ಮಡಿಕೇರಿ: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ವತಿಯಿಂದ ರೋಟರಿ ದಿನಾಚರಣೆ ಅಂಗವಾಗಿ ಫೆ. 23ರಂದು ಬೆಳಿಗ್ಗೆ 9.30ಕ್ಕೆ ರೋಟರಿ ಸಭಾಂಗಣದಲ್ಲಿ ಮಹಿಳೆಯರಿಗಾಗಿ ರಕ್ತದಾನ ಶಿಬಿರ ಹಾಗೂ ಕೃತಕ ಕೈಕಾಲು ಜೋಡಣಾ ಶಿಬಿರ ಏರ್ಪಡಿಸಲಾಗಿದೆ.
ಕೆಲವೊಂದು ತಪ್ಪು ನಂಬಿಕೆಗಳಿಂದ ಮಹಿಳೆಯರು ರಕ್ತದಾನ ಮಾಡಲು ಮುಂದಾಗುತ್ತಿಲ್ಲ. ಈ ತಪ್ಪು ನಂಬಿಕೆಗಳನ್ನು ಹೋಗಲಾಡಿಸಿ ಮಹಿಳೆಯರನ್ನು ರಕ್ತದಾನ ಮಾಡಲು ಪ್ರೇರೇಪಿಸಲು ಈ ವಿಶೇಷ ಶಿಬಿರ ಆಯೋಜಿಸಲಾಗಿದೆ ಎಂದು ರೋಟರಿ ಮಿಸ್ಟಿ ಹಿಲ್ಸ್‌ನ ವೃತ್ತಿ ಸೇವಾ ಯೋಜನಾ ನಿರ್ದೇಶಕ ಡಾ.ಚೆರಿಯಮನೆ ಪ್ರಶಾಂತ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್‌ಮೂವ್ ಮೆಂಟ್ ಸಂಸ್ಥೆಯ ಸಹಭಾಗಿತ್ವದಲ್ಲಿ 22 ಮಂದಿಗೆ ಕೃತಕವಾದ ಕೈ ಮತ್ತು ಕಾಲು ಜೋಡಣಾ ಶಿಬಿರವನ್ನೂ ಈ ವೇಳೆ ಏರ್ಪಡಿಸಲಾಗಿದೆ ಎಂದರು.
ರೋಟರಿ ಜಿಲ್ಲೆ 3092ನ ಮಾಜಿ ಗವರ್ನರ್ ನಾಗೇಂದ್ರ ಪ್ರಸಾದ್, ಕೊಡಗು ವೈದ್ಯಕೀಯ ಕಾಲೇಜಿನ ರಕ್ತ ನಿಧಿ ಕೇಂದ್ರದ ಅಧಿಕಾರಿ ಡಾ.ಕರುಂಬಯ್ಯ, ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಧಿಲನ್ ಚಂಗಪ್ಪ, ವಲಯ ಸೇನಾನಿ ಕಾರ್ಯಪ್ಪ ಸೇರಿದಂತೆ ರೋಟರಿ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ ಮಾತನಾಡಿ, ‘ರೋಟರಿ ಜಿಲ್ಲಾ ಯೋಜನೆ ಅಂಗವಾಗಿ ಮಿಸ್ಟಿ ಹಿಲ್ಸ್‌ನಿಂದ ₹ 2.50 ಲಕ್ಷ ವೆಚ್ಚದಲ್ಲಿ ಕೃತಕ ಕೈ ಮತ್ತು ಕಾಲು ಜೋಡಣಾ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯಿಂದ ಗುರುತಿಸಲಾದ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.
ಫೆ. 22ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ರೋಟರಿ ಸಭಾಂಗಣದಲ್ಲಿ ಅರೆಭಾಷೆ ಗೌಡ ವಿಕಾಸ ವೇದಿಕೆಯ ಪ್ರಹ್ಲಾದ್ ಅಪ್ಪಾಜಿ ಅವರ ಸಹಯೋಗದಲ್ಲಿ ಕೊಡಗು ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿದೆ. 15 ತಂಡಗಳು ನೋಂದಾಯಿಸಿಕೊಂಡಿದ್ದು, ಪ್ರಥಮ ಬಹುಮಾನವಾಗಿ ₹ 10 ಸಾವಿರ, ದ್ವಿತೀಯ ಬಹುಮಾನವಾಗಿ ₹ 6 ಸಾವಿರ ಮತ್ತು ತೃತೀಯ ಬಹುಮಾನವಾಗಿ ₹ 3 ಸಾವಿರ ನಗದನ್ನು ಟ್ರೋಫಿಯೊಂದಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮಹಿಳಾ ರಕ್ತದಾನ ಶಿಬಿರದ ಸಂಚಾಲಕರಾದ ರಶ್ಮಿದೀಪಾ ಮಾತನಾಡಿ, ‘ರಕ್ತಹೀನತೆ ಮತ್ತು ರಕ್ತದಾನ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಿಸ್ಟಿ ಹಿಲ್ಸ್ ವತಿಯಿಂದ ಮಹಿಳೆಯರೇ ರಕ್ತದಾನ ಮಾಡುವಂತಹ ವಿನೂತನ ಶಿಬಿರ ಆಯೋಜಿಸಲಾಗಿದೆ’ ಎಂದರು.
ರೋಟರಿ ಮಿಸ್ಟಿ ಹಿಲ್ಸ್ ಮುಂದಿನ ಸಾಲಿನ ಕಾರ್ಯದರ್ಶಿ ಡಾ.ಚೇತನ್ ಮಾತನಾಡಿ, ‘ಶೇ 5ರಷ್ಟು ಪ್ರಮಾಣದಲ್ಲಿ ಮಾತ್ರ ಮಹಿಳೆಯರು ರಕ್ತದಾನ ಮಾಡಲು ಮುಂದಾಗುತ್ತಿದ್ದಾರೆ. ಸಾಕಷ್ಟು ತಪ್ಪು ತಿಳಿವಳಿಕೆಗಳು ಇರುವುದೇ ಮಹಿಳೆಯರಲ್ಲಿ ರಕ್ತದಾನದ ಹಿಂಜರಿಕೆಗೆ ಕಾರಣವಾಗಿದೆ ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್‌ನ ಕೊಡಗು ಸಂಚಾಲಕ ಅಂಕಾಚಾರಿ ಮಾತನಾಡಿ, ಕೃತಕ ಕೈಕಾಲು ಜೋಡಣೆ ಶಿಬಿರದ ಮೂಲಕ 21 ಮಂದಿಗೆ ಹೊಸ ಜೀವನ ನೀಡುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.
ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಉಪಾಧ್ಯಕ್ಷ ಎಚ್.ಟಿ.ಅನಿಲ್ ಮಾತನಾಡಿ, ‘ರೋಟರಿ ಸೇವಾ ಸಂಸ್ಥೆಯು ಅಮೆರಿಕದ ಪೌಲ್ ಹೇರೀಸ್ ಅವರಿಂದ ಸ್ಥಾಪನೆಯಾಗಿ 121 ವರ್ಷಗಳಾದ ದಿನವನ್ನೇ ರೋಟರಿ ದಿನವನ್ನಾಗಿ ಫೆ.23 ರಂದು ಆಚರಿಸಲಾಗುತ್ತಿದೆ’ ಎಂದು ಹೇಳಿದರು.
ರಕ್ತದಾನಿ ಮಹಿಳೆಯರು ಮಾಹಿತಿಗೆ ಮೊ: 7760841544 ಸಂಪರ್ಕಿಸಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.