ADVERTISEMENT

ಮಡಿಕೇರಿ | ಕಾರಿನಲ್ಲಿ ಮಹಿಳೆಯ ಶವ ಸಾಗಾಣಿಕೆ; ಮೂವರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:52 IST
Last Updated 16 ನವೆಂಬರ್ 2025, 5:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಡಿಕೇರಿ: ಮಹಿಳೆಯ ಶವವನ್ನು ಕಾರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಮೂವರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೈಸೂರಿನ ಕುಂಬಾರಕೊಪ್ಪಲು ಬಡಾವಣೆಯಲ್ಲಿ ವಾಸವಿದ್ದ ಹರಿಯಾಣ ರಾಜ್ಯದ ನಾನಕಿದೇವಿ (45) ಶವವನ್ನು ಆಕೆಯೊಂದಿಗೆ ವಾಸವಿದ್ದ ರಾಕೇಶ್‌ಕುಮಾರ್ (33) ಹಾಗೂ ಈತನ ಸ್ನೇಹಿತರಾದ ಸತ್ಯವೀರ ಚೌಹಾಣ್ (34), ವಿಕಾಸ್ (32) ಅವರು ಕಾರಿನಲ್ಲಿ ಶುಕ್ರವಾರ ತಡರಾತ್ರಿ ಸಾಗಿಸುತ್ತಿದ್ದ ವೇಳೆ ಮಾಲ್ದಾರೆ ಚೆಕ್‌ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ಗಮನಿಸಿ ಸಿದ್ದಾ‍ಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ಸ್ಥಳಕ್ಕೆ ಬಂದ ಸಬ್‌ಇನ್‌ಸ್ಪೆಕ್ಟರ್ ಮಂಜುನಾಥ್ ಮೂವರನ್ನು ವಶಕ್ಕೆ ಪಡೆದಿದ್ದಾರೆ.

‘ಎಲ್ಲರೂ ಹರಿಯಾಣ ರಾಜ್ಯದವರಾಗಿದ್ದು, ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಾನಕಿದೇವಿ ಜೊತೆ ರಾಕೇಶ್‌ಕುಮಾರ್ ವಾಸವಿದ್ದ. ಅಪಸ್ಮಾರದಿಂದ ಬಳಲುತ್ತಿದ್ದ ನಾನಕಿದೇವಿ ಶುಕ್ರವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದರು. ಅಕ್ಕಪಕ್ಕದ ಮನೆಯವರು ಗಮನಿಸಿ ರಾಕೇಶ್‌ಕುಮಾರ್‌ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ರಾಕೇಶ್‌ಕುಮಾರ್ ಬಾಗಿಲು ಒಡೆದು, ನಾನಕಿದೇವಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದು ಹೇಳಿ ಕಾರಿನಲ್ಲಿ ಸ್ನೇಹಿತರೊಂದಿಗೆ ತೆರಳಿದ್ದಾನೆ. ಈ ವೇಳೆ ಮಹಿಳೆ ಮೃತಪಟ್ಟಿದ್ದು, ಕಾರನ್ನು ಅವರು ವಿರಾಜಪೇಟೆ ಅರಣ್ಯದತ್ತ ತಂದಿದ್ದಾರೆ. ತಾವು ಮಡಿಕೇರಿ ಆಸ್ಪತ್ರೆಗೆ ಬರುತ್ತಿದ್ದೆವು ಎಂದು ರಾಕೇಶ್‌ ಹೇಳಿಕೆ ನೀಡಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.