
ವಿರಾಜಪೇಟೆ: ಪಟ್ಟಣದ ತೆಲುಗರ ಬೀದಿಯ ಅಂಗಾಳ ಪರಮೇಶ್ವರಿ ದೇವಾಲಯದ ವಾರ್ಷಿಕ ಉತ್ಸವವು ಸೋಮವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತ್ತು.
13ರಂದು ದೇವಾಲಯದ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಉತ್ಸವದ 2ನೇ ದಿನದಂದು ದೇವಾಲಯದ ರಕ್ಷಕ ದೈವಗಳಿಗೆ ಪೂಜೆ ಸಮರ್ಪಿಸಲಾಯಿತು. ಉತ್ಸವ ಪ್ರಮುಖ ದಿನವಾದ 3ನೇ ದಿನದಂದು ದೇವಿಗೆ 4 ಕಾಲಗಳ ಮಹಾಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಸುಗಂಧ ದ್ರವ್ಯ, ಪುಷ್ಪರ್ಚನೆ ಹಾಗೂ ವಿವಿಧ ಅಭಿಷೇಕ ಸೇರಿದಂತೆ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು.
ಉತ್ಸವದ ಕೊನೆಯ ದಿನದಂದು ಮಹಾಪೂಜೆಯ ಬಳಿಕ ಪಟ್ಟಣದ ಮುಖ್ಯರಸ್ತೆಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯು ಪಟ್ಟಣದ ಮಲಬಾರ್ ರಸ್ತೆಯಲ್ಲಿನ ಕಂಚಿ ಕಾಮಾಕ್ಷಿ ದೇವಾಲದಲ್ಲಿ ಪೂಜೆ ಸಲ್ಲಿಸಿ ದೇವಾಲಯಕ್ಕೆ ಹಿಂದಿರುಗಿತು. ಮೆರವಣಿಗೆಯಲ್ಲಿ ವಿವಿಧ ದೇವರ ಪ್ರತಿರೂಪಗಳೊಂದಿಗೆ, ಚಂಡೆಮೇಳ, ವಿವಿಧ ಧಾನ್ಯಗಳ ಸಸಿ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಗಮನಸೆಳೆದರು. ಉತ್ಸವದ ಅಂಗವಾಗಿ ದೇವಾಲಯದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.