ಮಡಿಕೇರಿ: ಇಲ್ಲಿನಗುಹ್ಯ, ಸಿದ್ದಾಪುರ ಭಾಗದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಗುಹ್ಯ ಗ್ರಾಮದಲ್ಲಿ 10ಕ್ಕೂ ಅಧಿಕ ಕಾಡಾನೆಗಳ ಹಿಂಡು ಕಳೆದ ಕೆಲವು ದಿನಗಳಿಂದ ಕಾಫಿ ತೋಟದಲ್ಲಿ ಬೀಡುಬಿಟ್ಟು ದಾಂದಲೆ ನಡೆಸುತ್ತಿದೆ. ಇದರಿಂದ ವಿವಿಧ ತೋಟದ ಕಾಫಿ ಗಿಡಗಳು, ಅಡಿಕೆ, ತೆಂಗು, ಬಾಳೆ ಕೃಷಿ ನಾಶವಾಗಿವೆ. ಗುಹ್ಯ ಗ್ರಾಮದ ಏಂಜಲ್ ಫೀಲ್ಡ್ ಎಸ್ಟೇಟ್, ರಾಯ್ ಗೋಡ್ ಎಸ್ಟೇಟ್ ಸೇರಿದಂತೆ ಖಾಸಗಿ ತೋಟಗಳಲ್ಲಿ ಕಾಡಾನೆ ಬೀಡುಬಿಟ್ಟಿದ್ದು, ರಾತ್ರಿ ವೇಳೆ ಮನೆಗಳ ಸಮೀಪಕ್ಕೆ ಬರುತ್ತಿವೆ. ಅಮ್ಮತ್ತಿ ರಸ್ತೆಯ ಮಂಡೇಪಂಡ ಪ್ರವೀಣ್ ಬೋಪಯ್ಯ ಎಂಬುವರ ಕಾಫಿ ತೋಟದಲ್ಲಿ 15 ಕಾಡಾನೆಗಳು ಬೀಡುಬಿಟ್ಟು, ತೋಟದ ಫಸಲನ್ನು ನಾಶಗೊಳಿಸಿವೆ. ಕಾಡಾನೆ ಹಾವಳಿಯಿಂದಾಗಿ ಕಾರ್ಮಿಕರು, ಶಾಲಾ ಮಕ್ಕಳು, ಸ್ಥಳೀಯರು ಭಯಭೀತರಾಗಿದ್ದಾರೆ.
ಶನಿವಾರದಂದು ಗುಹ್ಯ ಭಾಗದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಗುಹ್ಯ ಭಾಗದಲ್ಲಿ ಇದ್ದ ಕಾಡಾನೆ ಹಿಂಡನ್ನು ಮುಖ್ಯ ರಸ್ತೆ ದಾಟಿಸಿದ್ದು, ಕಾಡಾನೆಗಳು ಅರಣ್ಯಕ್ಕೆ ತೆರಳಲು ಹಿಂದೇಟು ಹಾಕುತ್ತಿವೆ.
ಕಾರ್ಯಾಚರಣೆಯಲ್ಲಿ ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.