ADVERTISEMENT

ಕಾಂಗ್ರೆಸ್‌ ಕೋಟೆಯಲ್ಲಿ ಮುದುಡಿದ ಕಮಲ

ಕೋಲಾರ: ‘ಕೈ’ ಹಿಡಿದ ಜಿಲ್ಲೆ: ತೆನೆ ಹೊತ್ತ ಮಹಿಳೆಗೆ ಸಿಹಿ ಕಹಿಯ ಅನುಭವ

​ಪ್ರಜಾವಾಣಿ ವಾರ್ತೆ
Published 16 ಮೇ 2018, 12:58 IST
Last Updated 16 ಮೇ 2018, 12:58 IST

ಕೋಲಾರ: ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ‘ಕಮಲ’ ಮುದುಡಿದ್ದು, ‘ಕೈ’ ಪಾಳಯ ಮೇಲುಗೈ ಸಾಧಿಸಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಗೆ ಜಾರಿದ್ದು, ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವಿನ ನಗೆ ಬೀರಿದೆ.

ರಾಜ್ಯದ ‘ಮೂಡಣ ಬಾಗಿಲು’ ಎಂದೇ ಹೆಸರಾಗಿರುವ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಪ್ರಚಾರ ಆರಂಭಿಸಿದರೆ ಯಶಸ್ಸು ಶತಸಿದ್ಧ ಎಂಬ ನಂಬಿಕೆಗೆ ಕಟ್ಟುಬಿದ್ದು ಆ ಕ್ಷೇತ್ರದಿಂದಲೇ ಪ್ರಚಾರಕ್ಕೆ ಅಡಿಯಿಟ್ಟ ಕಾಂಗ್ರೆಸ್‌ ಪಾಳಯವನ್ನು ಜಿಲ್ಲೆಯ ಮತದಾರರು ಕೈ ಹಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಕಮಲ ಪಾಳಯದ ಘಟಾನುಘಟಿಗಳು ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸಿದರೂ ಬಿಜೆಪಿ ಗೆಲುವಿನ ಖಾತೆ ತೆರೆಯದೆ ತೀವ್ರ ಮುಖಭಂಗ ಅನುಭವಿಸಿದೆ.

2013ರ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಕಾಂಗ್ರೆಸ್‌ ಪಕ್ಷವು ಜಿಲ್ಲೆಯಲ್ಲಿ ಹೆಚ್ಚುವರಿಯಾಗಿ ಮೂರು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ವೃದ್ಧಿಸಿಕೊಂಡಿದೆ. ಹಿಂದಿನ ಚುನಾವಣೆಯಲ್ಲಿ ಬಂಗಾರಪೇಟೆ ಮತ್ತು ಶ್ರೀನಿವಾಸಪುರ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಜಯ ಗಳಿಸಿತ್ತು. ಈ ಬಾರಿ ಇವೆರಡೂ ಕ್ಷೇತ್ರಗಳ ಜತೆಗೆ ಕೆಜಿಎಫ್‌, ಮಾಲೂರು ಕ್ಷೇತ್ರಕ್ಕೂ ಕೈ ಪಾಳಯ ಲಗ್ಗೆಯಿಟ್ಟಿದೆ. ಅಲ್ಲದೇ, ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಎಚ್‌.ನಾಗೇಶ್‌ ಜಯಭೇರಿ ಬಾರಿಸಿದ್ದಾರೆ.

ADVERTISEMENT

ಸಿಹಿ ಕಹಿಯ ಅನುಭವ: ‘ಶಿಲ್ಪಿಗಳ ಊರು’ ಮಾಲೂರು ಕ್ಷೇತ್ರದಲ್ಲಿ ಮುಗ್ಗರಿಸಿರುವ ಜೆಡಿಎಸ್‌ಗೆ ಕೋಲಾರ ಕ್ಷೇತ್ರದಲ್ಲಿ ವಿಜಯಲಕ್ಷ್ಮಿ ಒಲಿದಿದ್ದಾಳೆ. ಮಾಲೂರು ಕ್ಷೇತ್ರದ ಹಾಲಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ಪರಾಭವಗೊಂಡಿ
ದ್ದರೆ ಇತ್ತ ಕೋಲಾರದಲ್ಲಿ ಕೆ.ಶ್ರೀನಿವಾಸಗೌಡರು ವಿಜಯ ಪತಾಕೆ ಹಾರಿಸಿದ್ದಾರೆ. ‘ತೆನೆ ಹೊತ್ತ ಮಹಿಳೆ’ಗೆ ಜಿಲ್ಲೆಯ ಮತದಾರರು ಸಿಹಿ ಕಹಿಯ ಅನುಭವ ನೀಡಿದ್ದಾರೆ.

ಕೋಲಾರ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ನಮ್ಮ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಆರ್‌.ವರ್ತೂರು ಪ್ರಕಾಶ್‌ ಪರಾಭವಗೊಂಡಿದ್ದಾರೆ. ಇನ್ನು ಕೋಲಾರಕ್ಕೆ ವಲಸೆ ಬಂದು ಕಾಂಗ್ರೆಸ್‌
ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಸೈಯದ್‌ ಜಮೀರ್‌ ಪಾಷಾ ಅವರಿಗೂ ವಿಜಯಲಕ್ಷ್ಮಿ ಒಲಿದಿಲ್ಲ.

ನೆಲ ಕಳೆದುಕೊಂಡ ಬಿಜೆಪಿ: ಬಿಜೆಪಿ ತೆಕ್ಕೆಯಲ್ಲಿದ್ದ ‘ಚಿನ್ನದ ಊರು’ ಕೆಜಿಎಫ್‌ ಕ್ಷೇತ್ರವು ‘ಕೈ’ ವಶವಾಗಿದ್ದು, ಕಮಲ ಪಾಳಯ ಈ ಕ್ಷೇತ್ರದಲ್ಲೂ ನೆಲ ಕಳೆದುಕೊಂಡಿದೆ. ಇಡೀ ಜಿಲ್ಲೆಯಲ್ಲಿ ಈ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಪಾರುಪತ್ಯ
ವಿತ್ತು. ಸಂಸದ ಕೆ.ಎಚ್‌.ಮುನಿಯಪ್ಪರ ಪುತ್ರಿ ಎಂ.ರೂಪಕಲಾ ಹಾಗೂ ಮಾಜಿ ಶಾಸಕ ವೈ.ಸಂಪಂಗಿಯವರ ಪುತ್ರಿ (ಹಾಲಿ ಶಾಸಕಿ ವೈ.ರಾಮಕ್ಕರ ಮೊಮ್ಮಗಳು) ಎಸ್‌.ಅಶ್ವಿನಿ ಅವರ ಸ್ಪರ್ಧೆಯಿಂದ ಈ ಕ್ಷೇತ್ರ ಸಾಕಷ್ಟು ಸದ್ದು ಮಾಡಿತ್ತು.

ಚುನಾವಣಾ ಕಣದಲ್ಲಿ ಮೇಲ್ನೋಟಕ್ಕೆ ರೂಪಾ ಮತ್ತು ಅಶ್ವಿನಿ ಅಭ್ಯರ್ಥಿಗಳಾಗಿದ್ದರೂ ಮುನಿಯಪ್ಪ ಹಾಗೂ ಸಂಪಂಗಿ ನಡುವಿನ ಸ್ಪರ್ಧೆ ಎಂದೇ ಬಿಂಬಿತವಾಗಿತ್ತು. ಈ ಇಬ್ಬರು ನಾಯಕರು ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗ
ಣಿಸಿ, ಪುತ್ರಿಯರ ಗೆಲುವಿಗೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಮತದಾರರು ರೂಪಕಲಾ ಅವರಿಗೆ ಗೆಲುವಿನ ಮಾಲೆ ಹಾಕಿದ್ದಾರೆ.

ಹುಸಿಯಾದ ಲೆಕ್ಕಾಚಾರ: ‘ಮಾವಿನ ಮಡಿಲು’ ಖ್ಯಾತಿಯ ಶ್ರೀನಿವಾಸಪುರ ಕ್ಷೇತ್ರದ ಮತದಾರರು ಇದೇ ಮೊದಲ ಬಾರಿಗೆ ಹೊಸ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ. ಕ್ಷೇತ್ರದಲ್ಲಿ 1983ರಿಂದ 2013ರವರೆಗೆ ನಡೆದ 8 ಚುನಾವಣೆಗಳಲ್ಲಿ ಒಂದು ಬಾರಿ ರಮೇಶ್‌ಕುಮಾರ್‌ (ಸ್ವಾಮಿ) ಗೆಲುವು ಸಾಧಿಸಿದರೆ ಮತ್ತೊಂದು ಚುನಾವಣೆಯಲ್ಲಿ ವೆಂಕಟಶಿವಾ ರೆಡ್ಡಿಗೆ (ರೆಡ್ಡಿ) ವಿಜಯಲಕ್ಷ್ಮಿ ಒಲಿದಿದ್ದಳು.

ಹಿಂದಿನಿಂದ ನಡೆದುಕೊಂಡು ಬಂದಿರುವ ಸೋಲು– ಗೆಲುವಿನ ಲೆಕ್ಕಾಚಾರದಂತೆ ಈ ಬಾರಿ ವೆಂಕಟಶಿವಾರೆಡ್ಡಿ ಗೆಲುವು ಸಾಧಿಸಬಹುದೆಂದು ರಾಜಕೀಯ ಪಂಡಿತರು ಊಹಿಸಿದ್ದರು. ಆದರೆ, ಮತದಾರರು ಕಾಂಗ್ರೆಸ್‌ನ ರಮೇಶ್‌ಕುಮಾರ್‌ ಅವರನ್ನು ಸತತ ಎರಡನೇ ಬಾರಿಗೆ ಗೆಲ್ಲಿಸುವ ಮೂಲಕ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಹುಸಿಯಾಗಿಸಿದ್ದಾರೆ.

ಮೊದಲ ಪ್ರಯತ್ನದಲ್ಲೇ ಜಯ: ಮುಳಬಾಗಿಲು ಕ್ಷೇತ್ರದಲ್ಲಿ ಎಚ್‌.ನಾಗೇಶ್‌, ಮಾಲೂರಿನಲ್ಲಿ ಕೆ.ವೈ.ನಂಜೇಗೌಡ ಹಾಗೂ ಕೆಜಿಎಫ್‌ನಲ್ಲಿ ಎಂ.ರೂಪಕಲಾ ತಮ್ಮ ಮೊದಲ ಪ್ರಯತ್ನದಲ್ಲೇ ಗೆಲುವೆಂಬ ಮಾಯಾ ಜಿಂಕೆಯ ಬೆನ್ನೇರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಕಾಕತಾಳಿಯ ಎಂಬಂತೆ ನಂಜೇಗೌಡ ಮತ್ತು ರೂಪಕಲಾ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದರು. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ನಾಗೇಶ್‌ ಅವರಿಗೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಬೆಂಬಲ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.