ADVERTISEMENT

ದಾನಿಗಳು ರಕ್ತದಾನಕ್ಕೆ ಮುಂದಾಗಿ: ಡಾ. ಕರುಂಬಯ್ಯ

ವಿಶ್ವ ರಕ್ತದಾನಿಗಳ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 14:27 IST
Last Updated 14 ಜೂನ್ 2025, 14:27 IST
ಸೋಮವಾರಪೇಟೆ ತಾಲ್ಲೂಕು ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಶನಿವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಹೆಚ್ಚು ರಕ್ತದಾನ ಮಾಡಿದ ಚಂದ್ರಾವತಿ ಹಾಗೂ ಪತ್ರಕರ್ತ ವಿಜಯ್ ಹಾನಗಲ್ಲು ಅವರನ್ನು ಸನ್ಮಾನಿಸಲಾಯಿತು 
ಸೋಮವಾರಪೇಟೆ ತಾಲ್ಲೂಕು ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಶನಿವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಹೆಚ್ಚು ರಕ್ತದಾನ ಮಾಡಿದ ಚಂದ್ರಾವತಿ ಹಾಗೂ ಪತ್ರಕರ್ತ ವಿಜಯ್ ಹಾನಗಲ್ಲು ಅವರನ್ನು ಸನ್ಮಾನಿಸಲಾಯಿತು    

ಸೋಮವಾರಪೇಟೆ: ಪ್ರಸಕ್ತ ವರ್ಷ 'ರಕ್ತ ನೀಡಿ-ಭರವಸೆ ನೀಡಿ-ಒಟ್ಟಾಗಿ ನಾವು ಜೀವಗಳನ್ನು ರಕ್ಷಿಸೋಣ' ಎಂಬ ಘೋಷ ವಾಕ್ಯದಡಿ ಈ ಬಾರಿ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಮುಂದೆ ಬಂದು ರಕ್ತದಾನ ಮಾಡಬೇಕೆಂದು ಜಿಲ್ಲಾ ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮನವಿ ಮಾಡಿದರು.

ಇಲ್ಲಿನ ತಾಲ್ಲೂಕು ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಶನಿವಾರ ಸೋಮವಾರಪೇಟೆ ಜೇಸಿ ಪುಷ್ಪಗಿರಿ ನೇತೃತ್ವದಲ್ಲಿ, ಡಾಲ್ಫಿನ್ಸ್‌ ಸ್ಪೋರ್ಟ್ಸ್ ಕ್ಲಬ್ ಹಾಗೂ ಒಕ್ಕಲಿಗರ ಯುವ ವೇದಿಕೆಯ ಆಶ್ರಯದಲ್ಲಿ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನಿಗಳಿಗೆ ಸನ್ಮಾನ, ಸ್ವಯಂಪ್ರೇರಿತ ರಕ್ತದಾನ ಶಿಬಿರ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಳೆದ 2004ರಿಂದ ವಿಶ್ವದಾದ್ಯಂತ ಜೂನ್‌ 14ನ್ನು ರಕ್ತದಾನಿಗಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ರಕ್ತದ ಗುಂಪುಗಳನ್ನು ಕಂಡುಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್ಸ್ ಟ್ರೈನರ್ ಅವರು ಹುಟ್ಟಿದ ದಿನ ಜೂನ್‌14ರಂದು ವಿಶ್ವದಲ್ಲಿ ರಕ್ತದಾನಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ರಕ್ತಕ್ಕೆ ಪರ್ಯಾಯವಾಗಿ ಇಂದಿಗೂ ಏನನ್ನು ಕಂಡು ಹಿಡಿದಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತಕ್ಕೆ ದಾನಿಗಳನ್ನು ಅವಲಂಬಿಸಲಾಗಿದೆ. ಆದ್ದರಿಂದ ರಕ್ತದಾನದ ಬಗ್ಗೆ ಸಮಾಜದಲ್ಲಿ ಹೆಚ್ಚು ಅರಿವು ಮೂಡಿಸಬೇಕು. ಒಮ್ಮೆ ರಕ್ತದಾನ ಮಾಡಿದರೆ ಎರಡರಿಂದ ಮೂರು ಜೀವಗಳನ್ನು ಉಳಿಸಬಹುದು’ ಎಂದು ತಿಳಿಸಿದರು.

‘ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡಬೇಕು. ಜಿಲ್ಲಾಸ್ಪತ್ರೆಯಲ್ಲಿ ರಕ್ತದ ಬೇಡಿಕೆ ತೀವ್ರವಾಗಿ ಹೆಚ್ಚಾಗುತ್ತಿದೆ. ನೆರೆ ಜಿಲ್ಲೆಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ವರ್ಷಕ್ಕೆ ಕನಿಷ್ಠ ಒಮ್ಮೆಯಾದರೂ ರಕ್ತದಾನ ಶಿಬಿರ ಆಯೋಜಿಸಬೇಕು. ರಕ್ತದಾನಿಗಳ ದಿನದಂದು ಇತರರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ರಕ್ತದಾನಿಗಳನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೇಸಿ ಸಂಸ್ಥೆಯ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್ ಮಾತನಾಡಿ, ‘ಗರ್ಭಿಣಿಯರು, ಅಪಘಾತದಿಂದ ಗಾಯಗೊಂಡವರು, ಶಸ್ತ್ರಚಿಕಿತ್ಸೆ ಅವಶ್ಯಕ ಇರುವವರು, ರಕ್ತಹೀನತೆಯಿಂದ ಬಳಲುತ್ತಿರುವ ಮಂದಿಗೆ ಹೆಚ್ಚಿನ ರಕ್ತದ ಅವಶ್ಯಕತೆಯಿರುತ್ತದೆ. ಇದನ್ನು ಮನಗಂಡು ಜೇಸಿ ಸಂಸ್ಥೆಯಿಂದ ಪ್ರತಿವರ್ಷವೂ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ’ ಎಂದರು.

ವೇದಿಕೆಯಲ್ಲಿ ಆಸ್ಪತ್ರೆಯ ವೈದ್ಯರಾದ ಮಂಜುಳಾ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್, ಡಾಲ್ಫಿನ್ಸ್‌ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮಹೇಶ್, ಜೇಸಿಐ ಕಾರ್ಯದರ್ಶಿ ವಿನುತ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರಾಜೇಶ್ ಅವರು ಇದ್ದರು.

ಕಾರ್ಯಕ್ರಮದಲ್ಲಿ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಂತ್ರಜ್ಞರಾಗಿರುವ, 15 ಬಾರಿ ರಕ್ತದಾನ ಮಾಡಿರುವ ಚಂದ್ರಾವತಿ ಹಾಗೂ 32 ಬಾರಿ ರಕ್ತದಾನ ಮಾಡಿರುವ ವಿಜಯ್ ಹಾನಗಲ್ ಅವರನ್ನು ರಕ್ತದಾನಿಗಳ ದಿನದ ಅಂಗವಾಗಿ ಜೇಸಿ ಸಾಮಾಜಿಕ ಸೇವಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಶಿಬಿರದಲ್ಲಿ ಒಟ್ಟು 48 ಮಂದಿ ರಕ್ತದಾನ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.