹಲವು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.

ಮುಖ್ಯಾಧಿಕಾರಿ ನಾಚಪ್ಪ, ಎಂಜಿನಿಯರ್‌ ಹೇಮ್ ಕುಮಾರ್, ಅಧಿಕಾರಿಗಳಾದ ರೀತು ಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ಜಲೀಲ್, ಪುರಸಭೆ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.