ADVERTISEMENT

ಕಳೆಕಟ್ಟಿದ ಜಾನುವಾರು ಜಾತ್ರೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 7:35 IST
Last Updated 5 ಮಾರ್ಚ್ 2011, 7:35 IST
ಕಳೆಕಟ್ಟಿದ ಜಾನುವಾರು ಜಾತ್ರೆ
ಕಳೆಕಟ್ಟಿದ ಜಾನುವಾರು ಜಾತ್ರೆ   

ಮುಳಬಾಗಲು: ತಾಲ್ಲೂಕಿನ ಆವಣಿ ಗ್ರಾಮದ ರಾಮಲಿಂಗೇಶ್ವರಸ್ವಾಮಿ ಜಾನುವಾರು ಜಾತ್ರೆ ಈ ವರ್ಷ ಕಳೆಕಟ್ಟಿದೆ. ಕಳೆದ ಮೂರು ದಿನಗಳಿಂದಲೂ ಜಾನುವಾರುಗಳು ನಿರಂತರವಾಗಿ ಬರುತ್ತಿವೆ.ತಾಲ್ಲೂಕಿನ ಸುತ್ತಮುತ್ತಲ ಗ್ರಾಮ, ಜಿಲ್ಲೆಯಲ್ಲದೆ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದಲೂ ಮಾರಾಟಕಕ್ಕಾಗಿ ಜಾನುವಾರುಗಳನ್ನು ತರಲಾಗಿದೆ. ಅಲ್ಲದೇ ಮಾರಾಟದ ಭರಾಟೆ ಕೂಡ ಕಳೆದ ವರ್ಷಗಳಿಗೆ ಹೋಲಿಸಿಕೊಂಡರೆ ಈ ಸಲ ಜೋರಾಗಿದ್ದು, ದನಗಳ ಬೆಲೆ ಕೂಡ ದುಪ್ಪಟ್ಟಾಗಿದೆ.

ಕನಿಷ್ಠ ಜೊತೆಗೆ 25 ಸಾವಿರ ರೂಪಾಯಿಂದ ಗರಿಷ್ಠ 1.5 ಲಕ್ಷ ಮೌಲ್ಯದವರೆಗೂ ಎತ್ತುಗಳು ಮಾರಾಟವಾಗಿವೆ. ಜಾತ್ರೆಯಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದ್ದು, ಸುಮಾರು ಐದು ಕೋಟಿ ರೂಪಾಯಿ ವ್ಯಾಪಾರ-ವಹಿವಾಟು ನಡೆಯುವ ನಿರೀಕ್ಷೆಯಿದೆ.  ಎತ್ತುಗಳು ಕೊಂಡುಕೊಂಡು ಜಾತ್ರೆಯಲ್ಲೇ ಮರುಮಾರಾಟ ಮಾಡುವ ಪ್ರಕ್ರಿಯೆಯೂ ಜೋರಾಗಿಯೇ ನಡೆದಿದ್ದು, ಲಾಭ ಕೂಡ ಹೆಚ್ಚಿದೆ ಎಂದು ಇದೇ ವ್ಯಾಪಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಹೇಳಿದರು.

ಎತ್ತಿನ ಹಲ್ಲು, ಅವುಗಳ ಮುಖ ಲಕ್ಷಣ, ಕಾಲುಗಳ ಆಕಾರ, ನೆತ್ತಿಯ ಮೇಲಿರುವ ಸುಳಿ, ಬಣ್ಣ ಇವೆಲ್ಲವನ್ನು ಲೆಕ್ಕಾಚಾರ ಹಾಕುತ್ತಿರುವುದು ವಿಶೇಷ. ಈ ಎಲ್ಲಾ ಲಕ್ಷಣಗಳಿರುವ ಎತ್ತುಗಳ ಬೆಲೆಯೂ ಹೆಚ್ಚಾಗಿರುತ್ತದೆ, ಗಿರಾಕಿಗಳು ಹೆಚ್ಚು. ದಲ್ಲಾಳಿಗಳ ಪಾತ್ರವು ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಜಾತ್ರೆಯ ಖದರಿನಿಂದಾಗಿ ಅವರೆಲ್ಲರೂ ‘ದಿಲ್ ಖುಷ್’ ಮೂಡಿನಲ್ಲಿರುವುದು ‘ಪ್ರಜಾವಾಣಿ’ಗೆ ಕಂಡುಬಂತು.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.