ADVERTISEMENT

ಕೊಡಗು: ಜಿಲ್ಲೆಗೆ ಬೇಕು ಮೂತ್ರಪಿಂಡ ತಜ್ಞ ವೈದ್ಯರು

ಕೊಡಗಿನಲ್ಲಿ ಡಯಾಲಿಸಿಸ್‌ ಸೇವೆ ಪಡೆಯುತ್ತಿದ್ದಾರೆ 199 ಮಂದಿ

ಕೆ.ಎಸ್.ಗಿರೀಶ್
Published 13 ಮಾರ್ಚ್ 2025, 7:44 IST
Last Updated 13 ಮಾರ್ಚ್ 2025, 7:44 IST
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ತುರ್ತಾಗಿ ಮೂತ್ರಪಿಂಡ ತಜ್ಞ ವೈದ್ಯರ ಅಗತ್ಯವಿದೆ. ಇವರ ನೇಮಕಾತಿಗೆ ಪ್ರಯತ್ನಗಳು ನಡೆಯುತ್ತಿದ್ದರೂ, ಇನ್ನೂ ಕೈಗೂಡಿಲ್ಲ. ಇದರಿಂದ ಮೂತ್ರಪಿಂಡ ತಜ್ಞ ವೈದ್ಯರಿಗಾಗಿ ಹೊರ ಜಿಲ್ಲೆಯನ್ನೇ ಇನ್ನೂ ಆಶ್ರಯಿಸಬೇಕಿದೆ.

ಸದ್ಯ, ಜಿಲ್ಲೆಯಲ್ಲಿ 199 ಮಂದಿ ಡಯಾಲಿಸಿಸ್‌ಗೆ ನಿಯಮಿತವಾಗಿ ಒಳಗಾಗುತ್ತಿದ್ದಾರೆ. ಅವರಲ್ಲಿ 138 ಮಂದಿ ಪುರುಷರು, 61 ಮಂದಿ ಮಹಿಳೆಯರು ಇದ್ದಾರೆ. ಇವರಲ್ಲಿ ಕೆಲವರು ಪಕ್ಕದ ಜಿಲ್ಲೆಯವರೂ ಸೇರಿದ್ದಾರೆ. ಇನ್ನೂ 3 ಮಂದಿ ಡಯಾಲಿಸಿಸ್‌ಗಾಗಿ ಕಾಯುವವರ ಪಟ್ಟಿಯಲ್ಲಿದ್ದು, ಖಾಸಗಿ ಆಸ್ಪತ್ರೆ ಇಲ್ಲವೇ ಹೊರ ಜಿಲ್ಲೆಯ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಸೇವೆ ಪಡೆಯುತ್ತಿದ್ದಾರೆ.

ಈಗ ಜಿಲ್ಲೆಯಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆ, ಸೋಮವಾರಪೇಟೆ, ವಿರಾಜಪೇಟೆಯ ತಾಲ್ಲೂಕು ಆಸ್ಪತ್ರೆ ಹಾಗೂ ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ನಡೆಯುತ್ತಿದೆ. ಇಲ್ಲಿ ಒಟ್ಟು 29 ಡಯಾಲಿಸಿಸ್ ಯಂತ್ರಗಳಿವೆ. ದಿನಕ್ಕೆ 3 ಪಾಳಿಯಲ್ಲಿ ಡಯಾಲಿಸಿಸ್‌ ಮಾಡಲಾಗುತ್ತಿದೆ.

ADVERTISEMENT

‘ಟಿಲಿಮೆಡಿಸಿನ್’ ಮೂಲಕ ತಜ್ಞ ವೈದ್ಯರ ಸಲಹೆಗಳನ್ನು ರೋಗಿಗಳನ್ನು ಒದಗಿಸಲಾಗುತ್ತಿದೆ. ಆದರೂ, ಮೊದಲೇ ರೋಗವನ್ನು ಪತ್ತೆ ಹಚ್ಚಬೇಕಾದರೆ ಜಿಲ್ಲೆಗೆ ಒಬ್ಬರು ಮೂತ್ರಪಿಂಡ ತಜ್ಞ ವೈದ್ಯರ ಅಗತ್ಯ ಇದೆ.

ಬಹಳಷ್ಟು ಮಂದಿಯ ಕಾಯಿಲೆ ಪತ್ತೆ ಮಾಡುವಲ್ಲಿಯೇ ವಿಳಂಬವಾಗುತ್ತಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ. ಇಲ್ಲಿಯೇ ತಜ್ಞ ವೈದ್ಯರಿದ್ದರೆ ಕಾಯಿಲೆ ಪತ್ತೆ, ತಪಾಸಣೆ, ಚಿಕಿತ್ಸೆ ಸುಲಭವಾಗುತ್ತದೆ.

ಡಯಾಲಿಸಿಸ್‌ ಯಂತ್ರಗಳನ್ನು ‘ಸಿಎಸ್‌ಆರ್‌’ ನಿಧಿಯಿಂದ ಪಡೆಯಲು ಅವಕಾಶ ಇದೆ. ಸಂಘ, ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಡಯಾಲಿಸಿಸ್ ಯಂತ್ರ ನೀಡಬಹುದಾಗಿದೆ ಎಂದು ವೈದ್ಯರು ಹೇಳುತ್ತಾರೆ.

ಅನಿಯಂತ್ರಿತವಾದ ಮಧುಮೇಹ, ರಕ್ತದೊತ್ತಡ, ಅತಿಯಾದ ಮದ್ಯಪಾನ, ಧೂಮಪಾನ, ಮಾದಕವಸ್ತುಗಳ ಸೇವನೆ ಮೂತ್ರಪಿಂಡ ವೈಫಲ್ಯವಾಗಲು ಕಾರಣ ಎನಿಸಿವೆ. ಹಾಗಾಗಿ, ಮಧುಮೇಹ, ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಮದ್ಯಪಾನ, ಧೂಮಪಾನ, ತಂಬಾಕು ಸೇವನೆ, ಮಾದಕವಸ್ತುಗಳ ಸೇವನೆಯನ್ನು ಬಿಡುವುದರಿಂದ ಕೇವಲ ಮೂತ್ರಪಿಂಡ ವೈಫಲ್ಯ ಮಾತ್ರವಲ್ಲ ಅನೇಕ ಕಾಯಿಲೆಗಳಿಂದ ಪಾರಾಗಬಹುದು ಎಂದು ಸಲಹೆ ನೀಡುತ್ತಾರೆ.

ಮುಖ್ಯವಾಗಿ, ಯಾವುದೇ ಅನಾರೋಗ್ಯದ ಲಕ್ಷಣ ಕಂಡು ಬಂದರೂ ನೇರವಾಗಿ ಔಷಧ ಅಂಗಡಿಗೆ ತೆರಳಿ ಅವರ ಸಲಹೆಯ ಮೇರೆಗೆ ಔಷಧ ಸೇವಿಸುವುದು ಅಪಾಯಕಾರಿ ಎನಿಸಿದೆ. ಅದರಲ್ಲೂ, ನೋವು ನಿವಾರಕಗಳ ಅತಿಯಾದ ಸೇವನೆಯೂ ಮೂತ್ರಪಿಂಡಗಳಿಗೆ ಹಾನಿ ಮಾಡುತ್ತವೆ. ಹಾಗಾಗಿ, ಯಾವುದೇ ವಿಧವಾದ ಅನಾರೋಗ್ಯ ಉಂಟಾದರೂ ಸಂಬಂಧಿಸಿದ ವೈದ್ಯರ ಸಲಹೆ ಪಡೆಯಲೇಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶ್ರೀನಿವಾಸ್ ಹೇಳುತ್ತಾರೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ
ಈಗ ‘ಟೆಲಿಮೆಡಿಸಿನ್’ ಮೂಲಕ ಡಯಾಲಿಸಿಸ್‌ ರೋಗಿಗಳಿಗೆ ಸೇವೆ ನೀಡಲಾಗುತ್ತಿದೆ. ಮೂತ್ರಪಿಂಡ ತಜ್ಞ ವೈದ್ಯರ ನೇಮಕಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ.
–ಡಾ.ಎ.ಜೆ.ಲೋಕೇಶ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ.
ಕೊಡಗು ಜಿಲ್ಲೆಯಲ್ಲಿ 199 ಮಂದಿಗೆ ಡಯಾಲಿಸಿಸ್ ಸೇವೆ ನೀಡಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮೂತ್ರಪಿಂಡ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ.
–ಡಾ.ಶ್ರೀನಿವಾಸ್, ಜಿಲ್ಲಾ ಸರ್ವೇಕ್ಷಣಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.