ADVERTISEMENT

ಅಡುಗೆ ಮಾಡುವ ರಜಪೂತ ವಂಶಸ್ಥರು

ಸುಮಾರು 35 ಕುಟುಂಬಗಳಿಂದ ಮುಂದುವರೆದ ಪರಂಪರೆ

ಎಂ.ರಾಮಕೃಷ್ಣಪ್ಪ
Published 17 ಜನವರಿ 2016, 9:17 IST
Last Updated 17 ಜನವರಿ 2016, 9:17 IST
ವಸಂತಹಳ್ಳಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಆವರಣ.
ವಸಂತಹಳ್ಳಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಆವರಣ.   

ಯುದ್ಧದಲ್ಲಿ ಶೌರ್ಯ, ಸಾಹಸ ಮೆರೆದಂತಹ ಹಿನ್ನೆಲೆಯುಳ್ಳ ಕುಟುಂಬ ಸದಸ್ಯರು ಇಂದು ಬಾಣಸಿಗ ವೃತ್ತಿಯಿಂದ  ಜೀವನ ನಡೆಸುತ್ತಿದ್ದಾರೆ. ರಾಜಮರ್ಯಾದೆ ಮತ್ತು ವೈಭವದ ಆಳ್ವಿಕೆ ನಡೆಸಿದ ಪ್ರತಿಷ್ಠಿತ ಮನೆತನದ ಸದಸ್ಯರು ಈಗ ಕಷ್ಟದ ಬದುಕು ನಡೆಸಿದ್ದಾರೆ. ಅವರೆಲ್ಲರೂ ಚಿಂತಾಮಣಿ ತಾಲ್ಲೂಕಿನ ವಸಂತಹಳ್ಳಿಯಲ್ಲಿ ಇದ್ದಾರೆ.

ಚಿಂತಾಮಣಿಯಿಂದ ಸುಮಾರು 15 ಕಿ.ಮೀ. ದೂರದ ಕೋಟಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸಂತಹಳ್ಳಿಯಲ್ಲಿ 35 ಕುಟುಂಬಗಳಿವೆ. ಎಲ್ಲ ಕುಟುಂಬಗಳು ಯುದ್ಧದಲ್ಲಿ ಶೌರ್ಯ ಸಾಹಸ ಮೆರೆಯುವ ರಜಪೂತ ವಂಶಕ್ಕೆ ಸೇರಿದವರು. ಇತ್ತೀಚೆಗೆ ಪರಿಶಿಷ್ಟ ಜನಾಂಗಕ್ಕೆ ಸೇರಿದ 2 ಕುಟುಂಬಗಳು ಈ ಗ್ರಾಮದಲ್ಲಿ ನೆಲೆಸಿವೆ.

ರಜಪೂತ  ಜನಾಂಗದವರು ಇಂತಹ ಸಣ್ಣ ಗ್ರಾಮದಲ್ಲಿ ವಾಸವಾಗಿರುವುದೇ ವಿಶೇಷವಾಗಿದೆ. ಇವರ ಪೂರ್ವಿಕರು ಇಲ್ಲಿಗೆ ಬಂದಿರುವ ಹಿನ್ನೆಲೆಯೇ ಇವರಿಗೆ ಗೊತ್ತಿಲ್ಲ. ಎಲ್ಲ 35 ಕುಟುಂಬಗಳು ಹಿಂದಿಯಲ್ಲಿ ಮಾತನಾಡುತ್ತಾರೆ. ಗಂಡಸರು ಅಡುಗೆ ಕೆಲಸಕ್ಕೆ ಹೋದರೆ, ಮಹಿಳೆಯರು ಮನೆ ಮತ್ತು ವ್ಯವಸಾಯ ಕೆಲಸ ಮಾಡುತ್ತಾರೆ.

ಇವರ ಮೂಲ ಉತ್ತರ ಭಾರತದ ರಾಜಾಸ್ತಾನ್‌. ಸ್ವಾತಂತ್ರ್ಯಪೂರ್ವ ಬ್ರಿಟಿಷ್‌ರ ಕಾಲದಲ್ಲಿ ಈ ಕುಟುಂಬದ ಪೂರ್ವಜರು ಸೈನ್ಯದಲ್ಲಿ ಸೈನಿಕರಾಗಿ ಕೆಲಸ ಮಾಡುತ್ತಿದ್ದರು. 1857ರ ದಂಗೆ ನಂತರ ಬ್ರಿಟಿಷರ ಒಡೆದು ಆಳುವ ತಂತ್ರದಿಂದ ರಾಜಸ್ಥಾನ್‌ ರೆಜಿಮೆಂಟ್‌ನಲ್ಲಿ ಇದ್ದವರನ್ನು ಬೇರೆ ಬೇರೆ ಕಡೆ ವರ್ಗಾಯಿಸುತ್ತಾರೆ. ಅವರಲ್ಲಿ ಕೆಲ ಕುಟುಂಬಗಳು ಬೆಂಗಳೂರಿನ ದಂಡು ಪ್ರದೇಶದಲ್ಲಿ ನೆಲೆಸಿದವು ಎಂದು ಇತಿಹಾಸ ತಜ್ಞ ಡಾ.ಎಂ.ಎನ್‌.ರಘು ‘ಪ್ರಜಾವಾಣಿ’ಗೆ ತಿಳಿಸಿದರು.

ದೇಶಕ್ಕೆ 1947ರಲ್ಲಿ ಸ್ವಾತಂತ್ರ್ಯ ಬಂದ ನಂತರ ಉತ್ತರ ಭಾರತದ ಕಡೆ ಹೋಗಲಾಗದೆ ಕೆಜಿಎಫ್‌ನ ಚಿನ್ನದ ಗಣಿಗಳ ಸಂರಕ್ಷಣೆಗಾಗಿ ನೇಮಕಗೊಳ್ಳುತ್ತಾರೆ. ಹೀಗಾಗಿ ಜೀವನೋಪಾಯಕ್ಕಾಗಿ ಉದ್ಯೋಗಗಳನ್ನು ಅರಸುತ್ತಾ ಅಲೆಮಾರಿಗಳಾದರು. ಅವರವರಿಗೆ ಅನುಕೂಲಕ್ಕೆ ತಕ್ಕಂತೆ ಇಷ್ಟವಾದ ಕಡೆಗಳಲ್ಲಿ ಬಂದು ನೆಲೆಸಿದರು. ಬ್ರಿಟಿಷ್‌ ಸೈನ್ಯದಲ್ಲಿ ಕೆಲಸ ಮಾಡಿರುವ ಆಧಾರವೂ ಇದೆ ಎಂದು ಅವರು ತಿಳಿಸಿದರು.

ಪ್ರಸ್ತುತ ವಸಂತಪುರ ಗ್ರಾಮದಲ್ಲಿ ಪ್ರತಿಯೊಂದು ಕುಟುಂಬದವರು ಅಡುಗೆ ಕೆಲಸವನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ಕೆಲವು ಕುಟುಂಬಗಳಿಗೆ 1 ಅಥವಾ 2 ಎಕೆರೆ ಮಳೆಯಾಶ್ರಿತ ಭೂಮಿ ಇದೆ. ಮಹಿಳೆಯರು ಮಳೆಯಾದರೆ ಅಲ್ಪ–ಸ್ವಲ್ಪ ಕೃಷಿಯನ್ನು ಮಾಡುತ್ತಾರೆ. ಚಿಂತಾಮಣಿಯಿಂದ ಎನ್‌.ಕೊತ್ತೂರು ರಸ್ತೆಯಲ್ಲಿ ಬರುವ ಗ್ರಾಮ ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.

ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಿಲ್ಲ, ಮಿನಿ ಅಂಗನವಾಡಿ ಕೇಂದ್ರವಿದ್ದು, 15 ಮಕ್ಕಳಿದ್ದಾರೆ. ಸ್ವಂತ ಕಟ್ಟಡವಿಲ್ಲದೆ ಸಣ್ಣ ಹಳೆಯ ಕೊಠಡಿಯಲ್ಲಿ ನಡೆಯುತ್ತಿದೆ. ಪಕ್ಕದಲ್ಲಿ ಗಿಡ–ಗಂಟೆಗಳಿದ್ದು ಹಾವು, ಹುಳು ಉಪ್ಪಟೆಗಳ ಭಯದಿಂದ ಮಕ್ಕಳು ಬದುಕಬೇಕಾಗಿದೆ.

ಗ್ರಾಮದಲ್ಲಿ ಪದವಿ ಪಡೆದವರು ಯಾರು ಇಲ್ಲ. ಇತ್ತೀಚೆಗೆ 6–7 ಜನರು ಪದವಿ ಕಾಲೇಜಿಗೆ ಹಾಗೂ 8–10 ಜನ  ಪದವಿಪೂರ್ವ ಕಾಲೇಜಿಗೆ ಹೋಗುತ್ತಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ನೆಲೆಸಿರುವ ಸಿಂಗ್‌ ಸಮುದಾಯದಲ್ಲೇ ವೈವಾಹಿಕ ಸಂಬಂಧ ಬೆಳಸಿದ್ದಾರೆ.

ಅವರ ಪೂರ್ವಿಕರ ಆಚಾರ, ವಿಚಾರಗಳು ಹಾಗೂ ಪದ್ಧತಿಗಳನ್ನು ಬಹುತೇಕ ಮರೆತಿದ್ದಾರೆ. ಹಬ್ಬ–ಹರಿದಿನಗಳನ್ನು ಹಿಂದೂಗಳ ರೀತಿಯಲ್ಲೇ ಆಚರಿಸುತ್ತಾರೆ. ‘ಭವಾನಿ ಮಾತಾ’ ಮನೆ ದೇವರು ಎಂದು ಪೂಜಿಸುತ್ತೇವೆ ಎಂದು ಗ್ರಾಮದಲ್ಲಿ ಪಿಯುಸಿ ವ್ಯಾಸಂಗ ಮಾಡಿರುವ ಏಕೈಕ ಮಹಿಳೆ ಅಮೃತಾಬಾಯಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.