ADVERTISEMENT

ಆದಿಮದ ಅಂಗಳದಲ್ಲಿ ಕಾವ್ಯ ಬೆಳದಿಂಗಳು!

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 9:01 IST
Last Updated 21 ಸೆಪ್ಟೆಂಬರ್ 2013, 9:01 IST

ಕೋಲಾರ: ನಗರದ ಹೊರವಲಯದ ತೇರಳ್ಳಿಯ ಆದಿಮ ಸಾಂಸ್ಕೃತಿಕ ಸಂಘ­ಟನೆಯ ಆವರಣದಲ್ಲಿ ಗುರುವಾರ ರಾತ್ರಿ ನಡೆದ 89ನೇ ಹುಣ್ಣಿಮೆ ಹಾಡು ಎಂದಿನಂತೆ ಇರಲಿಲ್ಲ. ಇಡೀ ರಾತ್ರಿ ಬೆಳಕು ಚೆಲ್ಲಿದ ಚಂದ್ರನ ಜೊತೆ ಪೈಪೋಟಿಗೆ ಇಳಿದಂತೆ ಕಾವ್ಯ ಬೆಳದಿಂಗಳು ಹಬ್ಬಿತ್ತು.

ಏಕಾಂತ ಮತ್ತು ಲೋಕಾಂತದ ಕಾವ್ಯ, ಕಾವ್ಯಗಳಲ್ಲಿ ರಮ್ಯವಾದ ನಾಟಕ, ಕಾವ್ಯದ ನೃತ್ಯ ರೂಪಕಗಳು ರಸಿಕರನ್ನು ನಿದ್ದೆಯಿಂದ ದೂರ ಮಾಡಿದವು. ನಡುವೆ ನಡೆದ ಗಂಭೀರ ಚರ್ಚೆಗಳು ಕಾವ್ಯ ಲೋಕದ ಕಡೆಗೆ ಹೊಸ ವ್ಯಾಖ್ಯಾನ­ಗಳನ್ನು ಎಸೆದರು. ರಾತ್ರಿ 7 ಗಂಟೆಗೆ ಶುರುವಾದ ‘ಅಹೋರಾತ್ರಿ ಕವಿಗೋಷ್ಠಿ’ ಬೆಳಗಿನ ಜಾವದವರೆಗೂ ಲೇಖಕರು, ವಿಮರ್ಶಕರು, ಕವಿಗಳು, ಕಲಾವಿದ­ರೆಲ್ಲರನ್ನೂ ಒಟ್ಟಿಗೆ ಬೆಸೆದಿದ್ದವು.

ಇದೇ ಮೊದಲ ಬಾರಿಗೆ ಹುಣ್ಣಿಮೆಯ ರಾತ್ರಿಯಿಡೀ ಆದಿಮದ ಅಂಗಳದಲ್ಲಿ ಕಾವ್ಯದ ಬೆಳದಿಂಗಳು ಹಬ್ಬಿತ್ತು. ಜಿಲ್ಲೆಯಲ್ಲಿ ಇಂಥದೊಂದು ಕಾರ್ಯಕ್ರಮ ನಡೆದಿದ್ದು ಇದೇ ಮೊದಲು.

ಜಿಲ್ಲೆಯ ಪರಿಸರ ಪ್ರೇಮಿ ಮತ್ತು ಕವಿ ಸೋಮಶೇಖರ ಗೌಡರ ನೆನಪಿನಲ್ಲಿ ನಡೆದ ಕಾರ್ಯಕ್ರಮಕ್ಕೆ, ಅವರದೇ ‘ಥೋರೋ’ಎಂಬ ಪದ್ಯವನ್ನು ಓದುವ ಮೂಲಕ ಆದಿಮ ಅಧ್ಯಕ್ಷ ಕೋಟಿಗಾನ­ಹಳ್ಳಿ ರಾಮಯ್ಯ ಚಾಲನೆ ನೀಡಿದರು.

ನಂತರ ಆಜೀವಕ ಗುರುಕುಲದ ರಂಗ­ವಿದ್ಯಾರ್ಥಿಗಳು ಜನಪದ ಗೀತೆಗಳನ್ನು ಆಧರಿಸಿದ ‘ಕಿನ್ನೂರಿ ನುಡಿದೋ’ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. ಮಂಜುನಾಥ ಕಗ್ಗೆರೆ ಅವರು ಕವಿ ಎಚ್.ಎಸ್.ಶಿವಪ್ರಕಾಶರ ‘ಸಿಂಗಿರಾಜನ ಸಂಪಾದನೆ’ ನಾಟಕದ ಏಕವ್ಯಕ್ತಿ ಪ್ರದ­ರ್ಶನವನ್ನು ನಡೆಸಿಕೊಟ್ಟರು.

ದೇವನೂರ ಮಹಾದೇವ ಕುಸುಮಬಾಲೆ ಕೃತಿಯ ಭಾಗಗಳನ್ನೂ ಓದಿದರು. ಈ ನಡುವೆ ತೆಲುಗು ಸಾಹಿತಿ ಚಲಂ ನಿರ್ದೇಶನದ ಕಿರು ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಯಿತು.

ಸಿ.ಎ.ರಮೇಶ, ವೆಂಕಟರಮಣ, ಪ್ರದೀಪ್ ಮಾಲ್ಗುಡಿ, ನ.ಗುರು­ಮೂರ್ತಿ, ದೊಡ್ಡಕಲ್ಲಳ್ಳಿ ನಾರಾ­ಯಣಪ್ಪ, ನಾಗತಿಹಳ್ಳಿ ರಮೇಶ್, ಡಾ.ಜಿ.ಶಿವಪ್ಪ ಕವಿತೆಗಳನ್ನು ಓದಿದರು. ಆದಿಮದ ನಾಯಕ್, ನಾರಾಯಣ­ಸ್ವಾಮಿ, ಬೆಂಗಳೂರಿನ ಭವಾನಿ ನೇತೃ­ತ್ವದ ತಂಡದ ಕಲಾವಿದರಾದ ಜನಪದ ಗಾಯನವನ್ನು ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.