ADVERTISEMENT

ದಸರೆಯ ಯಶಸ್ಸಿನ ಹಿಂದೆ ನಾರಿಶಕ್ತಿ

ಮಹಿಳಾ ದಸರೆ ಸೇರಿದಂತೆ ಎಲ್ಲ ಕಡೆ ಕಂಡು ಬಂತು ಮಹಿಳೆಯರ ಶ್ರಮ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 6:26 IST
Last Updated 14 ಅಕ್ಟೋಬರ್ 2025, 6:26 IST
ಮಡಿಕೇರಿಯಲ್ಲಿ ನಡೆದ ಮಹಿಳಾ ದಸರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು
ಮಡಿಕೇರಿಯಲ್ಲಿ ನಡೆದ ಮಹಿಳಾ ದಸರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಭಾಗವಹಿಸಿದ್ದರು   

ಮಡಿಕೇರಿ: ದಸರಾ ಯಶಸ್ಸಿಗೆ ಎಲೆಮರೆಯ ಕಾಯಂತೆ ದುಡಿದವರನ್ನು ಹುಡುಕುತ್ತಾ ಹೊರಟಾಗ ಕಣ್ಣಿಗೆ ಸಿಕ್ಕವರು ಮಹಿಳೆಯರು. ಇಡೀ ದಸರೆಯ ಯಶಸ್ಸಿನ ಹಿಂದೆ ನಾರಿಶಕ್ತಿ ಅಡಗಿತ್ತು. ಮಹಿಳೆಯರಿಂದಲೇ ಅನೇಕ ಕಾರ್ಯಕ್ರಮಗಳು ಸಾಫಲ್ಯತೆಯನ್ನೂ ಕಂಡವು.

ಅದರಲ್ಲೂ ವಿಶೇಷವಾಗಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪಾತ್ರ ಅತ್ಯಂತ ಹಿರಿದಾಗಿತ್ತು. ಮಹಿಳಾ ದಸರೆ ಬಿಕೊ ಎನ್ನುತ್ತಿದೆ ಎಂದು ಹೇಳಿ ಗಣ್ಯರು ಕೂರುವಷ್ಟರಲ್ಲಿ ಮೈದಾನಕ್ಕೆ ಪ್ರಮೀಳೆಯರ ಸೇನೆಯೇ ಲಗ್ಗೆ ಇಟ್ಟಿತು. ಅವರಲ್ಲಿ ಬಹುತೇಕ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದರು.

ದೂರದ ಗಡಿಭಾಗ ಕರಿಕೆ ಗ್ರಾಮದಿಂದ ಹಿಡಿದು ತಾಲ್ಲೂಕಿನ ಬಹುತೇಕ ಎಲ್ಲ ಗ್ರಾಮಗಳಿಂದಲೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬಂದರು. ಕೇವಲ ಅವರೊಬ್ಬರೇ ಬಾರದೇ ಅವರೊಂದಿಗೆ ತಮ್ಮ ಗ್ರಾಮದಲ್ಲಿದ್ದ ಮಹಿಳೆಯರನ್ನೂ ಕರೆದುಕೊಂಡು ಬಂದಿದ್ದು ವಿಶೇಷ ಎನಿಸಿತ್ತು. ಇವರು ತಮ್ಮೊಂದಿಗೆ ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯಕ ಸಂಘಗಳ ಕಾರ್ಯಕರ್ತೆಯರನ್ನೂ ಕರೆತಂದರು. ಈ ಮೂಲಕ ಮಹಿಳಾ ದಸರೆ ತಾಲ್ಲೂಕಿನ ಎಲ್ಲ ಗ್ರಾಮಗಳ ಮಹಿಳೆಯರನ್ನು ಒಳಗೊಳ್ಳುವಂತಾಯಿತು.

ADVERTISEMENT

ಭಾನುವಾರವಾಗಿದ್ದರೂ ಸರಿಸುಮಾರು 500ಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಡೀ ದಿನ ಗಾಂಧಿ ಮೈದಾನದಲ್ಲಿ ಸಂಭ್ರಮಿಸಿದರು. ವಿವಿಧ ಕ್ರೀಡೆಗಳು, ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ಪರ್ಧಾಸ್ಪೂರ್ತಿ ಮೆರೆದು ಇತರರಿಗೆ ಮಾದರಿಯಾದರು.

ಕೇವಲ ಮಹಿಳಾ ದಸರೆಗೆ ಮಾತ್ರ ಸೀಮಿತವಾಗದ ಇವರು ಕಾಫಿ ದಸರೆಯಲ್ಲೂ ಪಾಲ್ಗೊಂಡು ಯಶಸ್ಸಿನಲ್ಲಿ ಒಂದು ಪಾಲು ಪಡೆದರು. ಕಾಫಿಯಿಂದ ಮಾಡುವ ವಿವಿಧ ಖಾದ್ಯಗಳ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇವರು ಇಡೀ ಸ್ಪರ್ಧೆ ಯಶಸ್ವಿಯಾಗುವುದರ ಶ್ರೇಯ ಪಡೆದರು.

ಇಷ್ಟು ಮಾತ್ರವಲ್ಲ, ನಿರೂಪಕರಾಗಿ, ಕಲಾವಿದೆಯರಾಗಿಯೂ ದಸರೆಯಲ್ಲಿ ಮಹಿಳೆಯರು ಪಾಲ್ಗೊಂಡರು. ಪ್ರಾರ್ಥನೆ ನೃತ್ಯ, ಸಂಗೀತ, ಹಾಡು ಹೀಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿನಿಯರು, ಮಹಿಳೆಯರು ಪ್ರಸ್ತುತಪಡಿಸಿ ಜನಮೆಚ್ಚುಗೆ ಪಡೆದರು. ಈ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ಸಿಗೂ ಮಹಿಳೆಯರು ಕಾರಣರಾದರು.

ಭದ್ರತೆ ಒದಗಿಸಿದ್ದ ಮಹಿಳಾ ಪೊಲೀಸರು, ಸಮಿತಿಯಲ್ಲಿದ್ದ ಮಹಿಳೆಯರು ದಸರೆಗಾಗಿ ತೆರೆಮರೆಯಲ್ಲಿ ದುಡಿದರು. ಈ ಕಾರಣಕ್ಕಾಗಿಯೇ ಮಡಿಕೇರಿ ದಸರೆ ಯಶಸ್ವಿಯಾಯಿತು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಈಚೆಗೆ ನಡೆದ ಮಹಿಳಾ ದಸರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು
ಸವಿತಾ ಕೀರ್ತನ್
ದಸರಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಪಾಲ್ಗೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದರು
ಮೇಪಾಡಂಡ ಸವಿತಾ ಕೀರ್ತನ್ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ

ಗೋಣಿಕೊಪ್ಪಲಿನಲ್ಲಿಯೂ ಗೋಚರಿಸಿದ ನಾರಿಶಕ್ತಿ –ಜೆ.ಸೋಮಣ್ಣ

ಗೋಣಿಕೊಪ್ಪಲು: ಪಟ್ಟಣದಲ್ಲಿ ಈಚೆಗೆ ನಡೆದ ದಸರಾ ಉತ್ಸವದಲ್ಲಿ ನಾರಿಶಕ್ತಿ ಗೋಚರಿಸಿತು. ಕಾರ್ಯಕ್ರಮಗಳಿಗೆ ಪ್ರೇಕ್ಷಕರಾಗಿ ಭಾಗವಹಿಸಿದ್ದವರಲ್ಲಿ ಬಹುಪಾಲು ಮಹಿಳೆಯರೇ ಇದ್ದರು. ಈ ಮೂಲಕ ಸಭಾಂಗಣ ತುಂಬಿ ತುಳುಕಿತು. ಕೇವಲ ನೋಡುಗರಾಗಿ ಮಾತ್ರವಲ್ಲ ವೇದಿಕೆಯ ಮೇಲೆ ವಿವಿಧ ಕಾರ್ಯಗಳ ಜವಾಬ್ದಾರಿಯನ್ನೂ ಮಹಿಳೆಯರು ಹೊತ್ತುಕೊಂಡಿದ್ದರು. ಜೊತೆಗೆ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮಹಿಳೆಯರು ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿ ಜನಮನಸೂರೆಗೊಂಡರು. ಇಲ್ಲಿ ನಡೆದ ಮಹಿಳಾ ದಸರೆ ಸೇರಿದಂತೆ ಬಹುತೇಕ ಎಲ್ಲ ದಸರೆಯಲ್ಲೂ ಮಹಿಳೆಯರ ಶ್ರಮ ಅಗಾಧವಾಗಿ ಕಂಡಿತು. ಕವಿಗೋಷ್ಠಿಯಲ್ಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಕವನ ವಾಚಿಸಿದ್ದು ವಿಶೇಷ ಎನಿಸಿತ್ತು. ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಬಿಸಿಯೂಟ ನೌಕರರು ಆಶಾ ಕಾರ್ಯಕರ್ತೆಯರು ಶಿಕ್ಷಕಿಯರು ಉಪನ್ಯಾಸಕಿಯರು ಮಹಿಳಾ ಪೊಲೀಸರು ದಸರೆಯ ಯಶಸ್ಸಿಗಾಗಿ ತೆರೆಮರೆಯಲ್ಲಿ ತಮ್ಮದೇ ಕಾಣಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.