ADVERTISEMENT

ಆಲಿಕಲ್ಲು ಮಳೆ, ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಮೇ 2018, 12:23 IST
Last Updated 19 ಮೇ 2018, 12:23 IST
ಆಲಿಕಲ್ಲು ಮಳೆ, ಬೆಳೆ ಹಾನಿ
ಆಲಿಕಲ್ಲು ಮಳೆ, ಬೆಳೆ ಹಾನಿ   

ಬಂಗಾರಪೇಟೆ: ತಾಲ್ಲೂಕಿನ ಬೂದಿಕೋಟೆಯಲ್ಲಿ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ರೈತರ ಬೆಳೆ, ನರ್ಸರಿಗಳು ನಾಶವಾಗಿದ್ದು, ಮರಗಳು ನೆಲಕ್ಕೆ ಉರಳಿಬಿದ್ದಿವೆ.

ಗ್ರಾಮದ ಸುರೇಶ್ ಅವರ ಕ್ಯಾಪ್ಸಿಕಂ ತೋಟ, ರಾಮಪ್ಪ ಅವರ ಟೊಮೆಟೊ, ಕೋಸು ನಷ್ಟ ಉಂಟಾಗಿದೆ. ಕಾಲುಗಡ್ಡೆ ರಾಮಪ್ಪ, ಬೂದಿಕೋಟೆಯ ಮುನಿವೆಂಕಟಪ್ಪ, ಮಂಜುನಾಥ್, ಕೋಲಾರ ನಾರಾಯಣಪ್ಪ ಅವರ ನರ್ಸರಿಗಳು ಸಂಪೂರ್ಣ ಹಾಳಾಗಿದೆ. ನರ್ಸರಿಗೆ ಹೊದಿಸಿದ್ದ ಹಸಿರು ನಟ್‌ಗಳು ಕೂಡ ಸಂಪೂರ್ಣ ಹರಿದು ಹೋಗಿವೆ.

ವಿದ್ಯುತ್ ಕಂಬಗಳು ಮುರಿದು ಬಿದ್ದು, ಬೂದಿಕೋಟೆ ಮತ್ತು ಕಾಮಸಮುದ್ರ ಹೋಬಳಿಗೆ ವಿದ್ಯುತ್ ಸಂಪರ್ಕ ತಾತ್ಕಾಲಿಕವಾಗಿ ಕಡಿತಗೊಂಡಿದೆ. ಪಟ್ಟಣ-ಬೂದಿಕೋಟೆ ಮಾರ್ಗದ ಇಕ್ಕೆಲದಲ್ಲಿನ ಹಲ ಮರಗಳು ನೆಲಕ್ಕೆ ಉರುಳಿ ಸಂಚಾರಕ್ಕೆ ಅಡಚಣೆಯಾಯಿತು.

ADVERTISEMENT

ಸಮೀಪದ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸಂಚರಕ್ಕೆ ಅನುವು ಮಾಡಿದರು. ರಸ್ತೆ ಪಕ್ಕದಲ್ಲಿನ ಮರಗಳು ಅಲ್ಲದೆ ಖಾಸಗಿ ಜಮೀನಲ್ಲಿದ್ದ ಮರಗಳು ಮುರಿದು ಬಿದ್ದಿವೆ. ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ಮೂಲಗಳು ತಿಳಿಸಿದೆ.

ಸುಮಾರು ನಾಲ್ಕು ಗಂಟೆಗೆ ಆರಂಭವಾದ ಮಳೆ ತಾಲ್ಲೂಕಿನ ಬಹುತೇಕ ಕಡೆ ಸುರಿದಿದೆ. ಬೂದಿಕೋಟೆ ಹೋಬಳಿ ಕೇಂದ್ರದಲ್ಲಿ ನಾಲ್ಕೈದು ಕಿಲೋ ಗ್ರಾಮ ತೂಕದ ಆಲಿಕಲ್ಲುಗಳು ಬಿದ್ದಿವೆ.

ಬೂದಿಕೋಟೆ ಹೋಬಳಿ ಕೇಂದ್ರದಲ್ಲಿ ಸುರಿದ ಜೋರು ಮಳೆಗೆ ರಸ್ತೆಗಳು ತುಂಬಿ ಹರಿದಿವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆಗಳ ಮೇಲೆ ಹರಿದು ಕೆಸರುಮಯವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.