ಮಡಿಕೇರಿ: ಕೊಡಗಿನಲ್ಲಿ ಅಬ್ಬರದ ಡಿ.ಜೆ ಧ್ವನಿವರ್ಧಕಗಳಿಂದ ಇಲ್ಲಿನ ವಯೋವೃದ್ಧರು, ರೋಗಿಗಳು, ಗರ್ಭಿಣಿಯರು ಮಾತ್ರವಲ್ಲ ಆಗತಾನೆ ಜನಿಸಿದ ಶಿಶುಗಳೂ ಸಹ ಹೈರಣಾಗುತ್ತಿದ್ದಾರೆ. ಮಿತಿ ಮೀರಿದ ಶಬ್ದದಿಂದ ಬಳಲುತ್ತಾರೆ. ಈಗ ಜಿಲ್ಲೆಯಲ್ಲಿ ಈ ಅಬ್ಬರದ ಡಿ.ಜೆ. ವಿರುದ್ಧ ಗಟ್ಟಿಯಾದ ಧ್ವನಿಗಳು ಮೊಳಗಳಾರಂಭಿಸಿವೆ.
ಪ್ರಧಾನವಾಗಿ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರೇ ಮುಂದಾಳತ್ವ ವಹಿಸಿ ಇದರ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಇಳಿದಿದ್ದಾರೆ. ಮಾತ್ರವಲ್ಲ, ನಿಯಮ ಮೀರಿದರೆ ಪ್ರಕರಣ ದಾಖಲಿಸುವ ಖಡಕ್ ಎಚ್ಚರಿಕೆಯನ್ನು ಹಬ್ಬಕ್ಕೆ ಸಾಕಷ್ಟು ಮುಂಚಿತವಾಗಿಯೇ ನೀಡಿದ್ದಾರೆ.
ಇದಕ್ಕೂ ಮುನ್ನ ಕಳೆದೆರಡು ವರ್ಷಗಳ ಹಿಂದೆ ಹಿರಿಯ ವಕೀಲರಾದ ಅಮೃತೇಶ್ ಸಹ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಅಬ್ಬರದ ಡಿ.ಜೆ ಧ್ವನಿವರ್ಧಕಕ್ಕೆ ಕಡಿವಾಣ ಹಾಕಲು ಪ್ರಯತ್ನ ನಡೆಸಿದ್ದರು.
ಡಿ.ಜೆ ಅಥವಾ ಅಧಿಕ ಡೆಸಿಬಲ್ಸ್ ಶಬ್ದವನ್ನು ಹೊರಹೊಮ್ಮಿಸುವ ಧ್ವನಿವರ್ಧಕದಿಂದ ಉಂಟಾಗುವ ಹಾನಿ ಅಷ್ಟಿಷ್ಟಲ್ಲ. ಇಂತಹ ಶಬ್ದವನ್ನು ಕೇಳಲಾರದೇ ಬಹಳಷ್ಟು ಮಂದಿ ಉತ್ಸವದ ದಿನ ಊರು ತೊರೆದು ಹೋಗುತ್ತಾರೆ. ಗರ್ಭಿಣಿಯರು, ಬಾಣಂತಿಯರ ಸ್ಥಿತಿಯಂತೂ ಹೇಳತೀರದಾಗಿದೆ. ವಯೋವೃದ್ಧರು, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಉಳ್ಳವರಂತೂ ಈ ಭಯಂಕರ ಶಬ್ದದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ವಿಪರೀತವಾಗಿ ಚಡಪಡಿಸುತ್ತಾರೆ.
ನಾಯಿಗಳು ಸಹ ಈ ಶಬ್ದಕ್ಕೆ ಅಂಜಿ ಬಹುದೂರ ಓಡಿ ಹೋಗುತ್ತವೆ. ಆಸ್ಪತ್ರೆಗಳ ರೋಗಿಗಳೂ ಕಂಗಾಲಾಗುತ್ತಾರೆ. ಹೋಟೆಲ್‌ಗಳಿಂದ ಪ್ರವಾಸಿಗರು ರೂಮ್‌ಗಳನ್ನು ಖಾಲಿ ಮಾಡಿ ಕೆಟ್ಟ ರಿವ್ಯೂವ್ ನೀಡಿದ ಉದಾಹರಣೆಗಳೂ ಇವೆ. ಜನರ ಆರೋಗ್ಯಕ್ಕೆ, ಪ್ರವಾಸೋದ್ಯಮಕ್ಕೆ ತೊಂದರೆ ಮಾಡುವ ಇಂತಹ ಅಬ್ಬರದ ಡಿ.ಜೆ. ನಮಗೆ ಬೇಕೇ ಎಂಬ ಪ್ರಶ್ನೆ ಈಗ ಎದುರಾಗಿದೆ.
ಡಿ.ಜೆ ಹಾಗೂ ಅಬ್ಬರದ ಸಂಗೀತ ಈ ನೆಲದ ಸಂಸ್ಕೃತಿ ಅಲ್ಲ ಎಂಬ ಅಭಿಪ್ರಾಯ ಬಹುತೇಕ ಸಂಸ್ಕೃತಿ ಚಿಂತಕರದ್ದಾಗಿದೆ. ಮೈಸೂರಿನಲ್ಲಿ ಗಣೇಶೋತ್ಸವ ಹಾಗೂ ದಸರೆ ವೇಳೆ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ ಕಛೇರಿಗಳು, ಭಜನೆಗಳು ನಡೆಯುತ್ತವೆ. ಆದರೆ, ಕೊಡಗಿನಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಬದಲಿಗೆ ಅಬ್ಬರದ ಡಿ.ಜೆ. ಮೊಳಗುತ್ತದೆ ಎಂದು ಬಹುತೇಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಹಬ್ಬಗಳ ಸಮಯದಲ್ಲಿ ಈ ನೆಲದ ಸಂಸ್ಕೃತಿ ಬಿತ್ತರಗೊಳ್ಳಬೇಕು. ಇಲ್ಲಿನ ಜನಪದ ವಾದ್ಯಗಳು, ಸಂಗೀತ ಮುನ್ನೆಲೆಗೆ ಬರಬೇಕಿದೆ. ಆದರೆ, ಈಗ ಅಂತಹ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿಲ್ಲ.
ಶ್ರವಣ ಸಮಸ್ಯೆಯಿಂದ ಬಳಲುವವರಲ್ಲಿ ಹಿಂದೆ ಹಿರಿಯರೇ ಅಧಿಕ ಇದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಹಾಗೂ ಯುವ ತಲೆಮಾರು, ಮಧ್ಯವಯಸ್ಕರಲ್ಲೇ ಹೆಚ್ಚು ಶ್ರವಣ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳಿಗೆ ಮುಖ್ಯವಾಗಿ ಹೆಚ್ಚು ಡೆಸಿಬಲ್ಸ್ ಇರುವ ಶಬ್ದ ಕೇಳುವುದೇ ಕಾರಣ ಎನಿಸಿದೆ ಎಂದು ಇಲ್ಲಿನ ಕೊಡಗು ವೈದ್ಯಕೀಯ ವಿಶ್ವವಿದ್ಯಾಲಯದ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯ ಕಿವಿ, ಗಂಟಲು ಮತ್ತು ಮೂಗು ವಿಭಾಗದ ಮುಖ್ಯಸ್ಥೆ ಡಾ.ಶ್ವೇತಾ ‘ಪ್ರಜಾವಾಣಿ’ಗೆ ತಿಳಿಸಿದರು.
ಈಚೆಗೆ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಡಿ.ಜೆ. ಧ್ವನಿವರ್ಧಕಗಳಲ್ಲಿರುವ ಪ್ರೆಷರ್ ಮೀಟರ್ ತೀರಾ ಅಪಾಯಕಾರಿ. ಇದರಿಂದ ಹೊರಬರುವ ಅಬ್ಬರದ ಶಬ್ದದಿಂದ ಆಸ್ಪತ್ರೆಯೊಳಗೆ ಮಲಗಿರುವ ರೋಗಿಗಳಿಗೂ ನಿದ್ದೆ ಬರುವುದಿಲ್ಲ. ಅವರ ಆರೋಗ್ಯ ಇನ್ನಷ್ಟು ಹದಗೆಡುತ್ತದೆ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಈಗ ಪೊಲೀಸರು ಸಮಾಜದ ವಿವಿಧ ಕ್ಷೇತ್ರಗಳ ಚಿಂತಕರಿಂದ ಡಿ.ಜೆ ಧ್ವನಿವರ್ಧಕದ ವಿರುದ್ಧ ವಿಡಿಯೊ ಸಂದೇಶಗಳನ್ನು ಮಾಡಿಸಿ, ಅವುಗಳ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ಹೆಚ್ಚು ಡಸಿಬಲ್ಸ್ ಇರುವ ಶಬ್ದ ಕೇಳುವುದರಿಂದ ಶಾಶ್ವತವಾದ ಕಿವುಡುತನ ಬರಲಿದೆ. ಒಳಕಿವಿಯಲ್ಲಿರುವಂತಹ ಸಾವಿರಾರು ಸೂಕ್ಷ್ಮವಾದ ಕೋಶಗಳು (ಹೇರ್ ಸೆಲ್ಸ್) ಹೆಚ್ಚು ಹೆಚ್ಚು ಡೆಸಿಬಲ್ಸ್ ಇರುವ ಶಬ್ದಗಳಿಂದ ನಾಶವಾಗುತ್ತಾ ಹೋಗುತ್ತವೆ. ಇದರಿಂದ ಕಿವಿ ಕೇಳುವ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ಕೆಲವೊಮ್ಮೆ ತಕ್ಷಣವೇ ಕಿವುಡುತನ ಬರಬಹುದು. ಹಾಗಾಗಿ ಎಲ್ಲರೂ ಹೆಚ್ಚು ಡೆಸಿಬಲ್ಸ್ ಸಾಮರ್ಥ್ಯದ ಶಬ್ದದಿಂದ ದೂರ ಇರುವುದು ಒಳ್ಳೆಯದು. ಕೇವಲ ಡಿ.ಜೆ ಧ್ವನಿವರ್ಧಕಗಳಿಂದ ಮಾತ್ರವಲ್ಲ ಪಟಾಕಿ ಹೆಚ್ಚು ಶಬ್ದ ಹೊರಸೂಸುವ ಕಾರ್ಖಾನೆಗಳು ಹಿಯರ್ ಫೋನ್ ಹೆಡ್ ಫೋನ್ ಬಳಕೆಗಳಿಂದಲೂ ಕಿವಿ ತನ್ನ ಕೇಳಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ.ಡಾ.ಶ್ವೇತಾ ಕಿವಿ ಮೂಗು ಗಂಟಲು ವಿಭಾಗದ ಮುಖ್ಯಸ್ಥರು
ಡಿ.ಜೆ.ನಮ್ಮ ಸಂಸ್ಕೃತಿ ಅಲ್ಲವೇ ಅಲ್ಲ. ಇದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಇದರ ಬದಲು ನಮ್ಮ ಸಂಸ್ಕೃತಿಯಾದ ಚಂಡೆ ವಾಲಗ ದೇವರ ಹಾಡು ಹಾಕಲಿ. ಡಿ.ಜೆ ಹಾಕಿದರೆ ಹೊರಗಿನಿಂದ ಎಲ್ಲಿಂದಲೋ ಬಂದವರು ನರ್ತಿಸುತ್ತಾರೆ. ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಎಲ್ಲರೂ ಎಚ್ಚರ ವಹಿಸಿರಿ. ರಸ್ತೆ ತುಂಬೆಲ್ಲ ಕುಣಿಯುತ್ತಿದ್ದರೆ ರಸ್ತೆ ಬದಿಯಲ್ಲೂ ಸಂಚರಿಸಲು ಸಾಧ್ಯವಾಗುತ್ತಿಲ್ಲ.ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದೆ
ಡಿ.ಜೆ. ಬೇಕೇ ಬೇಡವೇ ಎಂಬ ಪ್ರಶ್ನೆ ಉದ್ಭವಿಸಿದೆ. ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಬ್ಬಗಳ ಆಚರಣೆಯಲ್ಲಿ ಇದರ ಬಳಕೆಗೆ ಕಡಿವಾಣ ಹಾಕಬೇಕಿದೆ. ಜನಪದ ಕಲೆಗಳಿಗೆ ಆದ್ಯತೆ ನೀಡಬೇಕಿದೆ. ನನ್ನ ಅಭಿಪ್ರಾಯದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಮಾಡಬಾರದು. ಯುವ ಜನತೆ ಜಾಗೃತರಾಗಬೇಕು.ಮೇಜರ್ ಪ್ರೊ.ಬಿ.ರಾಘವ್ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರು
ಸಾಂಸ್ಕೃತಿಕ ಧಾರ್ಮಿಕ ಆಚರಣೆಗಳು ಗರ್ಭಿಣಿಯರಿಗೆ ವೃದ್ಧರಿಗೆ ಶಿಶುಗಳಿಗೆ ತೊಂದರೆ ಉಂಟು ಮಾಡಬಾರದು. ಹೆಚ್ಚು ಶಬ್ದದಿಂದಾಗುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನಿನಲ್ಲಿ ಕೆಲವೊಂದು ನಿರ್ಬಂಧನೆಗಳನ್ನು ಹೇರಲಾಗಿದೆ. ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳೂ ತೀರ್ಪು ನೀಡಿವೆ. ಈ ತೀರ್ಪು ಮತ್ತು ಕಾನೂನುಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯನಿರಂಜನ್ ಹಿರಿಯ ವಕೀಲರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.