ಕುಶಾಲನಗರ: ಉತ್ತಮ ಜೀವನ ಕಟ್ಟಿಕೊಳ್ಳುವೆಡೆಗೆ ವಿದ್ಯಾರ್ಥಿಗಳನ್ನು ಪ್ರಾಥಮಿಕ ಶಿಕ್ಷಣ ಹಂತದಿಂದಲೇ ತರಬೇತಿಗೊಳಿಸಬೇಕು. ಇದರಿಂದ ಅವರು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಫಲರಾಗುತ್ತಾರೆ ಎಂದು ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಪ್ರಕಾಶ್ ಹೇಳಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಾಹತ ಯುನೈಟೆಡ್ ಎಫರ್ಟ್ ಫೌಂಡೇಶನ್ ಸಹ ಯೋಗದೊಂದಿಗೆ ಕುಶಾಲನಗಗರ ತಾಲ್ಲೂಕಿನ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ವೃತ್ತಿ ಯೋಜನೆಯ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರೌಢಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ಅನುಗುಣವಾಗಿ ಗುರಿ ನಿರ್ಧರಿಸಲು ಹಾಗೂ ಆ ಗುರಿಯ ಹಾದಿಯಲ್ಲಿ ಮುನ್ನಡೆಸಲು ಶಿಕ್ಷಕರು ಹಾಗೂ ಪೋಷಕರು ಸಹಕರಿಸಬೇಕು ಎಂದರು.
ಜಿಲ್ಲಾ ಸಮನ್ವಯಾಧಿಕಾರಿ ಭಾರತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೃತ್ತಿ ಯೋಜನೆ ಕಾರ್ಯಕ್ರಮ ಹಿಂದಿನ ವರ್ಷದಿಂದಲೂ ನಡೆಯುತ್ತಿದೆ. ಇದರ ಉಪಯೋಗ ಮಕ್ಕಳಿಗೆ ತಲುಪುತ್ತದೆ. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ವೃತ್ತಿ ಆಸಕ್ತಿಗಳನ್ನು ಗುರುತಿಸುವುದು, ವೃತ್ತಿ ಆಯ್ಕೆಗಳನ್ನು ತಿಳಿಯುವುದು, ಅದಕ್ಕೆ ಸಂಬಂಧಿಸಿದ ಶಿಕ್ಷಣ ಕೋರ್ಸ್‌ಗಳನ್ನು ಅಧ್ಯಯನ ಮಾಡಲು ಮಾರ್ಗದರ್ಶನ ಕೊಡುವುದು ಹಾಗೂ ವೃತ್ತಿ ಯೋಜನೆಯನ್ನು ವಿದ್ಯಾರ್ಥಿಗಳು ತಾವೇ ಸಿದ್ಧ ಮಾಡಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಅನಾಹತ ಯುನೈಟೆಡ್ ಫರ್ಟ್ಸ್ ಫೌಂಡೇಶನ್ ತರಬೇತುದಾರ ಎಸ್.ಸಿದ್ದೇಶ್ ಮಾತನಾಡಿ, ಎಲ್ಲ ವಸತಿ ಶಾಲೆಯಲ್ಲಿನ ಮಕ್ಕಳು ವೃತ್ತಿ ವಲಯಗಳು ಮತ್ತು ವೃತ್ತಿ ಯೋಜನೆ ಬಗ್ಗೆ ಈಗಿಂದಲೇ ಯೋಜಿಸುವುದು ಬಹಳ ಮುಖ್ಯ. 2030ಕ್ಕೆ ಎರಡು ಕೋಟಿ ವಿದ್ಯಾರ್ಥಿಗಳಿಗೆ ಈ ಮಾಹಿತಿ ತಲುಪಬೇಕೆಂಬುದು ಸಂಸ್ಥೆಯ ಉದ್ದೇಶವಾಗಿದೆ ಎಂದರು.
ವಿಭಾಗೀಯ ಮುಖ್ಯಸ್ಥ ಡಿ.ಕೆ. ಪ್ರಸನ್ನ ಕುಮಾರ್ ಮಾತನಾಡಿ, ಉದ್ಯೋಗ ಹಾಗೂ ಅದಕ್ಕೆ ಬೇಕಾದ ಕೌಶಲಗಳ ನಡುವೆ ಉಂಟಾದ ಬಿರುಕನ್ನು ಹೋಗಲಾಡಿಸಲು, ವಿದ್ಯಾರ್ಥಿಗಳು ಯೋಜಿತ ವೃತ್ತಿ ಆಯ್ಕೆ ಮಾಡಿಕೊಂಡು ತಮ್ಮ ಕೆಲಸದಲ್ಲಿ ತೃಪ್ತಿ ಹಾಗೂ ಸಂತೋಷಪಡುವುದರ ಜೊತೆಗೆ ದೇಶದ ಆರ್ಥಿಕತೆಗೆ ಕೊಡುಗೆ ಸಲ್ಲಿಸಲು ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಯಾಗಿದೆ ಎಂದರು.
ಅನಾಹತ ಯುನೈಟೆಡ್ ಸಂಸ್ಥೆಯ ತರಬೇತುದಾರ ವಿ.ಎಸ್. ರಾಘವೇಂದ್ರ, ಕೂಡಿಗೆ ಶಾಲೆಯ ಶಿಕ್ಷಕರಾದ ಕೆ.ವಿ. ಅಮೃತ, ದಿನೇಶ್ ಆಚಾರ್, ಜಿಲ್ಲೆಯ 7 ವಸತಿ ಶಾಲೆಗಳಿಂದ 14 ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.