ADVERTISEMENT

ಕಡ್ಡಾಯ ಶಿಕ್ಷಣಕ್ಕೆ ವಿರೋಧವಿಲ್ಲ: ಕುಸ್ಮಾ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 8:40 IST
Last Updated 9 ಜುಲೈ 2012, 8:40 IST

ಕೋಲಾರ: ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ವಿರೋಧಿಸುತ್ತಿಲ್ಲ. ಆದರೆ ಅದರ ಅನುಷ್ಠಾನದಲ್ಲಿ ಸರ್ಕಾರ ಹೇರಿರುವ ಕೆಲವು ನಿಬಂಧನೆಗಳನ್ನು ಮಾತ್ರ ವಿರೋಧಿಸಲಾಗುತ್ತಿದೆ ಎಂದು ಕರ್ನಾಟಕ ಅನುದಾನ ರಹಿತ ಶಾಲೆಗಳ ಸಂಘದ (ಕುಸ್ಮಾ) ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್.ಶರ್ಮ ಹೇಳಿದರು.

ನಗರದ ಶಂಕರ ವಿದ್ಯಾಲಯದಲ್ಲಿ ಈಚೆಗೆ ನಡೆದ ಜಿಲ್ಲಾ ಮಟ್ಟದ ಖಾಸಗಿ ಶಾಲೆಗಳ ಸಮಾವೇಶದಲ್ಲಿ ಮಾತನಾಡಿ, ಕಾಯಿದೆ ಅನುಷ್ಠಾನದಲ್ಲಿರುವ ತೊಡಕುಗಳನ್ನು ನಿವಾರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿ ಎರಡು ತಿಂಗಳಾದರೂ ಮಾತುಕತೆಗೆ ಆಹ್ವಾನ ಬಂದಿಲ್ಲ. ಪತ್ರಿಕೆಗಳಲ್ಲಿ ಮಾತ್ರ ಸರ್ಕಾರ ಮಾತುಕತೆಗೆ ಕರೆದರೂ `ಕುಸ್ಮಾ~ ಬರುತ್ತಿಲ್ಲ ಎಂದು ಶಿಕ್ಷಣ ಸಚಿವರು ಸುಳ್ಳು ಹೇಳುತ್ತಿದ್ದಾರೆ ಎಂದರು.

ಶಿಕ್ಷಣ ಸಚಿವರು ಅಧಿಕಾರಿಗಳಿಗೆ ಕಿವಿಕೊಡುತ್ತಿದ್ದಾರೆ. ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಮಸ್ಯೆಗಳನ್ನು ಆಲಿಸಲು ನಿರಾಕರಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯನ್ನು ಶಿಕ್ಷೆ ನೀಡುವ ಇಲಾಖೆಯನ್ನಾಗಿ ಪರಿವರ್ತಿಸಿದ್ದಾರೆ ಎಂದು ದೂರಿದರು.

ಸರ್ಕಾರದ ವಿರುದ್ಧ ಹಲವು ತೀರ್ಪುಗಳು ಬಂದಿದ್ದರೂ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಬಳಿಗೆ ಹೋದರೆ ಕೋರ್ಟ್‌ಗೆ ಹೋಗಿದ್ದೀರಲ್ಲ, ಅಲ್ಲೇ ಕೇಳಿ ಎಂದು ಹೀಯಾಳಿಸುತ್ತಿದ್ದಾರೆ. ಪೋಷಕರನ್ನು ಆಡಳಿತ ಮಂಡಳಿಗಳ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದರು.

`ಕುಸ್ಮಾ~ದ ಕಾರ್ಯದರ್ಶಿ ಮರಿಯಪ್ಪ, ಶಿಕ್ಷಣ ಸಂಸ್ಥೆಗಳ ಮೇಲೆ ಭಯಾನಕ ಕಾನೂನನ್ನು ಹೇರಲಾಗುತ್ತಿದೆ. ಶಿಕ್ಷಕರಿಗೂ ಜೈಲು ವಾಸ ನೀಡುವ ಕಾನೂನನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಸರ್ಕಾರದ ಜೊತೆಗೆ ಮಾತಕತೆ ನಡೆಸೋಣವೆಂದರೆ ಉತ್ತರವನ್ನೇ ನೀಡುವುದಿಲ್ಲ ಎಂದರು.
 
ಮುಖಂಡರಾದ ಮುನಿಯಪ್ಪ, ಸದಾನಂದ, ಅಬ್ದುಲ್ ಸತ್ತಾರ್, ಗೋಪಾಲಗೌಡ, ಹನುಮಂತಣ್ಣ, ಜೋಸೆಫ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.