
ಮಡಿಕೇರಿ: ಯಾವುದೇ ಪ್ರದೇಶದ ಹೆಸರನ್ನು ತಿರುಚದೇ, ಬದಲಾಯಿಸದೇ ಮೂಲ ಹೆಸರನ್ನೇ ಉಳಿಸಿಕೊಳ್ಳಬೇಕು ಎಂದು ಸಾಹಿತಿ ಐಚಂಡ ರಶ್ಮಿ ಮೇದಪ್ಪ ಒತ್ತಾಯಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಬುಧವಾರ ಕೊಡವ ಮಕ್ಕಡ ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ‘ಪಳೆ ತಾಲೂಕ್’ (ಕೊಡವ ಒಕ್ಕಡೊಕ್ಕಡ ಭೀರ್ಯ) ಪರಾಮರ್ಶನ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಳೆ ತಾಲೂಕನ್ನು ಈಗ ಹಳೇ ತಾಲ್ಲೂಕು ಎಂದು, ಪೆಗ್ಗಳವನ್ನು ಹೆಗ್ಗಳ ಎಂದು ಕರೆಯಲಾಗುತ್ತಿದೆ. ಹೀಗೆ, ಇನ್ನೂ ಅನೇಕ ಸ್ಥಳನಾಮಗಳನ್ನು ಬದಲಿಸಲಾಗಿದೆ. ಹೀಗೆ ಏಕೆ ಮಾಡಲಾಗುತ್ತಿದೆಯೋ ಗೊತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ಪ್ರತಿಯೊಂದು ಪ್ರದೇಶಕ್ಕೂ ಅದರದ್ದೇ ಆದ ಐತಿಹ್ಯ, ಸ್ಥಳ ಪುರಾಣ, ಸ್ವಂತಿಕೆ ಇರುತ್ತದೆ. ಸ್ಥಳನಾಮಗಳನ್ನು ಬದಲಿಸಿದಾಗ ಅವುಗಳೆಲ್ಲವೂ ಮಾಯವಾಗುತ್ತವೆ. ಆದ್ದರಿಂದ ಎಲ್ಲ ಸ್ಥಳನಾಮಗಳನ್ನು ಅದರ ಮೂಲ ಹೆಸರನ್ನೇ ಉಳಿಸಿಕೊಳ್ಳುವುದು ಮಾತ್ರವಲ್ಲ ಬಳಕೆಯನ್ನೂ ಮಾಡಬೇಕು’ ಎಂದು ಅವರು ಪ್ರತಿಪಾದಿಸಿದರು.
ನಾಪೋಕ್ಲು ಶ್ರೀಭಗವತಿ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕುಲ್ಲೇಟಿರ ಶಂಕರಿ ಚಂಗಪ್ಪ ಮಾತನಾಡಿ, ‘ಪಳೆ ತಾಲೂಕ್ ಹಿಂದಿನ ಕಾಲದಲ್ಲಿ ನಾಪೋಕ್ಲು ನಗರಕ್ಕಿಂತ ಹೆಚ್ಚು ಪ್ರಚಲಿತದಲ್ಲಿತ್ತು. ಇಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ದೇವಾಲಯವಿದೆ. ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ಗ್ರಾಮದ ಬಗ್ಗೆ ತಿಳಿದುಕೊಳ್ಳಲು ಪುಸ್ತಕ ಸಹಕಾರಿಯಾಗಿದೆ. ನಶಿಸಿಹೋಗುತ್ತಿರುವ ಇತಿಹಾಸವನ್ನು ಬರಹಗಾರರು ಪುಸ್ತಕದ ರೂಪದಲ್ಲಿ ಪರಿಚಯಿಸಿದ್ದಾರೆ, ಇದನ್ನು ಸಂಗ್ರಹಿಸಿಡುವುದು ಸೂಕ್ತ’ ಎಂದು ತಿಳಿಸಿದರು.
ಪಳೆ ತಾಲೂಕ್ ಹಾಕಿ ತಂಡದ ಮಾಲೀಕ ಅರೆಯಡ ಶೌರ್ಯ ಸೋಮಯ್ಯ ಮಾತನಾಡಿ, ‘ಪಳೆ ತಾಲ್ಲೂಕಿನ ಇತಿಹಾಸವನ್ನು ದೇಶಕ್ಕೆ ಪರಿಚಯಿಸುವುದು ನನ್ನ ಅಜ್ಜನ ಕನಸಾಗಿತ್ತು. ಆ ಕನಸನ್ನು ಲೇಖಕಿ ಐಚಂಡ ರಶ್ಮಿ ಮೇದಪ್ಪ ಅವರು ಈಡೇರಿಸಿದ್ದಾರೆ. ನಾನು ಸಾಮಾಜಿಕ ಮಾಧ್ಯಮದ ಮೂಲಕ ನಾಡಿಗೆ ಪರಿಚಯಿಸುವ ಕೆಲಸ ಮಾಡುತ್ತಿರುವೆ’ ಎಂದು ಹೇಳಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಫೆ.18ಕ್ಕೆ ಕೊಡವ ಮಕ್ಕಡ ಕೂಟ ತನ್ನ 13ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದರ ಪ್ರಯುಕ್ತ ಅಂದು ಮೂಕೊಂಡ ಪುಷ್ಪ (ದಮಯಂತಿ) ಪೂಣಚ್ಚ ಅವರ ‘ನೆನಪಿನ ಅಲೆ’ ಹಾಗೂ ‘ಸಮಗ್ರ ಸಿರಿ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಗುವುದು’ ಎಂದರು.
ಕಾಫಿ ಬೆಳೆಗಾರರಾದ ಅರೆಯಡ ಕಾಂತಿ ಸೋಮಪ್ಪ ಅವರು ಪುಸ್ತಕ ಬಿಡುಗಡೆಗೊಳಿಸಿದರು.
ನಾಪೋಕ್ಲು ಶ್ರೀಭಗವತಿ ದೇವಾಲಯದ ಪ್ರಧಾನ ಕಾರ್ಯದರ್ಶಿ ಕಂಗಾಂಡ ಜಾಲಿ ಪೂವಪ್ಪ ಹಾಗೂ ಕೊಡವ ಮಕ್ಕಡ ಕೂಟದ ಸಲಹೆಗಾರ ಕುಲ್ಲೇಟಿರ ಅಜಿತ್ ನಾಣಯ್ಯ ಭಾಗವಹಿಸಿದ್ದರು.
‘ಪಳೆತಾಲೂಕ್’ (ಕೊಡವ ಒಕ್ಕಡೊಕ್ಕಡ ಭೀರ್ಯ) ಪುಸ್ತಕವು ಪಳೆತಾಲೂಕು ಹಾಕಿ ತಂಡದ ಮಾಲೀಕರ ಕನಸಾಗಿದ್ದು ಅವರ ಸಲಹೆ ಮೇರೆಗೆ ಪುಸ್ತಕವನ್ನು ಬರೆಯಲಾಗಿದೆ. ಈ ಪುಸ್ತಕದಲ್ಲಿ ಪಳೆ ತಾಲೂಕ್‌ನ ಇತಿಹಾಸ ಹಾಗೂ ಕೊಡವ ಒಕ್ಕದ ಬಗ್ಗೆ ವಿವರಿಸಲಾಗಿದೆ’ ಎಂದು ಕೃತಿಯ ಲೇಖಕಿ ಐಚಂಡ ರಶ್ಮಿ ಮೇದಪ್ಪ ತಿಳಿಸಿದರು. ನಾಪೋಕ್ಲುವಿನಲ್ಲಿರುವ ಪಳೆತಾಲೂಕ್‌ನಲ್ಲಿ ಮೂರು ಕೇರಿಗೆ ಸೇರಿದ ಕೊಡವ ಒಕ್ಕ ಒಕ್ಕ ಕಾರೋಣ ಮನೆ ಹೆಸರಿನ ಮೂಲ ಮಂದ್ ನಮ್ಮೆನಾಳ್ ದೇವನೆಲೆ ಐನ್‌ಮನೆ ತಕ್ಕಾಮೆ ದೇವಕಾಡ್ ಅಲ್ಲಿನ ಶಿಕ್ಷಣ ಸಂಸ್ಥೆ ಹಾಕಿ ಆಟಕ್ಕೆ ಸಾಕ್ಷಿ ಸೇರಿದಂತೆ ಪ್ರತಿಯೊಂದು ವಿಷಯವನ್ನು ಪುಸ್ತಕ ರೂಪದಲ್ಲಿ ಹೊರತರಲಾಗಿದೆ ಎಂದು ಹೇಳಿದರು.
ಪ್ರಕಾಶಕ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ‘ಇಲ್ಲಿಯವರೆಗೆ ಸಂಘಟನೆ ವತಿಯಿಂದ ಪ್ರಕಾಶನ ಮಾಡಿರುವ 123 ಪುಸ್ತಕಗಳನ್ನು ಮಾರಾಟ ಮಾಡದೆ ಓದುಗರಿಗೆ ಉಚಿತವಾಗಿ ನೀಡಲಾಗಿದೆ’ ಎಂದು ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 5 ಪುಸ್ತಕಗಳಿಗೆ ‘ಗೌರಮ್ಮ ದತ್ತಿ ನಿಧಿ’ ಪ್ರಶಸ್ತಿ ಒಂದು ಪುಸ್ತಕಕ್ಕೆ ಲಭಿಸಿದೆ. 5 ಪುಸ್ತಕಗಳು ಸಿನಿಮಾವಾಗಿವೆ. ಚೆಪ್ಪುಡಿರ ಎ.ಕಾರ್ಯಪ್ಪ ಅವರ ‘ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ’ ಪುಸ್ತಕದ 1500 ಪ್ರತಿಗಳನ್ನು ಶಾಲಾ-ಕಾಲೇಜು ಗ್ರಂಥಾಲಯಗಳಿಗೆ ಉಚಿತವಾಗಿ ನೀಡಲಾಗಿದೆ’ ಎಂದು ತಿಳಿಸಿದರು.
ಪುಸ್ತಕದ ಹೆಸರು: ಪಳೆ ತಾಲ್ಲೂಕ್ (ಕೊಡವ ಒಕ್ಕಡೊಕ್ಕಡ ಭೀರ್ಯ)
ಲೇಖಕಿ: ಐಚಂಡ ರಶ್ಮಿ ಮೇದಪ್ಪ
ಪ್ರಕಾಶನ: ಕೊಡವ ಮಕ್ಕಡ ಕೂಟ
ಪುಟಗಳ ಸಂಖ್ಯೆ: 144
ಪುಸ್ತಕದ ಬೆಲೆ: ₹ 200