ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಕಾವೇರಿಯ ಕಾವೇರಿ ಉಗಮ ಸ್ಥಾನ ಬ್ರಹ್ಮಕುಂಡಿಕೆಗೆ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಕ್ಷೇತ್ರಕ್ಕೆ ಭೇಟಿ ನೀಡಿದ ಕೆಲವೇ ಕೆಲವು ಬೆರಳೆಣಿಕೆಯಷ್ಟು ಮುಖ್ಯಮಂತ್ರಿಗಳ ಸಾಲಿನಲ್ಲಿ ಸೇರ್ಪಡೆಯಾದರು. ಆದರೆ, ಕಾವೇರಿ ನದಿ ಸ್ವಚ್ಛತೆ ಕುರಿತು ಸ್ವಷ್ಟವಾದ, ನಿಖರವಾದ ಯೋಜನೆಯೊಂದನ್ನು ಪ್ರಕಟಿಸಿದ್ದರೆ, ಕಾವೇರಿ ನದಿ ಸ್ವಚ್ಛತೆಗಾಗಿ ಯೋಜನೆ ರೂಪಿಸಿದ ಮೊದಲ ಮುಖ್ಯಮಂತ್ರಿ ಎನಿಸುತ್ತಿದ್ದರು. ಆದರೆ, ಅಂತಹ ಒಂದು ಸುವರ್ಣ ಅವಕಾಶವನ್ನು ಅವರು ತಪ್ಪಿಸಿಕೊಂಡರು ಎಂಬುದು ಜಿಲ್ಲೆಯ ಪರಿಸರವಾದಿಗಳ ಅಭಿಪ್ರಾಯ.
ಭಾಗಮಂಡಲದಲ್ಲಿ ಪತ್ರಕರ್ತರು ಕಾವೇರಿ ನದಿ ಸ್ವಚ್ಛತೆ ಕುರಿತು ಕೇಳಿದ ಪ್ರಶ್ನೆಗೆ ಅವರು, ‘ತಜ್ಞರ ಸಮಿತಿಯ ವರದಿ ಇನ್ನೂ ಬಂದಿಲ್ಲ. ಬಂದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ನದಿ ಸ್ವಚ್ಛತೆಯಂತಹ ಗಂಭೀರವಾದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಆದರೆ, ತಜ್ಞರ ಸಮಿತಿಯ ಕಾಲಮಿತಿ ಏನು? ಯಾವಾಗ ವರದಿ ಬರಬಹುದು? ವರದಿ ಬರುವ ಮುನ್ನ ಕಾವೇರಿ ಹಾಗೂ ಅದರ ಉಪನದಿಗಳಿಗೆ ಸೇರುತ್ತಿರುವ ತ್ಯಾಜ್ಯದ ನೀರನ್ನು ನಿಯಂತ್ರಿಸುವ ಯೋಜನೆಯನ್ನು ಪ್ರಕಟಿಸಿಬಹುದಿತ್ತು.
ಕಾವೇರಿ ನದಿ ಮೂಲದಲ್ಲಿ ಪವಿತ್ರವಾಗಿ ಹುಟ್ಟಿ, ಹರಿಯುತ್ತದೆ. ಆದರೆ, ದುರಂತ ಎಂದರೆ ಕೊಡಗಿನಲ್ಲಿಯೇ ನದಿಯ ನೀರು ಮಲಿನಗೊಳ್ಳಲು ಆರಂಭಿಸುತ್ತದೆ. ಜಿಲ್ಲೆಯ ಸುಮಾರು 22 ಗ್ರಾಮ ಪಂಚಾಯಿತಿಗಳು ಹಾಗೂ ಪುರಸಭೆ ನೇರವಾಗಿಯೇ ನದಿಗೆ ತಾಜ್ಯದ ನೀರು ಸೇರಿಸುತ್ತಿದೆ. ನಗರಸಭೆಯೊಂದು ಅದರ ಉಪನದಿಗೆ ತ್ಯಾಜ್ಯದ ನೀರು ಸೇರಿಸುತ್ತಿದೆ ಎಂಬ ಆರೋಪ ಇದೆ.
ಸಿದ್ದಾಪುರ ವರದಿ: ಜೀವನದಿ ಕಾವೇರಿ ತವರಿನಲ್ಲೇ ಕಲುಷಿತಗೊಳ್ಳುತ್ತಿದ್ದು, ನದಿ ದಡದ ಪಟ್ಟಣ ಹಾಗೂ ಮನೆಗಳ ತ್ಯಾಜ್ಯ ಕಾವೇರಿ ಒಡಲು ಸೇರುತ್ತಿದೆ.
ಸಿದ್ದಾಪುರ ಭಾಗದಲ್ಲಿ ಅಂಗಡಿ, ಮನೆಗಳ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯಗಳು ಕಾವೇರಿ ನದಿಗೆ ಸೇರುತ್ತಿದೆ. ಪ್ರತಿ ದಿನವೂ ನೆಲ್ಯಹುದಿಕೇರಿ ಪಟ್ಟಣದ ಚರಂಡಿ ನೀರು ನದಿಗೆ ಹರಿಯುತ್ತಿದ್ದು, ಕ್ರಮ ಕೈಗೊಳ್ಳಬೇಕಾಗಿದ್ದ ಸ್ಥಳೀಯ ಗ್ರಾಮ ಪಂಚಾಯಿತಿ ಕೈಕಟ್ಟಿಕೊಂಡು ಕುಳಿತಿದೆ.
ನೆಲ್ಯಹುದಿಕೇರಿ ಪಟ್ಟಣದ ಕೆಲ ಹೋಟೆಲ್, ವಸತಿಗೃಹ ಸೇರಿದಂತೆ ಮನೆಗಳ ಶೌಚದ ನೀರು ಪ್ರತಿದಿನ ಕಾವೇರಿ ಸೇತುವೆಯ ಕೆಲಭಾಗದಲ್ಲಿ ಹರಿದು, ನದಿ ಸೇರುತ್ತಿದೆ. ಪಟ್ಟಣದ ಹಲವು ಮನೆಗಳ ಶೌಚದ ನೀರು, ಪಟ್ಟಣದ ಅಂಗಡಿಗಳ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯದ ನೀರು ನದಿಗೆ ಸೇರುತ್ತಿದ್ದು, ನೀರಿನ ಬಣ್ಣವೇ ಬದಲಾಗಿದೆ. ನೆಲ್ಯಹುದಿಕೇರಿಯ ಎಂ.ಜಿ. ಕಾಲೊನಿಯ ತ್ಯಾಜ್ಯ ನೀರು ಸಮೀಪದ ಬೆಳೆಗಾರ ಮಾನಸ್ ಎಂಬವರ ಕಾಫಿ ತೋಟದ ಮೂಲಕ ಹರಿದು ನದಿ ಸೇರುತ್ತಿದೆ. ಇದಲ್ಲದೇ ನದಿ ದಡದ ಕೆಲ ಮನೆಗಳ ತ್ಯಾಜ್ಯವನ್ನು ನೇರವಾಗಿ ಕಾವೇರಿಗೆ ಹರಿಬಿಡಲಾಗುತ್ತಿದೆ.
ಸಿದ್ದಾಪುರ ಭಾಗದಿಂದಲೂ ತ್ಯಾಜ್ಯದ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಕಾವೇರಿ ನದಿಗೆ ಸೇರುವ ಸಣ್ಣ ಉಪನದಿಗಳಿಗೂ ಕಸ ಹಾಗೂ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಸಿದ್ದಾಪುರದ ಘಟ್ಟದಳ ಸಮೀಪದ ತೋಡಿನಲ್ಲೂ ಮನೆಗಳ ತ್ಯಾಜ್ಯ ಸೇರಿದಂತೆ ಮಾಂಸದ ತ್ಯಾಜ್ಯವನ್ನು ಹಾಕಲಾಗುತ್ತಿದೆ. ಇದು ಕೆಲವೇ ದೂರದಲ್ಲಿ ಹರಿಯುವ ಕಾವೇರಿ ನದಿ ಸೇರುತ್ತಿದೆ. ಸಿದ್ದಾಪುರ ಪಟ್ಟಣದ ತ್ಯಾಜ್ಯ ಹಾಗೂ ಶೌಚದ ನೀರು ಕರಡಿಗೋಡು ರಸ್ತೆಯ ಚರಂಡಿ ಮೂಲಕ ಹರಿದು, ಕಾವೇರಿ ನದಿ ಸೇರುತ್ತಿದೆ. ಮೈಸೂರು ರಸ್ತೆಯ ಜನವಸತಿ ಪ್ರದೇಶದ ತ್ಯಾಜ್ಯದ ನೀರನ್ನು ಮುಲ್ಲೆತೋಡು ಮೂಲಕ ಕಾವೇರಿಗೆ ಹರಿಬಿಡಲಾಗುತ್ತಿದೆ.
ಸಿದ್ದಾಪುರ ವ್ಯಾಪ್ತಿಯಲ್ಲಿ ಜೀವನದಿ ಕಾವೇರಿ ಕಲುಷಿತವಾಗುತ್ತಿದ್ದರೂ, ಸಿದ್ದಾಪುರ ಹಾಗೂ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ. ಪಟ್ಟಣದ ಚರಂಡಿಗಳ ಮೂಲಕ ಹಾಗೂ ಜನವಸತಿ ಪ್ರದೇಶದಿಂದ ಕಾವೇರಿ ಒಡಲು ಸೇರುತ್ತಿರುವ ತ್ಯಾಜ್ಯವನ್ನು ತಡೆಯುವಲ್ಲಿ ವಿಫಲವಾಗಿದೆ. ಈ ಹಿಂದೆ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿತ್ತು. ಈ ವೇಳೆ ಗ್ರಾಮದಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿತು. ಆದರೆ, ಈವರೆಗೂ ಇಂಗುಗುಂಡಿಗಳು ನಿರ್ಮಾಣವಾಗಿರುವುದು ಬೆರಳೆಣಿಕೆಯಷ್ಟು ಮಾತ್ರ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಇಂಗುಗುಂಡಿಗಳ ಕೊರತೆಯಿದ್ದು, ಗ್ರಾಮಾಡಳಿತ ತ್ಯಾಜ್ಯವನ್ನು ತಡೆಯುವಲ್ಲಿ ವಿಫಲವಾಗಿದೆ. ಶೌಚದ ನೀರನ್ನು ನದಿಗೆ ಹರಿಬಿಡುವವರಿಗೆ ಕನಿಷ್ಠ ನೋಟಿಸ್ ನೀಡಲು ಕೂಡ ಗ್ರಾಮ ಪಂಚಾಯಿತಿಗಳಿಗೆ ಸಾಧ್ಯವಾಗಿಲ್ಲ.
ಕುಶಾಲನಗರ ಭಾಗದಲ್ಲೂ ಅಲ್ಲಲ್ಲಿ ಚರಂಡಿ ನೀರು ನದಿಗೆ ಸೇರುತ್ತಿದೆ. ತಾಲ್ಲೂಕಿನ ಹಲವೆಡೆ ನೀರು ಮಲೀನಗೊಳ್ಳುತ್ತಿದೆ. ಮಡಿಕೇರಿ ನಗರಸಭೆ ನೀರು ಕಾವೇರಿಯ ಉಪನದಿಗಳನ್ನು ಸೇರುತ್ತದೆ. ಈ ನದಿಗಳು ಮುಂದೆ ಕಾವೇರಿಯೊಂದಿಗೆ ವಿಲೀನವಾಗುತ್ತದೆ. ವಿಪರ್ಯಾಸ ಎಂದರೆ, ಈ ಎರಡೂ ಪಟ್ಟಣಗಳಲ್ಲೂ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ. ಈ ಯೋಜನೆ ಜಾರಿಯಾಗಿ ದಶಕಗಳು ಉರುಳಿದರೂ ನೆಲ ಅಗೆದು ಒಳಚರಂಡಿಯ ಪೈಪುಗಳನ್ನು ಅಳವಡಿಸಿದರೂ ನೀರು ಅದರಲ್ಲಿ ಹರಿಯುತ್ತಿಲ್ಲ.
ನಾಪೋಕ್ಲು ಸಮೀಪದ ಕೊಟ್ಟಮುಡಿಯಲ್ಲಿ ಕಾವೇರಿ ನದಿಗೂ ಆಗಾಗ್ಗೆ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ಈಚೆಗಷ್ಟೇ ಅಲ್ಲ ತ್ಯಾಜ್ಯ ಸುರಿಯಲಾಗಿದೆ ಎಂಬ ಕಾರಣಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ನಿಯಂತ್ರಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ.
ಲಕ್ಷ್ಮಣತೀರ್ಥ ನದಿ ಕೊಡಗಿನಲ್ಲಿ ಸ್ವಚ್ಛವಾಗಿ ಹರಿದರೂ ಮುಂದೆ ಹುಣಸೂರು ಸಮೀಪ ಗಟಾರಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿ ಕಣ್ಣಿಗೆ ಸಿಗುತ್ತದೆ. ಈ ನದಿಯೂ ಮುಂದೆ ಕಾವೇರಿಯೊಂದಿಗೆ ವಿಲೀನವಾಗುತ್ತದೆ.
ಬೇಸಿಗೆಗೂ ಮುನ್ನವೇ ಕ್ರಮ ಕೈಗೊಳ್ಳಿ ನೆಲ್ಯಹುದಿಕೇರಿ ಪಟ್ಟಣ ಹಾಗೂ ಜನವಸತಿ ಪ್ರದೇಶದ ತ್ಯಾಜ್ಯ ನೀರನ್ನು ಕಾವೇರಿ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಬೇಸಿಗೆ ಮುನ್ನವೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಲಿದೆ.ತೆರಂಬಳ್ಳಿ ಸುಧೀರ್ ಬೆಳೆಗಾರರು
ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳಲಿ ಲಕ್ಷಾಂತರ ಜನರು ಜಾನುವಾರುಗಳು ಸೇರಿದಂತೆ ಜೀವಿಗಳು ಕಾವೇರಿ ನೀರನ್ನು ಆಶ್ರಯಿಸಿದ್ದಾರೆ. ಬೆಂಗಳೂರಿನ ಬಹುತೇಕ ಭಾಗದಲ್ಲಿ ಕಾವೇರಿ ನೀರು ಕುಡಿಯಲು ಬಳಸುತ್ತಿದ್ದಾರೆ. ಆದರೆ ತವರಿನಲ್ಲೇ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ. ತಲಕಾವೇರಿಯಿಂದ ಕುಶಾಲನಗರದವರೆಗಿನ ನದಿ ತಡದ ಗ್ರಾಮ ಪಂಚಾಯಿತಿಗಳು ತ್ಯಾಜ್ಯ ನೀರನ್ನು ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸಮದ್ ಸಾಮಾಜಿಕ ಕಾರ್ಯಕರ್ತ ಸಿದ್ದಾಪುರ
ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಳ್ಳಲಿ ಲಕ್ಷಾಂತರ ಜನರು ಜಾನುವಾರುಗಳು ಸೇರಿದಂತೆ ಜೀವಿಗಳು ಕಾವೇರಿ ನೀರನ್ನು ಆಶ್ರಯಿಸಿದ್ದಾರೆ. ಬೆಂಗಳೂರಿನ ಬಹುತೇಕ ಭಾಗದಲ್ಲಿ ಕಾವೇರಿ ನೀರು ಕುಡಿಯಲು ಬಳಸುತ್ತಿದ್ದಾರೆ. ಆದರೆ ತವರಿನಲ್ಲೇ ನದಿ ನೀರು ಕುಡಿಯಲು ಯೋಗ್ಯವಾಗಿಲ್ಲ. ತಲಕಾವೇರಿಯಿಂದ ಕುಶಾಲನಗರದವರೆಗಿನ ನದಿ ತಡದ ಗ್ರಾಮ ಪಂಚಾಯಿತಿಗಳು ತ್ಯಾಜ್ಯ ನೀರನ್ನು ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಸಮದ್ ಸಾಮಾಜಿಕ ಕಾರ್ಯಕರ್ತ ಸಿದ್ದಾಪುರ
ಕಾವೇರಿ ನದಿ ಸಂರಕ್ಷಣೆಗೆ ಸರ್ಕಾರ ಒತ್ತು ನೀಡಲಿ ಯುವ ಬ್ರಿಗೇಡ್ ಹಾಗೂ ಮುತ್ತಪ್ಪ ಯುವಕಲಾ ಸಂಘದ ವತಿಯಿಂದ ಸಿದ್ದಾಪುರ ಸೇತುವೆಯ ಬಳಿ ನದಿ ಶುಚಿಗೊಳಿಸಲಾಗಿತ್ತು. ಮದ್ಯದ ಬಾಟಲಿಗಳು ಪ್ಲಾಸ್ಟಿಕ್ ಸೇರಿದಂತೆ ರಾಶಿಗಟ್ಟಲೆ ತ್ಯಾಜ್ಯ ನದಿಯಿಂದ ಹೊರತೆಗೆದಿದ್ದೆವು. ಇದೀಗ ಪಟ್ಟಣದ ತ್ಯಾಜ್ಯ ನೀರು ನದಿ ಒಡಲಿಗೆ ಸೇರುತ್ತಿದೆ. ಗ್ರಾಮ ಪಂಚಾಯಿತಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕಾವೇರಿ ನದಿ ಸಂರಕ್ಷಣೆಗೆ ಸರ್ಕಾರ ವಿಶೇಷ ಒತ್ತು ನೀಡಬೇಕು.ಪದ್ಮನಾಭ ನೆಲ್ಯಹುದಕೇರಿ.
ನೋಟಿಸ್ ನೀಡಲಾಗುವುದು ನೆಲ್ಯಹುದಿಕೇರಿ ಪಟ್ಟಣದ ಕೆಲ ಮನೆಗಳ ತ್ಯಾಜ್ಯ ನೀರನ್ನು ನದಿಗೆ ಹರಿಬಿಡಲಾಗುತ್ತಿದ್ದು ಈ ಬಗ್ಗೆ ಶೀಘ್ರದಲ್ಲೇ ನೋಟೀಸ್ ಮಾಡಲಾಗುವುದು. ಶೀಘ್ರದಲ್ಲೇ ಗ್ರಾಮ ಪಂಚಾಯಿತಿ ವತಿಯಿಂದ ಇಂಗು ಗುಂಡಿಗಳನ್ನು ನಿರ್ಮಿಸಲು ಕ್ರಮ ಕೈಗೊಂಡು ಸಮಸ್ಯೆಯನ್ನು ಬಗೆಹರಿಸಲಾಗುವುದು.ನಂಜುಂಡಸ್ವಾಮಿ ನೆಲ್ಯಹುದಿಕೇರಿ ಪಿಡಿಒ
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯಸಂಚಾಲಕ ಎಂ.ಎನ್. ಚಂದ್ರಮೋಹನ್ ‘ಕಾವೇರಿ ನದಿ ನೀರು ಕೊಡಗು ಜಿಲ್ಲೆಯಲ್ಲೇ ಕಲುಷಿತಗೊಳ್ಳುತ್ತಿರುವುದು ನಿಜಕ್ಕೂ ದುರಂತ. ಇದನ್ನು ತಡೆಯಲು ಸರ್ಕಾರ ಈ ಬಜೆಟ್‌ನಲ್ಲಾದರೂ ಹಣ ಮೀಸಲಿಡಬೇಕು’ ಎಂದು ಒತ್ತಾಯಿಸಿದರು. ಇಲ್ಲಿನ ಗ್ರಾಮ ಪಂಚಾಯಿತಿಗಳು ಪುರಸಭೆ ಹಾಗೂ ನಗರಸಭೆಗಳಿಗೆ ತ್ಯಾಜ್ಯದ ನೀರನ್ನು ಶುದ್ಧೀಕರಿಸುವಂತಹ ವ್ಯವಸ್ಥೆಯನ್ನು ಕಲ್ಪಿಸಲು ಹಣ ನೀಡಬೇಕು. ಆಗಲಾದರೂ ನದಿಗೆ ಮಲೀನ ನೀರು ಸೇರ್ಪಡೆಯಾಗುವುದು ತಪ್ಪುತ್ತದೆ ಎಂದರು.
ಇದುವರೆಗೂ ಕುಶಾಲನಗರ ಪುರಸಭೆಯ ಕೊಳೆಚೆ ನೀರು ಕೊಪ್ಪ ಬೈಚನಹಳ್ಳಿ ಸಾಯಿ ಬಡಾವಣೆ ಹಾಗೂ ಕುವೆಂಪು ಬಡಾವಣೆ ಬಳಿ ನೇರವಾಗಿ ಕಾವೇರಿ ನದಿಗೆ ಸೇರುತ್ತಿತ್ತು. ಆದರೆ ಈಗ ಇದು ನಿಂತಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕುಶಾಲನಗರ ಪುರಸಭೆಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ‘ಎಲ್ಲೆಲ್ಲಿ ಕೊಳಚೆ ನೀರು ನದಿಗೆ ಸೇರುತ್ತಿತ್ತೋ ಅಲ್ಲಿ ತೊಟ್ಟಿಗಳನ್ನು ನಿರ್ಮಿಸಿ ನೀರನ್ನು ಜಲಶುದ್ಧೀಕರಣ ಘಟಕಕ್ಕೆ ಪಂಪ್ ಮಾಡಲಾಗುತ್ತಿದೆ. ಜಲಶುದ್ಧೀಕರಣ ಘಟಕದಲ್ಲಿ ನೀರು ಶುದ್ಧೀಕರಣಗೊಳ್ಳುತ್ತಿದೆ’ ಎಂದು ಹೇಳಿದರು.
ನಿರೂಪಣೆ: ಕೆ.ಎಸ್.ಗಿರೀಶ
ಮಾಹಿತಿ ಹಾಗೂ ಚಿತ್ರಗಳು: ರೆಜಿತ್ ಕುಮಾರ್ ಗುಹ್ಯ, ರಘು ಹೆಬ್ಬಾಲೆ, ಸಿ.ಎಸ್. ಸುರೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.