ADVERTISEMENT

ಮತದಾನ ಅತ್ಯಮೂಲ್ಯ ಹಕ್ಕು

ರಾಷ್ಟ್ರೀಯ ಮತದಾರರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2019, 11:56 IST
Last Updated 26 ಜನವರಿ 2019, 11:56 IST
ಮಡಿಕೇರಿಯ ಹಳೇ ಕೋಟೆಯ ವಿಧಾನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು
ಮಡಿಕೇರಿಯ ಹಳೇ ಕೋಟೆಯ ವಿಧಾನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ರಾಷ್ಟ್ರೀಯ ಮತದಾರರ ದಿನಾಚರಣೆ’ಯಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು   

ಮಡಿಕೇರಿ: ‘ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಹಾಗೂ ರಾಷ್ಟ್ರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮತದಾನದ ಮಹತ್ವವನ್ನು ಅರಿತು ತಮ್ಮ ಹಕ್ಕು ಚಲಾಯಿಸಿಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಕರೆ ನೀಡಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ರಾಷ್ಟ್ರದಲ್ಲಿ ಶೇ 99ರಷ್ಟಾದರೂ ಮತದಾನ ಆಗಬೇಕು. ಇದರಿಂದ ರಾಷ್ಟ್ರದ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಡಿ.ಪವನೇಶ್ ಮಾತನಾಡಿ, ‘ಹದಿನೆಂಟು ವರ್ಷ ಪೂರ್ಣಗೊಂಡವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತದಾನ ಮಾಡಬೇಕು. ಮತದಾನ ಮಾಡದಿದ್ದಲ್ಲಿ ಸರ್ಕಾರವನ್ನು ನೈತಿಕವಾಗಿ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಅರ್ಹರೆಲ್ಲರೂ ಕಡ್ಡಾಯವಾಗಿ ಮತಹಕ್ಕು ಚಲಾಯಿಸಬೇಕು’ ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಮಾತನಾಡಿ, ‘ಇಡೀ ವಿಶ್ವದಲ್ಲಿಯೇ ರಾಷ್ಟ್ರವು ಮಾದರಿ ಪ್ರಜಾಪ್ರಭುತ್ವ ಹೊಂದಿದ್ದು, ಸುಭದ್ರ ಆಡಳಿತ ವ್ಯವಸ್ಥೆಗೆ ಎಲ್ಲರೂ ಕೈಜೋಡಿಸಬೇಕು. ಆ ನಿಟ್ಟಿನಲ್ಲಿ ಯುವಜನರು ಮತದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ನುಡಿದರು.

ಪ್ರಭಾರ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ ಹದಿನೆಂಟು ವರ್ಷ ಪೂರ್ಣಗೊಂಡವರೆಲ್ಲರೂ ಮತಹಕ್ಕು ಚಲಾಯಿಸಬೇಕು. ಯುವ ಜನರು ಯಾವುದೇ ರೀತಿಯ ಒತ್ತಡ, ಆಮಿಷಗಳಿಗೆ ತುತ್ತಾಗದೆ ಮತದಾನ ಮಾಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ್ ಮಾತನಾಡಿದರು. ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೂಲಕ ದೃಷ್ಟಿ ದೋಷವುಳ್ಳವರಿಗೆ ಇದೇ ಮೊದಲ ಬಾರಿಗೆ ಬ್ರೈಲ್ ಲಿಪಿಯುಳ್ಳ ಚುನಾವಣಾ ಗುರುತಿನ ಪತ್ರವನ್ನು ವಿತರಿಸಲಾಯಿತು.

ರಾಷ್ಟ್ರೀಯ ಮತದಾರರ ದಿನಾಚರಣೆಯ ಮಹತ್ವ ಕುರಿತು ಪ್ರೌಢಶಾಲೆ, ಪಿ.ಯು, ಪದವಿ ಹಾಗೂ ಪಾಲಿಟೆಕ್ನಿನಿಕ್ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಹಾಗೆಯೇ ಉತ್ತಮ ಕಾರ್ಯ ನಿರ್ವಹಿಸಿದ ಮತಗಟ್ಟೆ (ಬಿಎಲ್‌ಒ) ಅಧಿಕಾರಿಗಳನ್ನು ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಡಿವೈಎಸ್‌ಪಿ ಸುಂದರರಾಜ್, ಉಪ ವಿಭಾಗಧಿಕಾರಿ ಟಿ.ಜವರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.