ಮಾಲೂರು: ತಾಲ್ಲೂಕಿನ ಸಂತೇಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಕಂದಾಯ ಇಲಾಖೆ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿ ರೈತರ 399 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಯಿತು.
ತಹಶೀಲ್ದಾರ್ ಡಾ.ಸುಧಾ ಪಾಯ್ಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅದಾಲತ್‌ನಲ್ಲಿ ಅರಳೇರಿ, ಮೈಲಾಂಡಹಳ್ಳಿ, ಸಂತೇಹಳ್ಳಿ ಮತ್ತು ಕುಡಿಯನೂರು ಗ್ರಾಮಸ್ಥರು ಪಾಲ್ಗೊಂಡಿದ್ದರು.
ಅರ್ಜಿಗಳನ್ನು ಸ್ವೀಕರಿಸಿದ ತಹಶೀಲ್ದಾರ್ ಡಾ.ಸುಧಾ ಮಾತನಾಡಿ ತಾಲ್ಲೂಕಿನ ಟೇಕಲ್, ಮಾಸ್ತಿ, ಲಕ್ಕೂರು ಮತ್ತು ಕಸಬಾ ಹೋಬಳಿಗಳಲ್ಲಿ ಕಂದಾಯ ಅದಾಲತ್‌ಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಇತ್ಯರ್ಥವಾಗದ ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಗಿದೆ. ಮಾ.5ರವರೆಗೆ ಕಸಬಾ ಹೋಬಳಿ, ಮಡಿವಾಳ ಬೈರ್ನಹಳ್ಳಿ ಮತ್ತು ದೊಡ್ಡಕಡತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಅದಾಲತ್ ನಡೆಯಲಿದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಕಂದಾಯ ಇಲಾಖೆ ಅಧಿಕಾರಿ ಕೆ.ಆರ್.ಬೀರಪ್ಪ, ಗ್ರಾಮ ಲೆಕ್ಕಿಗರಾದ ಶಂಕರ್, ವೆಂಕಟೇಶ್, ನಾರಾಯಣಸ್ವಾಮಿ, ರವಿಕುಮಾರ್, ಶ್ರೀನಿವಾಸ್, ಶಿಲ್ಪ, ಮೋನಿಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.