ADVERTISEMENT

ಮಡಿಕೇರಿ| ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಬೆಂಬಲಿಸಿ: ಶಾಸಕ ಡಾ.ಮಂತರ್‌ಗೌಡ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2025, 3:16 IST
Last Updated 10 ನವೆಂಬರ್ 2025, 3:16 IST
<div class="paragraphs"><p>ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು</p></div>

ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು

   

ಮಡಿಕೇರಿ: ‘ಕೊಡಗಿನಲ್ಲಿ ಪುಸ್ತಕ ವಿಮರ್ಶಕರ ಸಂಖ್ಯೆ ಕಡಿಮೆ ಇದ್ದು, ಹೆಚ್ಚು ಹೆಚ್ಚು ಮಂದಿ ವಿಮರ್ಶಕರು ಸಾಹಿತ್ಯ ಕ್ಷೇತ್ರಕ್ಕೆ ಬರಬೇಕಿದೆ’ ಎಂದು ಹಿರಿಯ ಸಾಹಿತಿ ಭಾರಧ್ವಾಜ್ ಕೆ.ಆನಂದ ತೀರ್ಥ ತಿಳಿಸಿದರು.

ಕನ್ನಡ ಭವನ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಲೇಖಕಿ ಎಂ.ಎ.ರುಬೀನಾ ಅವರ ಚೊಚ್ಚಲ ಕೃತಿ ‘ಕಣ್ಣಾ ಮುಚ್ಚಾಲೆ’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ನಾವೆಲ್ಲರೂ ಪರಸ್ಪರ ಬೆನ್ನು ತಟ್ಟಿಕೊಂಡು ಎಲ್ಲಿದ್ದೇವೋ ಅಲ್ಲಿಯೇ ಇದ್ದೇವೆ. ನಮ್ಮನ್ನು ನಾವು ವಿಮರ್ಶೆಗೆ ಒಳಗು ಮಾಡಿಕೊಳ್ಳಬೇಕಿದೆ. ಹಾಗಾಗಿ, ವಿಮರ್ಶಕರ ಸಂಖ್ಯೆ ಹೆಚ್ಚಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಹೆಚ್ಚಿನ ಬೆಂಬಲ ನೀಡಬೇಕು. ಸದಾ ಸವಾಲುಗಳ ನಡುವೆ ಬದುಕುವ ಮಹಿಳೆಯರು ಪುಸ್ತಕಗಳನ್ನು ಓದುವ ಮೂಲಕ ಜೀವನ ಅನುಭವವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ‘ಕಣ್ಣಾ ಮುಚ್ಚಾಲೆ’ ಕಾದಂಬರಿಯಲ್ಲಿ ಕುಟುಂಬವೊಂದರ ಏಳುಬೀಳಿನ ಕಥೆ ಇದೆ. ತನ್ನ ಬದುಕನ್ನು ಕಟ್ಟಿಕೊಳ್ಳಲು ಮತ್ತು ಬದುಕಿನ ಗೌರವವನ್ನು ರಕ್ಷಿಸಿಕೊಳ್ಳಲು ಕಥಾ ನಾಯಕಿ ಪಡುವ ಶ್ರಮದ ಹಂದರ ಇದರಲ್ಲಿದೆ. ಉತ್ತಮವಾದ ಈ ಪುಸ್ತಕವನ್ನು ಎಲ್ಲರೂ ಖರೀದಿಸಿ ಓದಿರಿ’ ಎಂದು ತಿಳಿಸಿದರು.

ಪತ್ರಿಕೋದ್ಯಮಿ ಬಿ.ಆರ್.ಸವಿತಾ ರೈ ಅವರು ‘ಪುಸ್ತಕದಲ್ಲಿ ಕಳೆದ 30ರಿಂದ 35 ವರ್ಷಗಳ ಹಿಂದೆ ಖಾಸಗಿ ಬಸ್‌ವೊಂದು ಸಂಚಾರ ಆರಂಭಿಸಿದ ಕ್ಷಣದಿಂದ ಹಿಡಿದು, ಈಚೆಗೆ ದಿನಪತ್ರಿಕೆಯೊಂದು ಆರಂಭವಾದ ಕ್ಷಣದವರೆಗೂ ಇದೆ. ಇದು ಎಲ್ಲರನ್ನೂ ತಮ್ಮ ನೆನಪಿನ ಪುಟಗಳಿಗೆ ಜಾರುವಂತೆ ಮಾಡುತ್ತದೆ. ರುಬೀನಾ ಅವರು ಸರಳ ಭಾಷೆಯಲ್ಲಿ ಹೆಣ್ಣಿನ ಭಾವನೆಯನ್ನು ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ’ ಎಂದು ಶ್ಲಾಘಿಸಿದರು.

ಪತ್ರಿಕೋದ್ಯಮಿ ಜೈರೋಸ್ ಥೋಮಸ್ ಅಲೆಕ್ಸಾಂಡರ್ ಮಾತನಾಡಿದರು.

ಅಂತರರಾಷ್ಟ್ರೀಯ ಮಟ್ಟದ ಅಬಾಕಸ್ ಸ್ಫರ್ಧೆಯಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್’ ಪ್ರಶಸ್ತಿ ಗಳಿಸಿದ ಸಿದ್ದಾಪುರದ ಎಂ.ಆರ್.ರಿಮ್ಸಾ ಖಾನಂ, ಲೇಖಕಿ ರುಬೀನಾ, ಕನ್ನಡ ಭವನದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಹಾಗೂ ಪುಸ್ತಕದ ಪುಟ ವಿನ್ಯಾಸಗೊಳಿಸಿದ ಕೆ.ಎಂ.ವಿನೋದ್ ಅವರನ್ನು ಗೌರವಿಸಲಾಯಿತು.

ಗಾಯತ್ರಿ ಚೆರಿಯಮನೆ, ಹರ್ಷಿತಾ ಶೆಟ್ಟಿ, ಕಿಶೋರ್ ರೈ, ವಿಜಯ್ ಹಾನಗಲ್, ಬೊಟ್ಟೋಳಂಡ ನಿವ್ಯ ಕಾವೇರಮ್ಮ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಾಹಿತ್ಯಾಭಿಮಾನಿಗಳು ಕಿಕ್ಕಿರಿದು ಸೇರಿದ್ದರು
ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಓದುವವರ ಸಂಖ್ಯೆ ತೀರಾ ಕಡಿಮೆ ಇದೆ. ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸಬೇಕು
ಬೊಳ್ಳಜಿರ ಬಿ.ಅಯ್ಯಪ್ಪ ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷ.
ಪುರಾತನ ಕೋಟೆಗಳು ನಾಶವಾಗಿವೆ. ಆದರೆ ಅಕ್ಷರ ರೂಪದಲ್ಲಿರುವ ಪುಸ್ತಕಗಳಿಗೆ ಎಂದೂ ಸಾವಿಲ್ಲ.
ಡಾ.ವಾಮನ್ ರಾವ್ ಬೇಕಲ್ ಕನ್ನಡ ಭವನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕ.

ಪುಸ್ತಕ ಓದಿ ಬೆಂಬಲ ನೀಡಿ; ಶಾಸಕ

ಪುಸ್ತಕ ಲೋಕಾರ್ಪಣೆ ಮಾಡಿದ ಶಾಸಕ ಡಾ.ಮಂತರ್‌ಗೌಡ ‘ಪ್ರಸ್ತುತ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಳ್ಳುತ್ತಿದ್ದು ಪ್ರತಿಯೊಬ್ಬರು ಪುಸ್ತಕ ಓದುವ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು. ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು ‘ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಕೊಂಡಿದ್ದರು. ಇಂದು ಮಹಿಳೆಯರು ಪುರುಷರಿಗೆ ಸಮಾನವಾಗಿ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಹಿಂದೆ ಪುಸ್ತಕ ಓದುವವರ ಸಂಖ್ಯೆ ಹೆಚ್ಚಿತ್ತು. ಇಂದು ಅತಿಯಾದ ತಂತ್ರಜ್ಞಾನದ ಬಳಕೆಯಿಂದಾಗಿ ಓದುಗರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಆಸಕ್ತಿ ಹೊಂದಬೇಕು’ ಎಂದರು.

ಭಾವುಕರಾದ ಲೇಖಕಿ ರುಬೀನಾ

ಪುಸ್ತಕದ ಲೇಖಕಿ ರುಬೀನಾ ಮಾತನಾಡುವಾಗ ಭಾವುಕರಾಗಿ ತಮ್ಮ ಮಾತುಗಳನ್ನು ಅರ್ಧಕ್ಕೆ ನಿ‌ಲ್ಲಿಸಿದರು. ತಮಗೆ ಶಿ‌ಕ್ಷಣ ಕೊಡಿಸಿದವರು ತಂದೆ ಅಕ್ಕ ಹೀಗೆ ತಮಗೆ ಸಹಕಾರ ನೀಡಿದವರ ಹೆಸರನ್ನು ಹೇಳುತ್ತಲೇ ತಮ್ಮ ಕಣ್ಣಾಲಿಗಳಿಂದ ಸುರಿಯುತ್ತಿದ್ದ ನೀರನ್ನು ಒರೆಸಿಕೊಂಡು ಗದ್ಗದ್ಗಿತರಾದರು. ಕಾರ್ಯಕ್ರಮಕ್ಕೆ ಬಂದಿದ್ದ ಅಷ್ಟೂ ಜನರ ಹೆಸರನ್ನು ಹೇಳುತ್ತಾ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಪುಸ್ತಕದ ಹೆಸರು: ಕಣ್ಣಾ ಮುಚ್ಚಾಲೆ...!!

ಲೇಖಕಿ: ಎಂ.ಎ.ರುಬೀನಾ

ಭಾಷೆ: ಕನ್ನಡ

ಪ್ರಕಾಶನ: ಕೊಡವ ಮಕ್ಕಡ ಕೂಟ

ಪುಟಗಳ ಸಂಖ್ಯೆ:160

ಪುಸ್ತಕದ ಬೆಲೆ: ₹200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.