ADVERTISEMENT

ಅತಂತ್ರ ಸ್ಥಿತಿಯಲ್ಲಿ ಪುಷ್ಕರಣಿ ಪುನಶ್ಚೇತನ

ನಗರ ಸಂಚಾರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 8:39 IST
Last Updated 3 ಮಾರ್ಚ್ 2014, 8:39 IST

ಕೋಲಾರ: ಜಿಲ್ಲೆಗೆ ಬೇಸಿಗೆ ಕಾಲಿಡುತ್ತಿದೆ. ಇದಕ್ಕಾಗಿ ಮಳೆ ನೀರು ಸಂಗ್ರಹಕ್ಕೆ ತಕ್ಕ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತ, ಜನಪ್ರತಿನಿಧಿಗಳು ಹೇಳುತ್ತಿದ್ದಾರೆ. ಆದರೆ ಮಾತು ಕೃತಿಗೆ ಇಳಿಯದ ಸನ್ನಿವೇಶ ಜಿಲ್ಲಾ ಕೇಂದ್ರವಾದ ನಗರದಲ್ಲೇ ನಿರ್ಮಾಣವಾಗಿದೆ.

ನಗರದ ರಾಜಕಾಲುವೆಗಳ ಒತ್ತುವರಿ ತೆರವಿಗೆ ಮುನ್ನ ನಡೆಯಬೇಕಾದ ಸಮೀಕ್ಷೆಯು ಸರ್ವೇಯರ್‌ಗಳ ಕೊರತೆ ಕಾರಣದಿಂದ ಸ್ಥಗಿತಗೊಂಡಿದೆ. ಸರಿಯಾಗಿ ಒಂದು ತಿಂಗಳ ಹಿಂದೆ ಜನವರಿ ಕೊನೆ ವಾರದಲ್ಲಿ ಶುರುವಾಗಿದ್ದ ನಗರದ ಟೇಕಲ್ ವೃತ್ತದ ವೇಣುಗೋಪಾಲಸ್ವಾಮಿ ಪುಷ್ಕರಣಿ ಅಭಿವೃದ್ಧಿ ಕಾಮಗಾರಿಯು ಮತ್ತೆ ಸ್ಥಗಿತಗೊಂಡಿದೆ. ಆಕಾರ ಕಳೆದುಕೊಂಡ ಸ್ಥಿತಿಯಲ್ಲಿ ಪುಷ್ಕರಣಿಯು ಅತಂತ್ರ ಸ್ಥಿತಿಯನ್ನು ತಲುಪಿದೆ. ಮತ್ತೆ ಅದು ಬಯಲು ಶೌಚಾಲಯವಾಗಿ ಬಳಕೆಯಾಗುತ್ತಿದೆ. ವಿಪರ್ಯಾಸವೆಂದರೆ, ಅದರ ಇರುವಿಕೆಯನ್ನು ಸಾಬೀತುಪಡಿಸುತ್ತಿದ್ದ ಫಲಕವನ್ನು ಗುತ್ತಿಗೆದಾರರು ಕಿತ್ತುಹಾಕಿದ್ದಾರೆ.

ಎಷ್ಟು ತೆಗೆದರೂ ನೀರು ಜಿನುಗುತ್ತಲೇ ಇದೆ. ಎಷ್ಟು ಅಗೆದರೂ ಮಣ್ಣು ಕಡಿಮೆಯಾಗುತ್ತಿಲ್ಲ.. ಈ ಸನ್ನಿವೇಶದಲ್ಲಿ ಪುಷ್ಕರಣಿಯನ್ನು ಹೇಗೆ ಅಭಿವೃದ್ಧಿಪಡಿಸುವುದೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ಎಂಜಿನಿಯರೊಬ್ಬರು.

ನಗರಸಭೆಯ ವತಿಯಿಂದ ₨ 30 ಲಕ್ಷ ವೆಚ್ಚದಲ್ಲಿ ಪುಷ್ಕರಣಿಯನ್ನು ಅಭಿವೃದ್ಧಿಪಡಿಸುವ ಕಾಮಗಾರಿ ಇದಾಗಿತ್ತು.

30 ಲಕ್ಷ? 75 ಲಕ್ಷ?: ಈ ಪುಷ್ಕರಣಿಯನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬ ಯೋಜನೆಯನ್ನು ಆಧರಿಸಿ ಅದರ ವೆಚ್ಚವನ್ನು ಅಂದಾಜು ಮಾಡ­ಬೇಕು. ವಿಪರ್ಯಾಸವೆಂದರೆ, ಹಾಗೆ ಮಾಡದೆಯೇ ₨ 75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಮಾತನ್ನೂ ನಗರಸಭೆಯು ಆಡಳಿತಾಧಿಕಾರಿಗಳಾದ ಜಿಲ್ಲಾಧಿಕಾರಿಗೆ ಹೇಳಿದೆ. ಇರುವ ಹಣದಲ್ಲೇ ಕಲ್ಯಾಣಿಯನ್ನು ಸಾಧ್ಯವಾದಷ್ಟು ಪುನಶ್ಚೇತನಗೊಳಿಸಿ ಎಂದು ಅವರು ಹೇಳಿ ಹಲವು ದಿನಗಳಾದರೂ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ. ಹೀಗಾಗಿಯೇ ಪುಷ್ಕರಣಿ ಮತ್ತೆ ಅತಂತ್ರಗೊಂಡಿದೆ.

ಬೆೇಲಿಯೂ ಇಲ್ಲ: ನಗರೋತ್ಥಾನ 21ರ ಅಡಿಯಲ್ಲಿ ಕಳಪೆ ರಸ್ತೆ ಕಾಮಗಾರಿಗಳ ಮೂಲಕ ನಗರಸಭೆ ಅಧಿಕಾರಿಗಳು  ಜಿಲ್ಲಾಧಿಕಾರಿ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಹಣವಿದ್ದರೂ, ಅದನ್ನು ಬಳಸಿ ಪುಷ್ಕರಣಿ ಪುನಃಶ್ಚೇತನಕ್ಕೊಂದು ಸ್ಪಷ್ಟ ರೂಪ ಕೊಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವ ಅಧಿಕಾರಿಗಳ ಕಡೆಗೆ, ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ಕೆ.ರವಿ ಮತ್ತೆ ಗಂಭೀರ ಗಮನ ಹರಿಸಬೇಕು ಎಂಬುದು ನಿವಾಸಿಗಳಾದ ರಾಮಚಂದ್ರ, ರಮೇಶ್, ಕೃಷ್ಣಮೂರ್ತಿ, ನಾಗರಾಜ್ ಅವರ ಆಗ್ರಹ.
‘ವೇಣುಗೋಪಾಲ ಪುಷ್ಕರಣಿಯನ್ನು ₨ 75 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕುರಿತು ನಗರಸಭೆ ಪೌರಾಯುಕ್ತರು ನಮ್ಮೊಡನೆ ಚರ್ಚಿಸಿದ್ದರು.

ಆದರೆ 30 ಲಕ್ಷ ವೆಚ್ಚದಲ್ಲೇ ಅಭಿವೃದ್ಧಿಪಡಿಸಿ ಎಂದು ಅವರಿಗೆ ಸೂಚಿಸಲಾಗಿತ್ತು. ನಂತರ ಏನಾಯಿತು ಎಂಬ ಬಗ್ಗೆ ತಿಳಿದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.