ವಿರಾಜಪೇಟೆ: ಪಟ್ಟಣದಲ್ಲಿ ಈಗ ಅಲ್ಲೊಂದು, ಇಲ್ಲೊಂದು ಸುಸಜ್ಜಿತಾದ ಬಸ್ ತಂಗುದಾಣಗಳು ನಿರ್ಮಾಣವಾದರೂ ಇನ್ನೂ ಹಲವೆಡೆ ಪ್ರಯಾಣಿಕರು ಮಳೆಯಲ್ಲೇ ನೆನೆಯುತ್ತ ಬಸ್ ಹತ್ತಬೇಕಿದೆ.
ಪಟ್ಟಣದ ಜೈನ ಬೀದಿಯಲ್ಲಿನ ಬಸವೇಶ್ವರ ದೇವಾಲಯದ ಬಳಿ ಇರುವ ಹಳೆಯ ಬಸ್ ತಂಗುದಾಣವನ್ನು ಆಧುನಿಕ ಮಾದರಿಯಲ್ಲಿ ಅಭಿವೃದ್ಧಿಗೊಳಿಸಿದರೆ ಅಥವಾ ಪುನರ್ ನಿರ್ಮಿಸಿ, ಉತ್ತಮವಾಗಿ ನಿರ್ವಹಣೆ ಮಾಡಿದರೆ ಅಮ್ಮತ್ತಿ, ಸಿದ್ದಾಪುರ, ಕುಶಾಲನಗರ ಭಾಗದ ಕಡೆಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ಇದರಿಂದ ದೊಡ್ಡಟ್ಟಿ ಚೌಕಿ ಬಳಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಬಸ್‌ಗಾಗಿ ನಿಲ್ಲುವುದು ತಪ್ಪಲಿದೆ. ದೊಡ್ಡಟ್ಟಿ ಚೌಕಿ ಬಳಿ ಬಸ್ ನಿಲುಗಡೆ ಮಾಡುವುದರಿಂದ ಆಗುತ್ತಿರುವ ವಾಹನ ದಟ್ಟಣೆ ಸಮಸ್ಯೆಯೂ ಕಡಿಮೆಯಾಗಲಿದೆ.
ಪಟ್ಟಣದ ಮೂರ್ನಾಡು ರಸ್ತೆಯ ಜಂಕ್ಷನ್ ಸಮೀಪದಲ್ಲಿ ಬಸ್ ತಂಗುದಾಣ ನಿರ್ಮಿಸಿದರೆ ಮೂರ್ನಾಡು, ಮಡಿಕೇರಿ, ನಾಪೋಕ್ಲು ಕಡೆ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದು ಕೂಡ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ನೆರವಾಗಲಿದೆ.
ಇಲ್ಲೆಲ್ಲ ಜನರು ಈಗ ಮಳೆಯಲ್ಲೇ ನೆನೆಯುತ್ತ ಬಸ್‌ಗಾಗಿ ಕಾಯಬೇಕಿದೆ. ಇಲ್ಲಿ ರಸ್ತೆಯಲ್ಲೇ ನಿಲ್ಲಿಸುವ ಬಸ್‌ಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಬಸ್ ತಂಗುದಾಣವನ್ನು ವ್ಯವಸ್ಥಿತವಾಗಿ ಇಲ್ಲಿ ನಿರ್ಮಿಸಿದರೆ ನಿಜಕ್ಕೂ ಅನೇಕ ಸಮಸ್ಯೆಗಳು ಪರಿಹಾರ ಕಾಣುತ್ತವೆ.
ಗ್ರಾಮೀಣ ಪ್ರದೇಶದ ಕೆಲವೆಡೆ ತಂಗುದಾಣಗಳಿದ್ದರೂ ದುಸ್ಥಿತಿ ಹಾಗೂ ಸ್ವಚ್ಛತೆ ಇಲ್ಲದೆ ಪ್ರಯಾಣಿಕರು ಬಳಕೆಗೆ ಹಿಂದೇಟು ಹಾಕುತ್ತಿದ್ದಾರೆ. ಸಮೀಪದ ಪೆರುಂಬಾಡಿಯ ಬಳಿ ಇರುವ ಒಂದು ಬಸ್ ತಂಗುದಾಣದ ಚಾವಣಿ ಸಂಪೂರ್ಣ ಕಳಚಿ ಬಿದ್ದಿದ್ದರೆ, ಮತ್ತೊಂದು ತಂಗುದಾಣ ಗಿಡಗಂಟಿ ಬೆಳೆದು ಪಾಳು ಬಿದ್ದಿದೆ. ಇದರಿಂದ ಎರಡೂ ತಂಗುದಾಣಗಳು ಸಾರ್ವಜನಿಕರ ಬಳಕೆ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇದೆ.
ಅಗತ್ಯವಿರುವ ಕಡೆಗಳಲ್ಲಿ ಪಾಳು ಬಿದ್ದಿರುವ ಅಥವಾ ದುಸ್ಥಿತಿಯಲ್ಲಿರುವ ತಂಗುದಾಣಗಳನ್ನು ಅಭಿವೃದ್ಧಿಗೊಳಿಸಬೇಕಾದ ಹಾಗೂ ತಂಗುದಾಣಗಳಿಲ್ಲದ ಕಡೆಗಳಲ್ಲಿ ತಂಗುದಾಣ ನಿರ್ಮಿಸಬೇಕಾದ ಅಗತ್ಯತೆ ಇದೆ.
ತಂಗುದಾಣ ನಿರ್ಮಿಸಿದರೆ ಹಿರಿಯ ನಾಗರಿಕರು, ಪುಟ್ಟಮಕ್ಕಳು, ಗರ್ಭಿಣಿಯರು, ರೋಗಿಗಳು ಸೇರಿದಂತೆ ಪ್ರಯಾಣಿಕರಿಗೆ ತಂಗುದಾಣಗಳಿಂದ ಸಾಕಷ್ಟು ಅನುಕೂಲವಾಗುತ್ತದೆ. ಅದರಲ್ಲು ವಿಶೇಷವಾಗಿ ಕೊಡಗಿನಂತಹ ಮಲೆನಾಡು ಪ್ರದೇಶದಲ್ಲಿ ಸುರಿಯುವ ಅಬ್ಬರದ ಮಳೆ, ಗಾಳಿ ಹಾಗೂ ಬಿಸಿಲಿನಿಂದ ರಕ್ಷಣೆ ನೀಡುತ್ತದೆ.
ಪಟ್ಟಣದ ಚಿಕ್ಕಪೇಟೆ, ಸೇರಿದಂತೆ ಅಗತ್ಯವಿರುವ ಹಲವೆಡೆಗಳಲ್ಲಿ ತಂಗುದಾಣಗಳು ಉತ್ತಮ ಸ್ಥಿತಿಯಲ್ಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಆದರೆ ಇನ್ನು ಕೆಲವೆಡೆ ಆಧುನಿಕ ಮಾದರಿಯ ಹಾಗೂ ಸ್ವಚ್ಛತೆಯಿಂದ ಕೂಡಿದ ತಂಗುದಾಣ ನಿರ್ಮಾಣ ಹಾಗೂ ನಿರ್ವಹಣೆಯಿಂದ ಕೂಡಿದ್ದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಆಧುನಿಕ ಮಾದರಿಯ ತಂಗುದಾಣ ಉದ್ಘಾಟನೆ: ವಿರಾಜಪೇಟೆ ಪಟ್ಟಣದ ಪಂಜರುಪೇಟೆಯ ನಿಸರ್ಗ ಬಡಾವಣೆ ಬಳಿ ಶಾಸಕರ ನಿಧಿಯಿಂದ ₹10.50 ಲಕ್ಷ ವೆಚ್ಚದಲ್ಲಿ ಈಚೆಗೆ ನಿರ್ಮಾಣವಾದ ಆಧುನಿಕ ಮಾದರಿಯ ಬಸ್ ತಂಗುದಾಣ ಗಮನ ಸೆಳೆಯುತ್ತಿದೆ.
ಇದಕ್ಕೂ ಕೆಲವು ದಿನಗಳ ಮೊದಲು ಪಟ್ಟಣ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದ ಆಟೊ ರಿಕ್ಷಾ ನಿಲ್ದಾಣದ ಬಳಿ ಪುಟ್ಟದಾದ ತಂಗುದಾಣ ನಿರ್ಮಿಸಲಾಗಿತ್ತು. ಈ ಪುಟ್ಟ ತಂಗುದಾಣದಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ನಿತ್ಯ ಅನುಕೂಲವಾಗುತ್ತಿದೆ. ತಂಗುದಾಣ ನಿರ್ಮಿಸುವ ಮೊದಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಳೆ ಗಾಳಿ, ಬಿಸಿಲಿನಲ್ಲೆ ನಿಂತುಕೊಂಡು ಖಾಸಗಿ ಬಸ್‌ಗಳಿಗೆ ಕಾಯಬೇಕಾದ ಸ್ಥಿತಿ ಇತ್ತು.
ಈ ಹಿಂದೆ ಇತ್ತು ಎನ್ನಲಾದ ತಂಗುದಾಣಗಳ ಬಗ್ಗೆ ಅಧ್ಯಕ್ಷರು ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿವುದುನಾಚಪ್ಪ ಮುಖ್ಯಾಧಿಕಾರಿ ವಿರಾಜಪೇಟೆ ಪುರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.